ಮಾ.5 ರಂದು ಕೋಲಾರದಲ್ಲಿ 130 ಕೋಟಿ ವೆಚ್ಚದ ಗೋಲ್ಡನ್ ಡೇರಿಗೆ ಮುಖ್ಯಮಂತ್ರಿ ಶಂಕು ಸ್ಥಾಪನೆ: ಶಾಸಕ ನಂಜೇಗೌಡ

Update: 2019-02-23 18:12 GMT

ಕೋಲಾರ,ಫೆ.23: ಕೋಲಾರ,ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆವರಣದಲ್ಲಿ 130 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 'ಎಂ.ವಿ.ಕೃಷ್ಣಪ್ಪ ಗೋಲ್ಡನ್ ಡೇರಿ' ಕಾಮಗಾರಿಗೆ ಮಾ.5 ರಂದು ಬೆಳಗ್ಗೆ 10:30 ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಂಕು ಸ್ಥಾಪನೆ ನೆರವೇರಿಸುವರು ಎಂದು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಶನಿವಾರ ಸಂಜೆ ನಗರದ ಪತ್ರಕರ್ತರ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಅವರು, ಕ್ಷೀರ ಕ್ರಾಂತಿಯ ಮೂಲಕ ಹೈನೋದ್ಯಮ ಬೆಳೆಯಲು ಕಾರಣರಾದ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಆಧುನಿಕ ಸೌಲಭ್ಯವುಳ್ಳ 10 ಲಕ್ಷ ಲೀಟರ್ ಶೇಖರಣಾ ಸಾಮರ್ಥ್ಯದ ಈ ಡೇರಿ ನಿರ್ಮಾಣಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ ಕುಮಾರ್, ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಸಿ.ಬಿ.ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿರುವರು ಎಂದು ತಿಳಿಸಿದರು.

ಆಧುನಿಕ ಸೌಲಭ್ಯದ ಮೊದಲ ಡೇರಿ

ರಾಜ್ಯದಲ್ಲೇ ಅತಿ ಆಧುನಿಕ ತಂತ್ರಜ್ಞಾನ ಹಾಗೂ ಸೌಲಭ್ಯಗಳುಳ್ಳ ಮೊದಲ ಡೇರಿಯಾಗಿ ಗೋಲ್ಡನ್ ಡೇರಿ ನಿರ್ಮಾಣವಾಗಲಿದೆ ಎಂದ ಅವರು, ಹೀಗಿರುವ ಒಕ್ಕೂಟ ಆರಂಭವಾಗಿ ಸುಮಾರು 24 ವರ್ಷ ಕಳೆದಿದ್ದು, ಯಂತ್ರೋಪಕರಣಗಳ ಸಾಮರ್ಥ್ಯ ಕ್ಷೀಣಿಸುತ್ತಾ ಬಂದಿದೆ ಎಂದರು.

ಹಳೆ ಡೇರಿಯ ಜತೆಗೆ ಸಾಂದರ್ಭಿಕ ಅಗತ್ಯತೆಯಂತೆ 4 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಿಕೊಂಡಿದ್ದರೂ, ದಿನಂಪ್ರತಿ 6.5 ಲಕ್ಷ ಲೀಟರ್ ಹಾಲು ಸಂಸ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಹಾಲಿನ ಉತ್ಪಾದನೆ ಹೆಚ್ಚುತ್ತಿರುವುದರಿಂದ 10 ಲಕ್ಷ ಲೀಟರ್ ಸಾಮರ್ಥ್ಯದ ಗೋಲ್ಡನ್ ಡೇರಿ ನಿರ್ಮಾಣ ಅಗತ್ಯವಾಗಿದೆ ಎಂದರು.

ಶಿಢ್ಲಘಟ್ಟದಲ್ಲಿ ಪಶು ಆಹಾರ ಘಟಕ
ಮಾರ್ಚ್ 10ರೊಳಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗದಿದ್ದರೆ ಚಿಕ್ಕಬಳ್ಳಾಪುರದಲ್ಲಿ 163 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿ ಉದ್ಘಾಟನೆ ಹಾಗೂ ಶಿಢ್ಲಘಟ್ಟದಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಮೆಗಾ ಡೇರಿ ಆವರಣದಲ್ಲಿ ಸುಮಾರು 3.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಆಡಳಿತ ಭವನವನ್ನು ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.

