ಜಮ್ಮು: ಅಲ್ಪಾವಧಿ ಸೂಚನೆ ದೊರೆತೊಡನೆ ಗ್ರಾವು ಬಿಟ್ಟು ತೆರಳಲು ಜನತೆಗೆ ಸೂಚನೆ

Update: 2019-02-23 18:24 GMT

 ಶ್ರೀನಗರ, ಫೆ.23: ಬುಧವಾರ ಮತ್ತು ಗುರುವಾರದ ಬಳಿಕ ಗಡಿಯಾಚೆಗಿಂದ ಶೆಲ್ ದಾಳಿ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಅಲ್ಪಾವಧಿ ಸೂಚನೆ ದೊರೆತೊಡನೆ ಗ್ರಾಮ ಬಿಟ್ಟು ತೆರಳಲು ಸಿದ್ಧರಿರುವಂತೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ವಲಯದ ಗಡಿ ನಿಯಂತ್ರಣ ರೇಖೆಯ ಬಳಿಯ 27 ಗ್ರಾಮಗಳ ನಿವಾಸಿಗಳಿಗೆ ಸೂಚಿಸಲಾಗಿದೆ.

ಪಾಕಿಸ್ತಾನಿ ಸೇನಾಪಡೆಯ ಗನ್ ದಾಳಿಯ ವ್ಯಾಪ್ತಿಗೆ ನಿಲುಕದ ಸ್ಥಳದಲ್ಲಿರುವ ಶಾಲೆ ಹಾಗೂ ಸರಕಾರಿ ಕಟ್ಟಡಲ್ಲಿ ವ್ಯವಸ್ಥೆಗೊಳಿಸಲಾಗಿರುವ ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಗೊಳ್ಳುವಂತೆ ಮತ್ತು ಅತ್ಯಗತ್ಯವಾದ ವಸ್ತುಗಳನ್ನು ಮಾತ್ರ ತಮ್ಮೊಂದಿಗೆ ಒಯ್ಯುವಂತೆ ಜಿಲ್ಲಾಡಳಿತ ಸೂಚಿಸಿದೆ.

ಬುಧವಾರದಿಂದ ಪಾಕ್ ಪಡೆಗಳ ಗುಂಡಿನ ದಾಳಿ ಆಗಿಂದಾಗ್ಗೆ ನಡೆಯುತ್ತಿದೆ. ಕೆಲವು ಮನೆಗಳ ಗೋಡೆಗೆ ಗುಂಡು ಬಡಿದಿದೆ. ಯಾವುದೇ ಸಾವು, ನೋವು ಸಂಭವಿಸಿಲ್ಲ. ಆದರೆ ಅಲ್ಪಾವಧಿಯ ಸೂಚನೆ ದೊರೆತೊಡನೆ ಮನೆ ಕಾಲಿ ಮಾಡಿ ತೆರಳುವುದು ಸ್ಥಳೀಯ ಜನತೆಗೆ ಅಭ್ಯಾಸವಾಗಿಬಿಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಮನೆ ಬಿಟ್ಟು ತೆರಳಿದ್ದೇವೆ ಎಂದು ಗಡಿನಿಯಂತ್ರಣಾ ರೇಖೆಯ ಬಳಿಯಿರುವ ಕಲಾಲ್ ಎಂಬ ಗ್ರಾಮದ ಅ್ಯಕ್ಷ ರಮೇಶ್ ಚೌಧರಿ ಹೇಳಿದ್ದಾರೆ.

ಯಾವುದೇ ಪರಿಸ್ಥಿತಿಗೂ ತಕ್ಷಣ ಹೊಂದಿಕೊಳ್ಳಲು ಸ್ಥಳೀಯರು ಕಲಿತುಕೊಂಡಿದ್ದಾರೆ. ಆದರೆ ಸರಕಾರ ಮಾತ್ರ ಇನ್ನೂ ಹೆಣಗಾಡುತ್ತಿದೆ. ಕಲಾಲ್ ಮತ್ತು ನೆರೆಯ ಖೋರಿ ಮತ್ತು ಗಾಗ್ರೊಟ್ ಗ್ರಾಮದ ಸುಮಾರು 300 ನಿವಾಸಿಗಳು ಸ್ಥಳಾಂತರಗೊಂಡರೆ ಅವರಿಗೆ ಉಳಿದುಕೊಳ್ಳಲು ಕೇವಲ 14 ಕೋಣೆ ಹಾಗೂ 6 ಶೌಚಾಲಯಗಳನ್ನು ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣಾ ರೇಖೆಯ ಬಳಿ ಗ್ರಾಮಸ್ಥರಿಗೆ ಸುಮಾರು 1,400 ಶಿಬಿರಗಳನ್ನು ನಿರ್ಮಿಸಲಾಗಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದ್ದರೂ ಇಲ್ಲಿ ಒಂದೂ ಶಿಬಿರಗಳನ್ನು ನಿರ್ಮಿಸಲಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶುಕ್ರವಾರ ರಜೌರಿ ಜಿಲ್ಲಾಧಿಕಾರಿ ಮುಹಮ್ಮದ್ ಇಜಾಝ್ ಅಸಾದ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಲ್ಲೇ ಇರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ನಾವು ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿದ್ದು ಸ್ಥಳಾಂತರ ಯೋಜನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಮಧ್ಯೆ, ಫೆಬ್ರವರಿ 14ರಂದು ಉಗ್ರರ ಆತ್ಮಾಹುತಿ ಬಾಂಬ್ ದಾಳಿ ನಡೆದ ಜಮ್ಮು-ಶ್ರೀನಗರ ಹೆದ್ದಾರಿಯ ಪುಲ್ವಾಮ ಪ್ರದೇಶದಲ್ಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದೆ. ಬಾಂಬ್ ದಾಳಿಯ ಬಳಿಕದ ಒಂದು ವಾರದಲ್ಲಿ ಸುಮಾರು 2 ಸಾವಿರ ಸಿಆರ್‌ಪಿಎಫ್ ಯೋಧರು ಇದೆೀ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಅರೆಸೇನಾಪಡೆಯ ಯೋಧರ ಸಂಚಾರಕ್ಕೆ ವಿಮಾನಗಳನ್ನು ಬಳಸಬಹುದು ಎಂದು ಕಳೆದ ವಾರ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದರೂ ಸೇನಾಪಡೆ ರಸ್ತೆ ಮಾರ್ಗವಾಗಿಯೇ ಯೋಧರನ್ನು ರವಾನಿಸುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು, ಯೋಧರ ಪ್ರಯಾಣಕ್ಕೆ ವಿಮಾನಯಾನವನ್ನು ಬಳಸಬಹುದು. ಆದರೆ ಸೇನಾಪಡೆ ಭೀತಿಗೊಂಡಿದೆ ಎಂಬ ಸಂದೇಶ ರವಾನಿಸಲು ನಾವು ಬಯಸುವುದಿಲ್ಲ. ಅಲ್ಲದೆ ಮುಚ್ಚಲಾಗಿರುವ ಹೆದ್ದಾರಿ ಸಂಚಾರ ಮುಕ್ತವಾಗಿದೆ ಎಂಬ ಸಂದೇಶ ಸಾರುವುದೂ ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News