ಕರ್ನಾಟಕ ಗೂಂಡಾಗಳ ರಾಜ್ಯವಾಗುತ್ತಿದೆ: ಕೆ.ಎಸ್ ಈಶ್ವರಪ್ಪ

Update: 2019-02-23 18:58 GMT

ಶಿವಮೊಗ್ಗ, ಫೆ. 23: ಕರ್ನಾಟಕ ಗೂಂಡಾಗಳ ರಾಜ್ಯವಾಗುತ್ತಿದೆ. ಅದರಲ್ಲಿ ಶಿವಮೊಗ್ಗವೂ ಒಂದಾಗಿದೆ. ಇಲ್ಲಿ ಕಾನೂನು-ಸುವ್ಯವಸ್ಥೆಯೇ ಇಲ್ಲವಾಗಿದೆ. ನೂತನ ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮರಳು ಮಾಫಿಯಾ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕೊಲೆ, ಸುಲಿಗೆ, ದರೋಡೆ, ಕಳ್ಳತನ, ಗಾಂಜಾ, ಮಟ್ಕಾ, ಜೂಜಾಟದಂತ ಕಾನೂನುಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿದೆ. ರೌಡಿಸಂ ವಿಪರೀತ ಮಟ್ಟಕ್ಕೆ ತಲುಪಿದ್ದು, ರೌಡಿಗಳ ಹತ್ಯೆಯಾಗುತ್ತಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಯಾವುದೇ ಬಿಗಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಶಿವಮೊಗ್ಗ ನಗರದಲ್ಲಿರುವ ಸ್ಥಿತಿಯ ಕುರಿತಂತೆ ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದೇನೆ. ಗೃಹ ಮಂತ್ರಿಗೂ ತಿಳಿಸಿದ್ದೇನೆ. ವಿರೋಧ ಪಕ್ಷವಾಗಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕನಾಗಿ ಏನು ಮಾಡಬೇಕೋ ಅದೆಲ್ಲವನ್ನು ಮಾಡಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದರು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಪೊಲೀಸರ ಕಾರ್ಯವಾಗಿದೆ. ಪ್ರಸ್ತುತ ಹೊಸ ಜಿಲ್ಲಾ ರಕ್ಷಣಾಧಿಕಾರಿಗಳು ಬಂದಿದ್ದಾರೆ. ಈಗಾಗಲೇ ಅವರಿಗೆ ಜಿಲ್ಲೆಯಲ್ಲಿರುವ ಮರಳು ಮಾಫಿಯಾ ಸೇರಿದಂತೆ ಅಕ್ರಮ ಚಟುವಟಿಕೆಗಳ ಬಗ್ಗೆ ಹೇಳಲಾಗಿದೆ. ಈ ಕುರಿತಂತೆ ಡಿ.ಸಿ ಹಾಗೂ ಎಸ್.ಪಿ ಯವರು ಗಮನಹರಿಸಿ, ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ನಿರ್ಲಕ್ಷ್ಯ ವಹಿಸಬಾರದು ಎಂದು ತಿಳಿಸಿದರು. 

ಚಾಲನೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ 402 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ರವಿವಾರ ಶಿಲಾನ್ಯಾಸ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ, ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ರವರಿಗೆ ಮನವಿ ಮಾಡಲಾಗಿದೆ. ಒಟ್ಟಾರೆ 5 ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ರಸ್ತೆ, ಚರಂಡಿ ಅಭಿವೃದ್ದಿ ಕಾಮಗಾರಿಗಳು ಕೂಡ ಇದರಲ್ಲಿ ಸೇರ್ಪಡೆಯಾಗಿದೆ ಎಂದರು. 

ಕೋಮುವಾದಿಯಲ್ಲ: ಬಿಜೆಪಿಯು ಕೋಮುವಾದಿ ಪಕ್ಷವಲ್ಲ, ರಾಷ್ಟ್ರವಾದಿ ಪಕ್ಷವಾಗಿದೆ. ಕಾಂಗ್ರೆಸ್, ಜೆಡಿಎಸ್ ಅವಕಾಶವಾದಿ ಪಕ್ಷಗಳಾಗಿವೆ. ಈಗಾಗಲೇ ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳ ನಡುವೆ ಮುನಿಸು ಶುರುವಾಗಿದೆ. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದಾಗಿದೆ ಎಂದರು. 

ಆಪರೇಷನ್ ಕಮಲ ಎನ್ನುವುದು ಇಲ್ಲವೇ ಇಲ್ಲ. ಮುಂಬೈಗೆ ಹೋದವರೆಲ್ಲ ಕಾಂಗ್ರೆಸ್ ಅತೃಪ್ತರಾಗಿದ್ದಾರೆ. ಶಾಸಕರಾಗಿ ಅವರವರೇ ಬಡಿದಾಡುತ್ತಿರುವುದು ಕಾಂಗ್ರೆಸ್ ಪಕ್ಷದ ದುಃಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರ ಬಂಗಾರಪ್ಪ, ಎಂಎಲ್‍ಸಿ ರುದ್ರೇಗೌಡ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News