ಗೋಲ್ಡನ್ ಡೇರಿ ಹಾಗೂ ಪಶು ಆಹಾರ ಘಟಕಗಳ ಕಾಮಗಾರಿಯನ್ನು 2 ವರ್ಷದೊಳಗೆ ಮುಗಿಸುವ ಗುರಿ ಹೊಂದಲಾಗಿದ್ದು, ಇದರಿಂದ ಜಿಲ್ಲೆಯ ಪಶು ಆಹಾರದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ಪಣಸಚೌಡನಹಳ್ಳಿ ಸಮೀಪ ನಿರ್ಮಾಣವಾಗಬೇಕಾಗಿದ್ದ ಪಾರ್ಸಲ್‍ನ ಕಾಟನ್ ಬಾಕ್ಸ್ ತಯಾರಿಕಾ ಘಟಕ ನೆನೆಗುದಿಗೆ ಬೀಳಲು ಬಿಡಲ್ಲ ಎಂದರು. ಈ ಸಂಬಂಧ ಕೋಚಿಮುಲ್ ಮತ್ತು ಕೆಎಂಎಫ್ ಸಹಯೋಗದಲ್ಲಿ ಘಟಕ ಸ್ಥಾಪಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲು ಉತ್ಪಾದಕರ ಉನ್ನತ ಶಿಕ್ಷಣಕ್ಕೆ ನೆರವಾಗುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ 500 ಮಂದಿ ವಿದ್ಯಾರ್ಥಿನಿಯರಿಗೆ ಅವಕಾಶವಿರುವ ಹಾಸ್ಟೆಲ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದ ಅವರು, ಈ ಸಂಬಂಧ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ನಮ್ಮ ಮನವಿಗೆ ಸ್ಪಂದಿಸಿ ಯಲಹಂಕ ಸಮೀಪ 12 ಸಾವಿರ ಚದರಿಡಿಯ ನಿವೇಶನ ಮಂಜೂರು ಮಾಡಿದ್ದಾರೆ ಎಂದರು.

ತಿಂಗಳಿಗೆ 6 ಸಾವಿರ ಟನ್ ಪಶು ಆಹಾರ ಅಗತ್ಯತೆ
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ, ಜಿಲ್ಲೆಯಲ್ಲಿ ತಿಂಗಳಿಗೆ 6 ಸಾವಿರ ಟನ್ ಪಶು ಆಹಾರದ ಬೇಡಿಕೆ ಇದೆ, ಇದರಲ್ಲಿ 5 ಸಾವಿರ ಟನ್ ಪಶು ಆಹಾರವನ್ನು ರಾಜಾನಕುಂಟೆ, ಗುಬ್ಬಿ, ಹಾಸನ ಹಾಗೂ ಶಿಕಾರಪುರ ಘಟಕಗಳಿಂದ ಹಾಗೂ ಉಳಿದ ಸಾವಿರ ಟನ್‍ಅನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದರು. ಶಿಢ್ಲಘಟ್ಟದ ಘಟಕ ಆರಂಭವಾದರೆ ಪ್ರತಿ ದಿನ 500 ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದನೆಯಾಗಲಿದ್ದು, ಜಿಲ್ಲೆಗೆ ಸಾಕಾಗಿ ಬೇರೆಯವರಿಗೂ ಮಾರಾಟ ಮಾಡಬಹುದು ಎಂದರು.

ಸುದ್ದಿಗೋಷ್ಟಿಯಲ್ಲಿ ಕೋಚಿಮುಲ್ ನಿರ್ದೇಶಕರಾದ ಬೈರಾರೆಡ್ಡಿ, ರಾಮಕೃಷ್ಣೇಗೌಡ, ಜಯಸಿಂಹಕೃಷ್ಣಪ್ಪ, ಮುನಿಯಪ್ಪ, ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ, ವ್ಯವಸ್ಥಾಪಕ ನಾಗೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News