ಪಾಕ್ ಜತೆಗಿನ ವ್ಯಾಪಾರ ಸ್ಥಗಿತದ ಬಳಿಕ ಗಡಿ ಭಾಗದಲ್ಲಿ ಟ್ರಕ್ ‌ಗಳ ಸರತಿ ಸಾಲು

Update: 2019-02-22 18:36 GMT

 ಅಮೃತಸರ, ಫೆ.22: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ಸ್ಥಾನಮಾನವನ್ನು ಭಾರತ ಹಿಂಪಡೆದ ಪರಿಣಾಮ ಭಾರತ- ಪಾಕ್ ನಡುವಿನ ವ್ಯಾಪಾರ ವ್ಯವಹಾರ ಸ್ಥಗಿತಗೊಂಡಿದೆ. ಇದರಿಂದ ಅಟ್ಟಾರಿ ಗಡಿಭಾಗದಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿವೆ.

ಪಾಕಿಸ್ತಾನದಿಂದ ಆಮದು ವ್ಯವಹಾರವನ್ನು ತಾವು ರದ್ದುಗೊಳಿಸಿದ್ದು ತಾವು ಈಗಾಗಲೇ ಮುಂಗಡ ಪಾವತಿಸಿದ್ದ ಹಣವನ್ನು ಮರುಪಾವತಿಸುವಂತೆ ಪಾಕಿಸ್ತಾನದ ವ್ಯಾಪಾರಿಗಳಿಗೆ ಸೂಚಿಸಲಾಗಿದೆ ಎಂದು ವ್ಯಾಪಾರಿಗಳ ಸಂಘಟನೆಯ ಸದಸ್ಯರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ಪಾಕ್‌ನಿಂದ ಆಮದು ಮಾಡಿಕೊಳ್ಳುವ ಎಲ್ಲಾ ವಸ್ತುಗಳ ಮೇಲಿನ ಸುಂಕವನ್ನು ಶೇ.200ರಷ್ಟು ಹೆಚ್ಚಿಸಿದ ಬಳಿಕ ಈಗ ಸರಕು ಲೋಡ್ ಮಾಡಿರದ ಸುಮಾರು 250 ಟ್ರಕ್‌ಗಳು ಗಡಿಭಾಗದಲ್ಲಿ ನಿಂತಿವೆ ಎಂದು ಅಮೃತಸರದ ವ್ಯಾಪಾರಿ ಸುಖ್‌ಬೀರ್ ಸಿಂಗ್ ಹೇಳಿದ್ದಾರೆ. ಸುಂಕ ಹೆಚ್ಚಿಸುವ ಸರಕಾರದ ನಿರ್ಧಾರದಿಂದ ಟ್ರಕ್ ಮತ್ತು ಲಾರಿಗಳ ಮೇಲಿನ ಸಾಲದ ಕಂತು ಮರುಪಾವತಿಸಲು ಸಮಸ್ಯೆಯಾಗುತ್ತಿದೆ. ಅಲ್ಲದೆ ಗಡಿಭಾಗದಲ್ಲಿ ರುವ ಹೋಟೆಲ್‌ಗಳ ವ್ಯಾಪಾರವೂ ಕುಸಿದಿದ್ದು ಸರಕಾರ ತನ್ನ ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಮತೊಬ್ಬ ವ್ಯಾಪಾರಿ ಶರಣ್ ಸಿಂಗ್ ಹೇಳಿದ್ದಾರೆ.

ಸರಕಾರದ ನಿರ್ಧಾರವನ್ನು ಎಲ್ಲಾ ವ್ಯಾಪಾರಿ ಸಂಘಟನೆಗಳೂ ಬೆಂಬಲಿಸಬೇಕು. ಆದರೆ ಪಾಕ್‌ನೊಂದಿಗಿನ ವ್ಯಾಪಾರ ಪ್ರಕ್ರಿಯೆಯನ್ನು ಪಂಜಾಬ್ ಗಡಿಭಾಗದಲ್ಲಿ ಮಾತ್ರ ನಿಷೇಧಿಸುವುದಲ್ಲ, ಜಮ್ಮು-ಕಾಶ್ಮೀರದಲ್ಲೂ ನಿಷೇಧಿಸಬೇಕು. ಕಾಶ್ಮೀರದ ಗಡಿ ಭಾಗದಲ್ಲಿ ರಸ್ತೆ ಮಾರ್ಗದ ಮೂಲಕ ವ್ಯಾಪಾರ ವಹಿವಾಟು ಎಂದಿನಂತೆಯೇ ನಡೆಯುತ್ತಿರುವ ಕಾರಣ ಸರಕಾರದ ಆದೇಶ ನಿಷ್ಪಲವಾಗಿದೆ ಎಂದು ರಾಜ್‌ದೀಪ್ ಉಪೆಲ್ ಎಂಬ ವ್ಯಾಪಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News