ಬೆಂಕಿಯ ಹಿಂದಿರುವ ಕೈ ಯಾವುದು?

Update: 2019-02-25 06:58 GMT

1996ರಲ್ಲಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಂಡ ವೈಮಾನಿಕ ಪ್ರದರ್ಶನ, ಬಳಿಕ ಪ್ರತಿ ಎರಡು ವರ್ಷಕ್ಕೊಮ್ಮೆ ಯಾವ ಅಡೆತಡೆಯೂ ಇಲ್ಲದೆ ರಾಷ್ಟ್ರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ರಕ್ಷಣಾ ಕೌಶಲ್ಯವನ್ನು ತೆರೆದಿಡುತ್ತಾ ಬಂದಿದೆ. ಇದು ಕೇವಲ ಮನರಂಜನೆಯ ದೃಷ್ಟಿಯಿಂದ ನಡೆಸುತ್ತಾ ಬಂದ ಪ್ರದರ್ಶನವಲ್ಲ. ಈ ದೇಶದ ರಕ್ಷಣಾ ಸಾಮರ್ಥ್ಯದ ಕುರಿತಂತೆ ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಮಹತ್ವದ ಉದ್ದೇಶ ಇದರ ಹಿಂದಿದೆ. ಈ ಬಾರಿಯ ವೈಮಾನಿಕ ಪ್ರದರ್ಶನ ಆರಂಭದಲ್ಲೇ ಮಾಧ್ಯಮಗಳಿಗೆ ಆಹಾರವಾಗಿತ್ತು. ವೈಮಾನಿಕ ಪ್ರದರ್ಶನವನ್ನು ಈ ಬಾರಿ ಉತ್ತರ ಪ್ರದೇಶ ಅಥವಾ ಗುಜರಾತ್‌ಗೆ ಸ್ಥಳಾಂತರಿಸುವ ಕುರಿತಂತೆ ಉತ್ತರ ಭಾರತದ ರಾಜಕೀಯ ನಾಯಕರು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಹಲವು ಕುಂಟು ನೆಪಗಳನ್ನು ಅವರು ಮುಂದೊಡ್ಡಿದ್ದರು. ಇನ್ನೇನು ಪ್ರದರ್ಶನ ಉತ್ತರ ಭಾರತಕ್ಕೆ ವರ್ಗಾವಣೆಯಾಗುತ್ತದೆ ಎನ್ನುವಾಗ ರಾಜ್ಯದ ನಾಯಕರು ಎಚ್ಚೆತ್ತುಕೊಂಡರು ಮತ್ತು ಅದರ ವಿರುದ್ಧ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರಕಾರ ‘ಬೆಂಗಳೂರಿನಲ್ಲೇ ವೈಮಾನಿಕ ಪ್ರದರ್ಶನ’ ಎಂದು ಹೇಳಿಕೆ ನೀಡಿತು.

ಈ ಬಾರಿಯ ವೈಮಾನಿಕ ಪ್ರದರ್ಶನ ಆರಂಭದ ಹಂತದಲ್ಲೇ ಹತ್ತು ಹಲವು ವಿಘ್ನಗಳನ್ನು ಎದುರಿಸಿತು. ವಿಮಾನಗಳಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡವು. ತರಬೇತಿಯ ಸಂದರ್ಭದಲ್ಲಿ ವಿಮಾನಗಳು ಢಿಕ್ಕಿ ಹೊಡೆದು ಓರ್ವ ಪೈಲಟ್ ಮೃತಪಟ್ಟರು. ಎಲ್ಲಕ್ಕೂ ಕಲಶವಿಟ್ಟಂತೆ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಸಂದರ್ಭದಲ್ಲೇ ಕಾರ್‌ಪಾರ್ಕಿಂಗ್‌ನಲ್ಲಿ ನಿಂತಿದ್ದ 300ಕ್ಕೂ ಅಧಿಕ ಕಾರುಗಳು ನಿಗೂಢವಾಗಿ ಬೆಂಕಿಗೆ ಆಹುತಿಯಾದವು. ವೈಮಾನಿಕ ಪ್ರದರ್ಶನ ನಡೆಯುವ ಪ್ರದೇಶ ಅತ್ಯಂತ ಸೂಕ್ಷ್ಮವಾದುದು. ಈ ಬೆಂಕಿ ಅವಘಡ ಇನ್ನಷ್ಟು ನಾಶ ನಷ್ಟಗಳಿಗೂ ಕಾರಣವಾಗಬಹುದಿತ್ತು. ಅದೃಷ್ಟವಶಾತ್ ಅಂತಹದು ಸಂಭವಿಸಲಿಲ್ಲ. ಆದರೂ ಭದ್ರತೆಯ ವಿಷಯಕ್ಕೆ ಸಂಬಂಧಿಸಿ ರಕ್ಷಣಾ ಇಲಾಖೆಗೆ ಇದೊಂದು ಕಪ್ಪು ಚುಕ್ಕೆಯೇ ಆಗಿದೆ. ಅವಘಡಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಕೇಂದ್ರವನ್ನು, ರಾಜ್ಯದ ಬಿಜೆಪಿ ನಾಯಕರು ರಾಜ್ಯ ಸರಕಾರವನ್ನೂ ದೂರುತ್ತಿದ್ದಾರೆ.

