75 ಸಾವಿರ ಕೋಟಿಯ ಕಿಸಾನ್ ಆದಾಯ ಯೋಜನೆಗೆ ಇಂದು ಪ್ರಧಾನಿ ಮೋದಿ ಚಾಲನೆ

Update: 2019-02-24 03:36 GMT

ಲಕ್ನೋ, ಫೆ. 24: ಸಾರ್ವತ್ರಿಕ ಚುನಾವಣಾ ಪೂರ್ವದಲ್ಲಿ ಕೇಂದ್ರ ಪ್ರಕಟಿಸಿದ ಮಹತ್ವದ ರೈತಪರ ಯೋಜನೆ ಎಂದು ಬಿಂಬಿಸಲಾಗಿರುವ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಗೋರಖ್‌ ಪುರದಲ್ಲಿ ಚಾಲನೆ ನೀಡುವರು.

ಈ ಯೋಜನೆಯಡಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಆರು ಸಾವಿರ ರೂಪಾಯಿಗಳನ್ನು ಮೂರು ವಾರ್ಷಿಕ ಕಂತುಗಳಲ್ಲಿ ನೀಡಲಾಗುತ್ತದೆ. ಇದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿರುವ ಮೋದಿ, ಕಠಿಣ ಪರಿಶ್ರಮದಿಂದ ದೇಶಕ್ಕೆ ಅನ್ನ ನೀಡುವ ರೈತರ ಆಕಾಂಕ್ಷೆಗಳಿಗೆ ರೆಕ್ಕೆ ಒದಗಿಸಲಿದೆ ಎಂದು ಹೇಳಿದ್ದಾರೆ.

ರೈತರ ಕಲ್ಯಾಣಕ್ಕೆ ಮತ್ತು ತ್ವರಿತವಾಗಿ ನಿರ್ಧಾರಗಳನ್ನು ಕೈಗೊಳ್ಳಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ಈ ಚಾಲನಾ ಸಮಾರಂಭದ ಮೂಲಕ ಸಾರಲು ಕೇಂದ್ರ ಸರ್ಕಾರ ಹೊರಟಿದೆ. ಫೆ.1ರಂದು ಘೋಷಣೆಯಾಗಿದ್ದ ಈ ಯೋಜನೆ, ಕೇವಲ 24 ದಿನಗಳಲ್ಲಿ ಅನುಷ್ಠಾನಕ್ಕೆ ಬರುತ್ತಿದೆ.

ಎರಡು ಹೆಕ್ಟೇರ್‌ವರೆಗೆ ಭೂ ಹಿಡುವಳಿ ಹೊಂದಿರುವ ಸುಮಾರು 12 ಕೋಟಿ ರೈತರಿಗೆ ಈ ಯೋಜನೆಯ ಲಾಭ ದೊರಕಲಿದ್ದು, ವಾರ್ಷಿಕವಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 75 ಸಾವಿರ ಕೋಟಿ ಹೊರೆಯಾಗಲಿದೆ.

ರವಿವಾರ ಸುಮಾರು ಒಂದು ಕೋಟಿ ರೈತರು ಮೊದಲ ಕಂತಾಗಿ ತಲಾ 2000 ರೂಪಾಯಿಗಳನ್ನು ಪಡೆಯಲಿದ್ದಾರೆ. ಈ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ.

ದುರ್ಬಲ ರೈತ ಕುಟುಂಬಗಳಿಗೆ ಖಾತರಿಯ ಹೆಚ್ಚುವರಿ ಆದಾಯವನ್ನು ನೀಡುವುದು ಮಾತ್ರವಲ್ಲದೇ, ಕಟಾವಿಗೆ ಮುಂಚಿನ ತುರ್ತು ಅಗತ್ಯಗಳನ್ನು ಪೂರೈಸಲೂ ನೆರವಾಗಲಿದೆ. ಪಿಎಂ ಕಿಸಾನ್ ಯೋಜನೆಯು ರೈತರ ಗೌರವಯುತ ಬದುಕಿಗೆ ದಾರಿ ಮಾಡಿಕೊಡಲಿದೆ ಎಂದು ಕೃಷಿ ಇಲಾಖೆ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News