ಕಪಿಲ್ ಶರ್ಮಾ ಶೋನಲ್ಲಿ ಬಿಜೆಪಿ ಸಂಸದ: ಸಿಧು ವಿರುದ್ಧ ಸಮರ ಸಾರಿದ್ದ ಬಿಜೆಪಿ ಐಟಿ ಸೆಲ್ ಗೆ ಮುಖಭಂಗ

Update: 2019-02-25 12:07 GMT

ಹೊಸದಿಲ್ಲಿ, ಫೆ.25: ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಮತ್ತು ಕಪಿಲ್ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ ಬಿಜೆಪಿ ಐಟಿ ಸೆಲ್‍ ಮುಜುಗರಕ್ಕೀಡಾಗಿದೆ. ಯಾವ ಶೋ ಮತ್ತು ಚಾನಲ್ ವಿರುದ್ಧ ಬಿಜೆಪಿ ಸಮರ ಸಾರಿತ್ತೋ ಆ ಶೋನಲ್ಲೇ ಪಕ್ಷದ ಸಂಸದ ಮನೋಜ್ ತಿವಾರಿ ಭಾಗವಹಿಸಿದ್ದಾರೆ.

ಪುಲ್ವಾಮ ದಾಳಿ ಬಳಿಕ ನವಜ್ಯೋತ್ ಸಿಂಗ್ ಸಿಧು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಸಿಧು ಅವರನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದು ಮಾತ್ರವಲ್ಲದೇ ಕಪಿಲ್ ಶರ್ಮಾ ಶೋ ಬಹಿಷ್ಕರಿಸುವಂತೆಯೂ ಬಿಜೆಪಿ ಐಟಿ ಸೆಲ್ ಟ್ವಿಟರ್ ಸಮರ ನಡೆಸಿತ್ತು. #BoycottSidhu, #BoycottSonyTV ಮತ್ತು #BoycottKapilSharma ಹ್ಯಾಶ್‍ ಟ್ಯಾಗ್‍ ಗಳು ಹಲವು ದಿನಗಳ ಕಾಲ ಟ್ವಿಟರ್‍ನಲ್ಲಿ ಟ್ರೆಂಡಿಂಗ್‍ ನಲ್ಲಿದ್ದವು.

ಸಿಧು ಬದಲಿಗೆ ಕಪಿಲ್‍ ಶರ್ಮಾ ಶೋಗೆ ಅರ್ಚನಾ ಪುರನ್ ಸಿಂಗ್ ಅವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷರೂ ಆಗಿರುವ ಮನೋಜ್ ತಿವಾರಿ, ಶೋದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ರಚಾರಕ್ಕೆ ಅವರೊಂದಿಗೆ ದೇಶದ ಮನೋರಂಜನಾ ಕ್ಷೇತ್ರದ ಹಲವು ದಿಗ್ಗಜರು ಸೇರಿಕೊಂಡಿದ್ದಾರೆ.

ಇನ್ನೂ ಅಚ್ಚರಿಯೆಂದರೆ ಶೋ ವೇಳೆ ಸಿಧು ಹಾಗೂ ತಿವಾರಿ ಪರಸ್ಪರ ಗೌರವ ಮತ್ತು ಸ್ನೇಹ ಪ್ರದರ್ಶಿಸಿದರು. ನಿರೂಪಕ ಕಪಿಲ್ ಸಹಜವಾಗಿಯೇ, "ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಇಂಥ ಪ್ರೀತಿಯನ್ನು ಯಾರೂ ಕಾಣಲಾರರು" ಎಂದು ಪ್ರತಿಕ್ರಿಯಿಸಿದರು. ಬಿಜೆಪಿಯ ಅಪಪ್ರಚಾರವನ್ನು ಪಕ್ಕಕ್ಕಿಟ್ಟು ತಿವಾರಿ, ಕಪಿಲ್ ಶರ್ಮಾ ಅವರ ಗುಣಗಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News