ವೈಮಾನಿಕ ಪ್ರದರ್ಶನ ಕೇಂದ್ರ ರಕ್ಷಣಾ ಇಲಾಖೆಗೆ ಸಂಬಂಧಿಸಿದ್ದಾಗಿರುವುದರಿಂದ ಭದ್ರತೆಯ ಬಹುಪಾಲು ಹೊಣೆಗಾರಿಕೆಯನ್ನು ಕೇಂದ್ರವೇ ವಹಿಸಿಕೊಳ್ಳುತ್ತದೆ. ಪಾರ್ಕಿಂಗ್ ಸ್ಥಳದ ಭದ್ರತೆಯ ಹೊಣೆಯನ್ನು ರಕ್ಷಣಾ ಇಲಾಖೆ ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಿದೆ ಎನ್ನಲಾಗುತ್ತಿದೆ. ಹಾಗೆಂದು ಇದರಲ್ಲಿ ತನ್ನ ಪಾತ್ರವನ್ನು ರಾಜ್ಯ ಸರಕಾರ ಸಂಪೂರ್ಣ ನಿರಾಕರಿಸುವಂತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ದುರಂತಕ್ಕೆ ಸಂಬಂಧಪಟ್ಟು ಸಮಭಾಗಿಗಳು. ಈ ಬೆಂಕಿಯು ಪ್ರದರ್ಶನ ನಡೆಯುವ ಸ್ಥಳಕ್ಕೂ ವ್ಯಾಪಿಸಿದ್ದಿದ್ದರೆ ಆಗಬಹುದಾದ ಅನಾಹುತಗಳನ್ನು ಊಹಿಸುವುದಕ್ಕೆ ಅಸಾಧ್ಯ. ದೇಶದ ರಕ್ಷಣೆಗೆ ಸಂಬಂಧಿಸಿದ ಪ್ರದರ್ಶನದ ಸಂದರ್ಭದಲ್ಲೇ ಇಂತಹದೊಂದು ವೈಫಲ್ಯ ಸಂಭವಿಸಿರುವುದು ಒಟ್ಟು ಪ್ರದರ್ಶನದ ಉದ್ದೇಶಕ್ಕೆ ಧಕ್ಕೆ ತಂದಿದೆ. ಈ ದುರಂತ ಸಂಭವಿಸುವುದಕ್ಕೆ ಕಾರಣವೇನು? ಎನ್ನುವುದು ತಿಳಿದು ಬಂದಿಲ್ಲ. ಬೆಂಕಿಯ ಮೂಲ ಯಾವುದು ಎನ್ನುವುದರ ಕುರಿತಂತೆ ತನಿಖೆ ನಡೆಯುತ್ತಿದೆ. ಆದರೂ ಬೆಂಕಿ ಕಾಣಿಸಿಕೊಂಡಾಕ್ಷಣವೇ ಯಾಕೆ ಅದನ್ನು ತಡೆಯಲು ಸಾಧ್ಯವಾಗಿಲ್ಲ? ಭದ್ರತಾ ಸಿಬ್ಬಂದಿಯ ಗಮನಕ್ಕೆಬಂದಿಲ್ಲ ಯಾಕೆ? ಸುಮಾರು 300 ಕಾರುಗಳು ಬೆಂಕಿಗೆ ಆಹುತಿಯಾಗುವವರೆಗೂ ಸಂಬಂಧಪಟ್ಟವರು ಯಾಕೆ ಸುಮ್ಮಗಿದ್ದರು? ಅಗ್ನಿ ಶಾಮಕ ದಳ ಏನು ಮಾಡುತ್ತಿತ್ತು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟವಾದ ಉತ್ತರ ದೊರಕಿಲ್ಲ.

