ಹಾಸನ: ಉದ್ಯೋಗ ಮೇಳಕ್ಕೆ ಸಚಿವ ಹೆಚ್.ಡಿ ರೇವಣ್ಣ ಚಾಲನೆ

Update: 2019-02-23 12:28 GMT

ಹಾಸನ,ಫೆ.23: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯ ಮಿಷನ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಏರ್ಪಡಿಸಲಾಗಿರುವ ಬೃಹತ್ ಉದ್ಯೋಗ ಮೇಳಕ್ಕೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಚಾಲನೆ ನೀಡಿದರು.  

ನಂತರ ಮಾತನಾಡಿದ ಅವರು, ಉದ್ಯೋಗ ಮೇಳಗಳಲ್ಲಿ 120 ವಿವಿಧ ಕಂಪನಿಗಳು ಬಂದಿದ್ದು, ಸುಮಾರು 12 ಸಾವಿರ ಜನ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದಾರೆ. ಉದ್ಯೋಗ ಬಯಸಿ ಚಿಕ್ಕಮಗಳೂರಿನಿಂದ ಇಲ್ಲಿಗೆ ಬಂದವರಿಗೆ ಬಸ್ಸಿನ ಸೌಲಭ್ಯ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದು, ಎರಡು ದಿನಗಳ ಕಾಲ ನಡೆಯುವ ಉದ್ಯೋಗ ಮೇಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ಮದುವೆ ಮಾಡಿಕೊಂಡು ಹೆಂಡತಿಯನ್ನು ಹೊರಗೆ ಓಡಿಸಿರುತ್ತಾರೆ, ಅವರನ್ನು ಗುರುತಿಸಿ ಕೆಲಸ ಕೊಡಬೇಕು. ಬಡ ಕುಟುಂಬದಲ್ಲಿ ಜೀವನ ಸಾಗಿಸಲು ಕಷ್ಟ ಇರುವವರಿಗೆ ಕಂಪನಿಗಳು ಮಾನವಿಯತೆ ಮೇಲೆ ಕೆಲಸ ಕೊಡುವುದರ ಮೂಲಕ ನೆರವಾಗಲು ಮನವಿ ಮಾಡಿದರು

ಈಗಾಗಲೇ ನಾನು 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಎಲ್ಲಾ ಇಲಾಖೆಯ ವಿಚಾರಗಳ ಮಾಹಿತಿ ಪಡೆದಿದ್ದೇನೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎರಡು ದಿನದ ಉದ್ಯೋಗ ಮೇಳವನ್ನು ಉದ್ಯೋಗಕಾಂಕ್ಷಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಜಿಲ್ಲಾಧಿಕಾರಿ ವರ್ಗವಣೆ ಸಾಮಾನ್ಯವಾಗಿದ್ದು, ಯಾವ ಡಿಸಿ ಬಂದರೆ ನಮಗೇನು ? ಚುನಾವಣೆ ಹತ್ತಿರ ಇದ್ದು, ವರ್ಗಾವಣೆ ಆದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು.

ಉದ್ಯೋಗ ಮೇಳದಲ್ಲಿ ನೂರಾರು ಹೆಸರಾಂತ ಕಂಪನಿಗಳು ನೇರ ಸಂದರ್ಶನ ಮೂಲಕ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಹಾಸನ ಜಿಲ್ಲಾ ಉದ್ಯೋಗಾಧಿಕಾರಿ ವಿಜಯಲಕ್ಷ್ಮಿ, ಜಂಠಿ ನಿರ್ದೇಶಕ ಗೋವಿಂದೇಗೌಡ, ಚಿಕ್ಕಮಗಳೂರು ತಾಪಂ ಅಧ್ಯಕ್ಷ ಜಯಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News