ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನ ಜಯಿಸಿದ ಅಪೂರ್ವಿ

Update: 2019-02-23 18:57 GMT

ಹೊಸದಿಲ್ಲಿ, ಫೆ.23: ಭಾರತದ ಅಪೂರ್ವಿ ಚಾಂಡೇಲಾ ಮಹಿಳೆಯರ 10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ಶನಿವಾರ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಜಯಿಸಿದರು. ಈ ಮೂಲಕ 2019ರಲ್ಲಿ ನಡೆದ ಮೊದಲ ಶೂಟಿಂಗ್ ವಿಶ್ವಕಪ್‌ನಲ್ಲಿ ತನ್ನದೇ ಶೈಲಿಯಲ್ಲಿ ಆರಂಭ ಪಡೆದರು.

ಸ್ಪರ್ಧೆಯ ಮೊದಲ ದಿನವಾದ ಶನಿವಾರ ತವರು ಪ್ರೇಕ್ಷಕರ ಅಭೂತಪೂರ್ವ ಬೆಂಬಲದೊಂದಿಗೆ ಆಡಿದ ಅಪೂರ್ವಿ ಒಟ್ಟು 252.9 ಅಂಕ ಗಳಿಸಿ ನೂತನ ವಿಶ್ವ ದಾಖಲೆ ನಿರ್ಮಿಸಿದರು. ಪ್ರತಿಸ್ಪರ್ಧಿ ಚೀನಾದ ಝಾವೊ ರುವೊಝ (251.8)ವಿರುದ್ಧ 1.1 ಅಂಕ ಮುನ್ನಡೆ ಸಾಧಿಸಿ ಮೊದಲ ಸ್ಥಾನ ಪಡೆದರು. ಚೀನಾದ ಇನ್ನೋರ್ವ ಶೂಟರ್ ಕ್ಸು ಹಾಂಗ್(230.4)ಮೂರನೇ ಸ್ಥಾನ ಪಡೆದರು.

 ಅಪೂರ್ವಿ ಎರಡು ಸುತ್ತು ಬಾಕಿ ಇರುವಾಗ 0.8 ಅಂಕ ಮುನ್ನಡೆಯಲ್ಲಿದ್ದರು. ಝಾವೊ ವಿರುದ್ಧ 10.8 ಅಂಕ ಗಳಿಸಿ 1.1 ಮುನ್ನಡೆ ಪಡೆದರು. ಕೊನೆಯ ಪ್ರಯತ್ನದಲ್ಲಿ 10.5 ಅಂಕ ಗಳಿಸಿ ಚಿನ್ನಕ್ಕೆ ಗುರಿ ಇಟ್ಟ ಅಪೂರ್ವಿ, ಝಾವೊ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದರು.

ಅಪೂರ್ವಿ ಕಳೆದ ವರ್ಷ ಮ್ಯೂನಿಚ್‌ನಲ್ಲಿ ನಡೆದ ವಿಶ್ವಕಪ್ ಶೂಟಿಂಗ್‌ನಲ್ಲಿ ಕೂದಲೆಳೆ ಅಂತರದಿಂದ ಚಿನ್ನದ ಪದಕದಿಂದ ವಂಚಿತರಾಗಿದ್ದರು.

ಆರಂಭದಲ್ಲಿ ಅಪೂರ್ವಿಗಿಂತ ಮುನ್ನಡೆಯಲ್ಲಿದ್ದ ಚೀನಾದ ಝವೊ ಹಾಗೂ ಹಾಂಗ್ ಕ್ಯೂ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಅಪೂರ್ವಿ ಈಗಾಗಲೇ ಅಂಜುಮ್ ವೌದ್ಗಿಲ್ ಜೊತೆಗೂಡಿ 2020ರ ಟೋಕಿಯೊ ಒಲಿಂಪಿಕ್ ಗೇಮ್ಸ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದ್ದಾರೆ. ಕಳೆದ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹಾಗೂ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಅಪೂರ್ವಿ ಶೂಟಿಂಗ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಭಾರತದ ಏಕೈಕ ಶೂಟರ್. 26ರ ಹರೆಯದ ಅಪೂರ್ವಿ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಒಟ್ಟು 629.3 ಅಂಕ ಗಳಿಸಿದ್ದರು. 8 ಫೈನಲಿಸ್ಟ್‌ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದರು. ಸ್ಪರ್ಧೆಯಲ್ಲಿದ್ದ ಇತರ ಇಬ್ಬರು ಶೂಟರ್‌ಗಳಾದ ಅಂಜುಮ್ ವೌದ್ಗಿಲ್ ಹಾಗೂ ಇಲವೇನಿಲ್ ವಲಾರಿವಾನ್ ಕ್ರಮವಾಗಿ 12ನೇ(628 ಅಂಕ) ಹಾಗೂ 30ನೇ(625.3)ಸ್ಥಾನ ಪಡೆದಿದ್ದಾರೆ.

 ಚೀನಾದ ಝಾವೊ ಅರ್ಹತಾ ಸುತ್ತಿನಲ್ಲಿ ವಿಶ್ವ ದಾಖಲೆ ಸ್ಕೋರ್(634)ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.

ಹುತಾತ್ಮ ಯೋಧರಿಗೆ ಪದಕ ಅರ್ಪಿಸಿದ ಅಪೂರ್ವಿ

ಇಲ್ಲಿ ಶನಿವಾರ ಆರಂಭವಾದ ಶೂಟಿಂಗ್ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ ಶೂಟರ್ ಅಪೂರ್ವಿ ಚಾಂಡೇಲಾ ಪದಕವನ್ನು ಇತ್ತೀಚೆಗೆ ಪುಲ್ವಾಮದಲ್ಲಿ ಉಗ್ರ ದಾಳಿಗೆ ಹುತಾತ್ಮರಾದ ದೇಶದ ವೀರ ಯೋಧರಿಗೆ ಅರ್ಪಿಸಿದ್ದಾರೆ.

 ‘‘ನಾನು ಈ ಚಿನ್ನದ ಪದಕವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಜೀವ ಕಳೆದುಕೊಂಡ ಯೋಧರು ಹಾಗೂ ದುಃಖತಪ್ತ ಅವರ ಕುಟುಂಬ ಸದಸ್ಯರಿಗೆ ಅರ್ಪಿಸುವೆ’’ ಎಂದು ಪದಕ ಪ್ರದಾನ ಕಾರ್ಯಕ್ರಮದ ಬಳಿಕ ಅಪೂರ್ವಿ ಹೇಳಿದ್ದಾರೆ.

‘‘ಫೈನಲ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ನಾನು ಕಠಿಣ ಅಭ್ಯಾಸ ನಡೆಸಿದ್ದೆ. ಅಭ್ಯಾಸಕ್ಕೆ ಪ್ರತಿಫಲ ಲಭಿಸಿದ್ದಕ್ಕೆ ಖುಷಿಯಾಗಿದೆ. ಇನ್ನಷ್ಟು ಸ್ಪರ್ಧೆಗಳು ಬಾಕಿ ಇರುವ ಕಾರಣ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಎದುರು ನೋಡುತ್ತಿರುವೆ’’ ಎಂದು ವಿಶ್ವದ ನಂ.6ನೇ ಆಟಗಾರ್ತಿ ಅಪೂರ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News