ಇದನ್ನು ಒಂದು ಆಕಸ್ಮಿಕ ದುರಂತ ಎಂದು ಕರೆದು ಮುಗಿಸಿ ಬಿಡುವಂತಿಲ್ಲ. ಯಾಕೆಂದರೆ ಈ ಅವಘಡದಲ್ಲಿ ನಮ್ಮ ರಕ್ಷಣಾ ಇಲಾಖೆಯ ಪ್ರತಿಷ್ಠೆಗೆ ಹಾನಿಯಾಗಿದೆ. ದುರಂತದ ಹಿಂದೆ ದುಷ್ಕರ್ಮಿಗಳ ಕೈವಾಡವಿದೆಯೇ? ಅವರ ಉದ್ದೇಶ ಕೇವಲ ಕಾರ್‌ಗಳನ್ನು ಧ್ವಂಸಗೊಳಿಸುವುದಷ್ಟೇ ಆಗಿತ್ತೆ ಅಥವಾ ಅದಕ್ಕಿಂತ ದೊಡ್ಡ ಹಾನಿಯ ಸಂಚನ್ನೇನಾದರೂ ರೂಪಿಸಿದ್ದರೇ? ಇವೆಲ್ಲವುಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಈ ಬಗ್ಗೆ ಗಂಭೀರ ತನಿಖೆ ನಡೆಯುವುದು ಅತ್ಯಗತ್ಯ. ಇದೇ ಸಂದರ್ಭದಲ್ಲಿ ಕಾರ್ ಪಾರ್ಕಿಂಗ್‌ನ ಭದ್ರತೆಯ ಹೊಣೆ ಹೊತ್ತವರನ್ನು ವಿಚಾರಣೆ ನಡೆಸಿ ಅವರ ಬೇಜವಾಬ್ದಾರಿ ಇದರಲ್ಲಿ ಎಷ್ಟರಮಟ್ಟಿಗಿದೆ ಎನ್ನುವುದನ್ನೂ ಹುಡುಕಿ ತೆಗೆಯಬೇಕಾಗಿದೆ. ದುರಂತ ಪೂರ್ವಯೋಜಿತ ಎನ್ನುವುದನ್ನು ಸಮರ್ಥಿಸಲು ಕೆಲವರು ಕೆಲವು ವಾದಗಳನ್ನು ಮಂಡಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುದೇನೆಂದರೆ, ಏರ್‌ಶೋವನ್ನು ಬೆಂಗಳೂರಿನಿಂದ ಉತ್ತರ ಭಾರತಕ್ಕೆ ವರ್ಗಾಯಿಸಲು ನಡೆಸಿದ ಸಂಚಿನ ಭಾಗ ಇದಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಆಡಿಕೊಳ್ಳುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ಬೆಂಗಳೂರಿನಲ್ಲಿ ಏರ್‌ಶೋ ನಡೆಸುವುದು ಯುಕ್ತವಲ್ಲ ಆದುದರಿಂದ ಅನಿವಾರ್ಯವಾಗಿ ಅದನ್ನು ಉತ್ತರ ಭಾರತಕ್ಕೆ ವರ್ಗಾಯಿಬೇಕಾಗಿದೆ ಎನ್ನುವ ಸಮರ್ಥನೆಗಾಗಿಯೇ ಇಂತಹದೊಂದು ಅವಘಡವನ್ನು ದುಷ್ಕರ್ಮಿಗಳ ಮೂಲಕ ಸೃಷ್ಟಿಸಲಾಗಿದೆ ಎಂದೂ ಆಡಿಕೊಳ್ಳುತ್ತಿದ್ದಾರೆ. ಆದರೆ ಇದು ನಿಜವಾಗಿರಬೇಕು ಎಂದೇನಿಲ್ಲ.

