ಲೋಕಸಭೆ ಚುನಾವಣೆ: ‘ಕೈ’ ಪ್ರಚಾರ ಕಾರ್ಯಕ್ಕೆ ಮಾ.9 ರಂದು ರಾಹುಲ್ ಚಾಲನೆ

Update: 2019-02-22 14:21 GMT

ಬೆಂಗಳೂರು, ಫೆ. 22: ಮುಂಬರುವ ಲೋಕಸಭೆ ಚುನಾವಣೆ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದ ಮೂವತ್ತು ಜಿಲ್ಲೆಗಳ ಜಿಲ್ಲಾಧ್ಯಕ್ಷರ ಸಭೆ ನಡೆಸಿದ್ದು, ಚುನಾವಣಾ ರಣತಂತ್ರದ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಸಿದ್ದತೆಗಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಸಂಘಟಿಸಿ ಪಕ್ಷವನ್ನು ಸಜ್ಜುಗೊಳಿಸಲು ಫೆ.23ರಿಂದ ‘ಪರಿವರ್ತನಾ ಯಾತ್ರೆ’ ರಾಯಚೂರಿನಿಂದ ಪ್ರಾರಂಭಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಾರ್ಚ್ 9ರಂದು ಹಾವೇರಿಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಏರ್ಪಡಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ರಾಜ್ಯದಿಂದಲೇ ಚಾಲನೆ ನೀಡಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕಾರ್ಯಕರ್ತರು ಪ್ರತಿ ಮನೆ-ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಉತ್ತೇಜಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ದಿನೇಶ್ ಗುಂಡೂರಾವ್ ಸೂಚಿಸಿದರು.

ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಮೂವರು ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತದೆ. ಅವರು ಪ್ರತಿ ವಿಧಾನಸಭಾ ಕ್ಷೇತ್ರಗಳ ಮುಖಂಡರೊಂದಿಗೆ, ಬ್ಲಾಕ್ ಅಧ್ಯಕ್ಷರೊಂದಿಗೆ ಸಮನ್ವಯ ಸಾಧಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಾಧನೆ ಮತ್ತು ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಜನಸಂಪರ್ಕ ಅಭಿಯಾನ ಕೈಗೊಳ್ಳಬೇಕು. ಹಾಗೇಯೇ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ಮಾಡಲಾಗಿದೆ.

ಒಗ್ಗಟ್ಟಿನ ಮಂತ್ರ: ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡಬೇಕು. ಬಹಿರಂಗ ಸಭೆಗಳಿಗೆ ಒತ್ತು ನೀಡಲಾಗುವುದು, ಜಿಲ್ಲಾಧ್ಯಕ್ಷರು ಹೆಚ್ಚು ಜನರನ್ನು ಸೇರಿಸಬೇಕು. ಸ್ಥಳೀಯ ಮುಖಂಡರೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News