ಮೇಲ್ಜಾತಿಯವರ ಒತ್ತಡದಿಂದ ನೀರು ಪೂರೈಕೆ ಸ್ಥಗಿತ ಆರೋಪ: ದಲಿತ ನಿವಾಸಿಗಳಿಂದ ಪ್ರತಿಭಟನೆ

Update: 2019-02-22 19:13 GMT

ಶಿವಮೊಗ್ಗ, ಫೆ. 22: ಮೇಲ್ಜಾತಿಯವರ ಒತ್ತಡದ ಕಾರಣದಿಂದ ತಾವು ವಾಸಿಸುತ್ತಿರುವ ಪ್ರದೇಶಕ್ಕೆ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ತಮ್ಮ ಅಹವಾಲು ಕೇಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ, ಜಿಲ್ಲೆಯ ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದ ಸೇವಾಲಾಲ್ ತಾಂಡಾದ ಗ್ರಾಮಸ್ಥರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಿಇಓ ಕಚೇರಿ ಮುಂಭಾಗ ಧರಣಿ ನಡೆಸಿದರು. 

ಮಳವಳ್ಳಿ ಗ್ರಾಮದ ಸರ್ವೇ ನಂಬರ್ 91 ಹಾಗೂ 92 ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಸುಮಾರು ಏಳೆಂಟು ಎಕರೆ ವಿಸ್ತೀರ್ಣದಲ್ಲಿ, ಕಳೆದ ಹಲವು ವರ್ಷಗಳಿಂದ ಸುಮಾರು 70 ಕ್ಕೂ ಅಧಿಕ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ. ಬಹುತೇಕ ನಿವಾಸಿಗಳು ವಸತಿ ಹಾಗೂ ಕೃಷಿ ಭೂಮಿ ರಹಿತ ಕಡುಬಡವರಾಗಿದ್ದಾರೆ. ಆದರೆ ಈ ಸ್ಥಳದಲ್ಲಿ ಕುಡಿಯುವ ನೀರು ಸೇರಿದಂತೆ, ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲವಾಗಿದೆ. ಈಗಾಗಲೇ ಹಲವು ಬಾರಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಸ್ಥಳೀಯಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಸ್ಥಳೀಯ ಮೇಲ್ಜಾತಿಯವರ ಒತ್ತಡಕ್ಕೆ ಮಣಿದು ಅಧಿಕಾರಿಗಳೂ ನೀರು ಪೂರೈಕೆಗೆ ಹಿಂದೇಟು ಹಾಕುತ್ತಿದ್ದಾರೆ. ಹಾಗೂ ಸ್ಥಳೀಯ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಕೂಡ ತಮ್ಮ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. 

ನೀರಿಗಾರಿ ಗ್ರಾಮಸ್ಥರು ಪರದಾಡುವಂತಾಗಿದ್ದು, ಸುಮಾರು 1.5 ಕಿ.ಮೀ. ದೂರಕ್ಕೆ ಹೋಗುವಂತಾಗಿದೆ. ನಮ್ಮಗಳ ಗೋಳು ಆಲಿಸುವವರು ಯಾರೂ ಇಲ್ಲದಂತಾಗಿದೆ. ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿದ್ದು, ತಕ್ಷಣವೇ ಜಿಲ್ಲಾ ಪಂಚಾಯತ್ ಸಿಇಓರವರು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಸಮರ್ಪಕ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಹೆಚ್.ಪಿ.ನರಸಿಂಗನಾಯ್ಕ್, ಶಿಕಾರಿಪುರದ ಯುವ ಮುಖಂಡ ರಾಘವೇಂದ್ರ ನಾಯ್ಕ್, ಡಿ.ಆರ್.ಗಿರೀಶ್, ಕಮಲಿಬಾಯಿ, ರಾಘವೇಂದ್ರ, ರಮೇಶ್‍ನಾಯ್ಕ್, ಪ್ರಕಾಶ್‍ನಾಯ್ಕ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News