ಇದೇ ಸಂದರ್ಭದಲ್ಲಿ ಇಂತಹದೊಂದು ಮಹತ್ವದ ಕಾರ್ಯಕ್ರಮದಲ್ಲಿ ಅವಘಡ ನಡೆಯುವುದು ರಾಜ್ಯದ ಮೈತ್ರಿ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸುವ ವಿಷಯ. ಈ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ಶಕ್ತಿಗಳೂ ದುರಂತದ ಹಿಂದಿರುವ ಸಾಧ್ಯತೆಗಳಿವೆ ಎಂದು ಹಲವರು ಚರ್ಚಿಸುತ್ತಿದ್ದಾರೆ. ಈ ಆಯಾಮವನ್ನು ನಿರ್ಲಕ್ಷಿಸುವಂತಿಲ್ಲ. ಗಂಭೀರವಾದ ತನಿಖೆ ನಡೆದಾಗಲಷ್ಟೇ ವಾಸ್ತವ ಏನು ಎನ್ನುವುದು ಬೆಳಕಿಗೆ ಬರಬಹುದು. ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನೂ ನಾವು ಗಮನಿಸಬೇಕಾಗಿದೆ. ದೇಶದ ಪ್ರತಿಷ್ಠಿತ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ರಕ್ಷಣಾ ಇಲಾಖೆಗೆ ಈವರೆಗೆ ಕೊಟ್ಟ ಕೊಡುಗೆ ಅತ್ಯಂತ ಹಿರಿದಾದುದು. ಇಂತಹ ಸಂಸ್ಥೆಯನ್ನು ಸರ್ವನಾಶ ಮಾಡಿ, ಅದರ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದನ್ನು ಕೂರಿಸುವ ಹುನ್ನಾರದ ಕುರಿತು ಕಳೆದ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಹಾಲ್ ಸಂಸ್ಥೆಗೆ ಸರಕಾರ ಹಣವನ್ನು ಬಿಡುಗಡೆ ಮಾಡದೇ ಇರುವುದು, ರಕ್ಷಣಾ ಇಲಾಖೆ ಕೊಂಡುಕೊಂಡ ಯುದ್ಧ ವಿಮಾನಗಳ ಹಣ ಪಾವತಿ ಬಾಕಿ ಉಳಿಸಿರುವುದು, ಸಿಬ್ಬಂದಿಗೆ ನೀಡಲು ಸಂಸ್ಥೆಯ ಬಳಿ ಹಣದ ಕೊರತೆ ಎದುರಾಗಿರುವುದು, ಸಿಬ್ಬಂದಿಯ ಸಂಖ್ಯೆಯನ್ನು ಅನಿವಾರ್ಯವಾಗಿ ಇಳಿಸುವ ಸನ್ನಿವೇಶ ನಿರ್ಮಾಣವಾಗಿರುವುದು ಇವೆಲ್ಲವೂ ಇತ್ತೀಚಿನ ಬೆಳವಣಿಗೆ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದಲ್ಲಿ ಮಹತ್ವದ ಹುದ್ದೆಯಲ್ಲಿರುವ ನಾಯಕರು ಹಾಲ್ ಕುರಿತಂತೆ ಕೆಳಮಟ್ಟದ ಹೇಳಿಕೆಗಳನ್ನು ನೀಡಿ ಅದರ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಇವೆಲ್ಲಕ್ಕೆ ಪೂರಕವಾಗಿ, ಹಾಲ್ ಕೆಲವು ಅವಘಡಗಳಿಗೆ ಸಾಕ್ಷಿಯಾಗುತ್ತಿದೆೆ.

ಈ ಅವಘಡಗಳು ಹಾಲ್ ಮುಚ್ಚಿಸುವ ಕಾರ್ಯಕ್ರಮದ ಭಾಗವಾಗಿದೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ. ಮುಖ್ಯವಾಗಿ ರಫೇಲ್ ಒಪ್ಪಂದವನ್ನು ಹಾಲ್ ಸಂಸ್ಥೆಯ ಬದಲಿಗೆ ಅಂಬಾನಿ ಕಂಪೆನಿಗೆ ನೀಡಿರುವ ಕುರಿತು ಸರಕಾರಕ್ಕೆ ಈವರೆಗೆ ಸ್ಪಷ್ಟ ಸಮರ್ಥನೆಯನ್ನು ನೀಡಲು ಸಾಧ್ಯವಾಗಿಲ್ಲ. ರಫೇಲ್ ಒಪ್ಪಂದದಲ್ಲಿ ಯಾಕೆ ರಿಲಯನ್ಸ್‌ನ್ನು ಒಳಗೊಳ್ಳುವಂತೆ ಮಾಡಲಾಯಿತು ಎನ್ನುವುದನ್ನು ಸಮರ್ಥಿಸುವುದಕ್ಕಾಗಿ ಹಾಲ್ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕೆಡಿಸುವುದು ಕೆಲವರಿಗೆ ಅತ್ಯಗತ್ಯವಾಗಿದೆ. ಆದುದರಿಂದಲೇ ಹಾಲ್ ಸಂಸ್ಥೆಯಲ್ಲಿ ಮತ್ತು ಏರ್‌ಶೋ ಸಂದರ್ಭದಲ್ಲಿ ನಡೆದ ಅವಘಡಗಳು ಗಂಭೀರ ತನಿಖೆಯೊಂದನ್ನು ಬೇಡುತ್ತಿದೆ. ಆದರೆ ಕೇಂದ್ರ ಸರಕಾರದಿಂದ ಅಂತಹದೊಂದು ಗಂಭೀರ ತನಿಖೆಯನ್ನು ಸದ್ಯಕ್ಕಂತೂ ನಿರೀಕ್ಷಿಸಲು ಅಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News