ವೈಮಾನಿಕ ಪ್ರದರ್ಶನದ ಪಾರ್ಕಿಂಗ್‌ನಲ್ಲಿ ಅಗ್ನಿ ಅವಘಡ: 300 ಕ್ಕೂ ಅಧಿಕ ಕಾರುಗಳು ಭಸ್ಮ

Update: 2019-02-23 13:20 GMT

ಬೆಂಗಳೂರು, ಫೆ.23: ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಕಾರು ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿ 300 ಕ್ಕೂ ಅಧಿಕ ಕಾರುಗಳು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ. ಈ ವೇಳೆ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ವೈಮಾನಿಕ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು.

ವೈಮಾನಿಕ ಪ್ರದರ್ಶನ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ರೀತಿಯ ಅವಘಡಗಳು ಸಂಭವಿಸುತ್ತಿದ್ದು, ಕಳೆದ ಮಂಗಳವಾರ ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಸೂರ್ಯಕಿರಣ್ ಯುದ್ದ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪೈಲಟ್ ಮರಣ ಹೊಂದಿದ್ದರು. ಇದೀಗ ಇದು ಎರಡನೇ ಪ್ರಕರಣವಾಗಿದ್ದು, ಈ ಘಟನೆಯಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರು ಬೆಂಕಿ, ದಟ್ಟ ಹೊಗೆ ಕಂಡು ಆತಂಕಕ್ಕೆ ಒಳಗಾಗಿದ್ದರು.

ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಗೇಟ್ ನಂ.5 ರಲ್ಲಿ ನಿಗದಿಪಡಿಸಿದ್ದ ಕಾರು ನಿಲುಗಡೆ ಸ್ಥಳದಲ್ಲಿ ಮಧ್ಯಾಹ್ನ 12 ರ ವೇಳೆಗೆ ಅಲ್ಲಿದ್ದ ಒಣ ಹುಲ್ಲಿಗೆ ಬೆಂಕಿಹತ್ತಿಕೊಂಡಿದ್ದು, ಅದು ಕಾರಿಗೆ ಹತ್ತಿದೆ. ಇದರಿಂದ ಒಂದು ಕಾರಿನಿಂದ ಮತ್ತೊಂದು ಕಾರಿಗೆ ಹೊತ್ತಿಕೊಂಡು ಬೆಂಕಿ ರೌದ್ರಾವತಾರ ತಾಳಿ ಕಾರುಗಳು ಧಗಧಗನೆ ಹೊತ್ತಿ ಉರಿದಿವೆ.

