ಭದ್ರಾ ಹುಲಿ ರಕ್ಷಿತಾರಣ್ಯದಲ್ಲಿ ಹೆಣ್ಣು ಹುಲಿಯ ಕಳೇಬರ ಪತ್ತೆ: ವಿಷ ಪ್ರಾಶನ ಶಂಕೆ

Update: 2019-02-23 18:31 GMT

ಚಿಕ್ಕಮಗಳೂರು,ಫೆ.23: ಗರ್ಭಾವಸ್ತೆಯಲ್ಲಿದ್ದ ಹೆಣ್ಣು ಹುಲಿಯೊಂದು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ತರೀಕೆರೆ ತಾಲೂಕಿನ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಹೆಬ್ಬೆ ವಲಯದಲ್ಲಿ ಬೆಳಕಿಗೆ ಬಂದಿದ್ದು, ವಿಷ ಪ್ರಾಶನದ ಮೂಲಕ ಹುಲಿಯನ್ನು ವನ್ಯಜೀವಿ ಕಳ್ಳಬೇಟೆಗಾರರ ಜಾಲ ಕೊಂದಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಶುಕ್ರವಾರ ಸಂಜೆ ಭದ್ರಾ ಹುಲಿ ರಕ್ಷಿತಾರಣ್ಯದ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಸುಮಾರು 8 ವರ್ಷದ ಹೆಣ್ಣು ಹುಲಿಯ ಕಳೇಬರ ಕಂಡು ಬಂದಿದ್ದು, ಮೃತ ಹೆಣ್ಣು ಹುಲಿಯ ದೇಹದ ಎಡ ಭಾಗದಲ್ಲಿ ಕೊಳೆತ ಗುರುತಿದ್ದು, ಬೆನ್ನಿನ ಮೇಲೆ ಗಾಯವಾದ ಗುರುತು ಇದೆ. ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಹೊಟ್ಟೆಯಲ್ಲಿದ್ದ ಎರಡು ಹುಲಿ ಮರಿಗಳೂ ತಾಯಿಯೊಂದಿಗೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿವೆ ಎಂದು ತಿಳಿದು ಬಂದಿದೆ. 

ಹುಲಿಯ ಹೊಟ್ಟೆಯಲ್ಲಿ ದನದ ಮಾಂಸ ಹಾಗೂ ದನದ ಕಿವಿಗೆ ಹಾಕುವ ಓಲೆಗಳು ಪತ್ತೆಯಾಗಿದ್ದು, ಹುಲಿಗೆ ದನದ ಮಾಂಸದಲ್ಲಿ ವಿಷವಿಟ್ಟು ಕೊಂದಿರಬಹುದೆಂದು ಇಲಾಖಾಧಿಕಾರಿಗಳು ಶಂಕಿಸಿದ್ದಾರೆಂದು ತಿಳಿದು ಬಂದಿದೆ. ಹೆಬ್ಬೆ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಎರಡು ಹುಲಿಗಳು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಇದು ಮೂರನೇ ಪ್ರಕರಣವಾಗಿದೆ.

ವನ್ಯಜೀವಿ ಅರಣ್ಯ ವಿಭಾಗದ ಪಶುವೈದ್ಯಾಧಿಕಾರಿ ವಿನಯ್, ಜಯರಾಮ್ ನೇತೃತ್ವದಲ್ಲಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಮುಖ್ಯ ಅರಣ್ಯಾಧಿಕಾರಿ ಧನಂಜಯ್, ಹೆಚ್ಚೆ ವಲಯದ ಮಂಜುನಾಥ್, ವೈಲ್ಡ್‍ಲೈಫ್ ವಾರ್ಡನ್‍ಗಳಾದ ಸತೀಶ್, ಮಹೇಂದ್ರ ಜೈನ್ ಸಮ್ಮುಖದಲ್ಲಿ ಮೃತ ಹುಲಿ ಕಳೇಬರ ಸುಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News