ಅಯೋಧ್ಯೆಯ ಕುರಿತು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ರಾಹುಲ್ ಗಾಂಧಿಗೆ ಪಿಎಫ್‌ಐ ಆಗ್ರಹ

Update: 2019-02-26 04:39 GMT

ಬೆಂಗಳೂರು, ಫೆ.26: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತಂತೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಹೇಳಿಕೆಯ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್ ಆಗ್ರಹಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೇರಿಸಿದರೆ ಪಕ್ಷವು ರಾಮಮಂದಿರ ನಿರ್ಮಾಣದ ಭರವಸೆ ನೀಡುವುದು ಎಂದು ಹರೀಶ್ ರಾವತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ದೇಶದ ಅತಿ ದೊಡ್ಡ ಜಾತ್ಯತೀತ ಪಕ್ಷವಾಗಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರ ಈ ವಿವಾದಾತ್ಮಕ ಹೇಳಿಕೆಯು ಅಚ್ಚರಿಯಿಂದ ಕೂಡಿದೆ ಹಾಗೂ ಅಷ್ಟೇ ನಿರಾಶಾದಾಯಕವೂ ಆಗಿದೆ. ಹರೀಶ್ ರಾವತ್ ರಾಮಮಂದಿರ ನಿರ್ಮಾಣದ ಕುರಿತಂತೆ ಎರಡನೇ ಬಾರಿ ಒಂದೇ ರೀತಿಯ ಹೇಳಿಕೆ ನೀಡಿರುವುದರಿಂದ ಇದೊಂದು ಪ್ರಮಾದದ ಹೇಳಿಕೆಯಾಗಿ ನೋಡಲಾಗದು ಎಂದವರು ಅಭಿಪ್ರಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತನ್ನ ಪ್ರಧಾನ ಕಾರ್ಯದರ್ಶಿಯ ಹೇಳಿಕೆಯನ್ನು ಒಪ್ಪಿಕೊಳ್ಳುತ್ತದೆಯೋ ಅಥವಾ ಅದನ್ನು ತಿರಸ್ಕರಿಸುತ್ತದೆಯೋ ಎನ್ನುವ ಕುರಿತಂತೆ ಇನ್ನೂ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷ ಹರೀಶ್ ರಾವತ್ ರ ಹೇಳಿಕೆಯನ್ನು ಬೆಂಬಲಿಸದಿದ್ದರೆ, ಪಕ್ಷದ ಸಿದ್ಧಾಂತದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಅವರ ವಿರುದ್ಧ ಪಕ್ಷ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ದೇಶ ಅರಿತುಕೊಳ್ಳಲು ಬಯಸುತ್ತಿದೆ ಎಂದು ಇ.ಅಬೂಬಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News