ಘಟನೆ ನಡೆದಿದ್ದು ಹೇಗೆ?: ಮೊದಲ ಹಂತದ ವೈಮಾನಿಕ ಪ್ರದರ್ಶನ ಮುಕ್ತಾಯಗೊಂಡಿದ್ದು, ಶನಿವಾರ ಮತ್ತು ರವಿವಾರ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನ ಇಂದು ವೀಕ್ಷಣೆಗೆ ತೆರಳಿದ್ದರು. ಹೀಗಾಗಿ ವೈಮಾನಿಕ ಪ್ರದರ್ಶನಕ್ಕೆ ತೆರಳಲು ಗೇಟ್ ನಂ.5ರ ಬಳಿ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ, ಒಣ ಹುಲ್ಲು ಜಾಸ್ತಿ ಇತ್ತು. ವೈಮಾನಿಕ ಪ್ರದರ್ಶನಕ್ಕೆ ಬಂದ ಕೆಲವರಲ್ಲಿ ಒಂದಿಬ್ಬರು ಯುವಕರು ಸಿಗರೇಟ್ ಸೇದಿ ಬಿಸಾಕಿದ್ದಾರೆ. ಹೀಗೆ ಬಿಸಾಕಿದ ಸಿಗರೇಟ್‌ನ ಬೆಂಕಿ, ಹುಲ್ಲಿಗೆ ಹೊತ್ತಿಕೊಂಡು ಇಷ್ಟೊಂದು ದೊಡ್ಡ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಸಣ್ಣದಾಗಿ ಹೊತ್ತಿಕೊಂಡ ಬೆಂಕಿ, ಅಲ್ಲಿಯೇ ಪಾರ್ಕಿಂಗ್ ಲಾಟ್‌ನಲ್ಲಿ ಕಾರಿನ ಒಂದರ ಪೆಟ್ರೋಲ್ ಟ್ಯಾಂಕ್ ಸಿಡಿದಿದ್ದರಿಂದ ಬೆಂಕಿ ಜ್ವಾಲೆ ಹೆಚ್ಚಾಗಿ ಅಕ್ಕ ಪಕ್ಕದ ಎಲ್ಲ ವಾಹನಗಳಿಗೆ ಹೊತ್ತಿಕೊಂಡಿದೆ. ಈ ಆಕಸ್ಮಿಕದ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುವಷ್ಟರಲ್ಲಿ ಸುಮಾರು 200-300 ಕಾರುಗಳು ಹೊತ್ತಿ ಉರಿದು ಭಸ್ಮವಾಗಿವೆ. ಬಳಿಕ ಮಾಹಿತಿ ತಿಳಿದು ಸುಮಾರು 20 ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಯ ಅವಘಡದಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವೈಮಾನಿಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಸಿಲಿನಿಂದಾಗಿ ಒಣಹುಲ್ಲಿಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಅದೇ ಈ ಅನಾಹುತಕ್ಕೆ ಕಾರಣವಾಗಿರಬಹುದು. ಅಧಿಕಾರಿಗಳು ಮೊದಲೇ ಈ ಬಗ್ಗೆ ಎಚ್ಚರವಹಿಸಬೇಕಿತ್ತು. ಈಗಿನ ವಾತಾವರಣದಲ್ಲಿ ಇಂತಹ ಬಹುದೊಡ್ಡ ಕಾರ್ಯಕ್ರಮ ನಡೆಸುವಾಗ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬೆಂಕಿ ಅವಘಡಕ್ಕೆ ನಿರ್ಧಿಷ್ಟವಾದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಏರ್ ಶೋ ನೋಡಲು ದುಬೈನಿಂದ ಬೆಂಗಳೂರಿಗೆ ಬಂದಿದ್ದೆ. ಆದರೆ, ಇಲ್ಲಿ ನಡೆದ ಅವಘಡದಲ್ಲಿ ನನ್ನ ಪಾಸ್‌ಪೋರ್ಟ್, ಲೈಸೆನ್ಸ್, ದುಬೈ ವಾಹನ ಚಾಲನಾ ಪರವಾನಿಗೆ ಸೇರಿದಂತೆ ಹಲವು ಮಹತ್ವದ ದಾಖಲೆಗಳು ಸುಟ್ಟು ಹೋಗಿವೆ. ನಾನು ಕಾರು ನಿಲ್ಲಿಸಿ ಸ್ವಲ್ಪ ದೂರ ಹೋಗಿದ್ದೆ. ಅಷ್ಟೊತ್ತಿಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ನಾನು ವಾಪಸ್ಸು ಬಂದರೂ ಪ್ರಯೋಜನವಾಗಲಿಲ್ಲ, ನನ್ನ ಕಾರು ಸುಟ್ಟು ಹೋಗಿತ್ತು. ಆದರೂ, 20 ಕ್ಕೂ ಅಧಿಕ ಬೇರೆ ಕಾರುಗಳ ಗ್ಲಾಸ್ ಒಡೆದು ಕಾರನ್ನು ಉಳಿಸಿದೆ.

-ಬದ್ರಿ ಪ್ರಸಾದ್, ದುಬೈ

ವೈಮಾನಿಕ ಪ್ರದರ್ಶನದ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ದಾಖಲೆಗಳ ಸಮೇತ ಸುಟ್ಟು ಹೋಗಿದ್ದರೂ ಕಾರುಗಳ ಮಾಲಕರಿಗೆ ವಿಮೆ ಪಡೆಯಲು ನೆರವು ನೀಡುತ್ತೇವೆ. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಜಂಟಿ ಸಭೆ ನಡೆಸಲಾಗಿದೆ.

-ಜ್ಞಾನೇಂದ್ರ, ಸಾರಿಗೆ ಇಲಾಖೆಯ ಜಂಟಿ ಆಯುಕ್ತ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News