ತಜ್ಞರ ತಂಡ ನಿಯೋಜಿಸಲು ವಿನಂತಿ ಮಾಡಿಕೊಳ್ಳಲಾಗಿದೆ: ಹೈಕೋರ್ಟ್‌ಗೆ ಹೇಳಿಕೆ ನೀಡಿದ ಆರೋಗ್ಯ ಇಲಾಖೆ

Update: 2019-02-26 16:55 GMT

ಬೆಂಗಳೂರು, ಫೆ.26: ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಉಲ್ಬಣಿಸಿರುವ ಮಾರಕ ಮಂಗನ ಕಾಯಿಲೆಯ ದೀರ್ಘಾವಧಿ ನಿಯಂತ್ರಣಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ತಜ್ಞರ ತಂಡ ನಿಯೋಜಿಸುವಂತೆ ಹೊಸದಿಲ್ಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ಗೆ ವಿನಂತಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮಂಗಳವಾರ ಹೈಕೋರ್ಟ್‌ಗೆ ತಿಳಿಸಿದೆ.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ನಿರ್ದೇಶಿಸುವಂತೆ ಶಿವಮೊಗ್ಗ ನಗರದ ನಿವಾಸಿ ವಕೀಲ ಕೆ.ಪಿ. ಶ್ರೀಪಾಲ್ ಹಾಗೂ ಸೊರಬ ತಾಲೂಕಿನ ಚಿಕ್ಕಚೌಟಿ ಗ್ರಾಮದ ನಿವಾಸಿ ವಕೀಲ ಎನ್.ಜಿ. ರಮೇಶಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಶಿವಮೊಗ್ಗ ವೈರಾಣು ತಪಾಸಣಾ ಪ್ರಯೋಗಾಲಯದ ಪ್ರಭಾರಿ ಉಪ ನಿರ್ದೇಶಕ ಡಾ. ಬಿ.ಎಸ್. ಶಂಕರಪ್ಪ ಪ್ರಮಾಣಪತ್ರ ಸಲ್ಲಿಸಿದರು.

ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ಪ್ರಸಕ್ತ ವರ್ಷ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 1,512 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಶಂಕಿಸಲಾಗಿದ್ದು, ಈ ಪೈಕಿ 189 ಜನರಲ್ಲಿ ಕಾಯಿಲೆ ದೃಢಪಟ್ಟಿದೆ. ಇಲ್ಲಿಯವರೆಗೆ ಮಂಗನ ಕಾಯಿಲೆಗೆ 8 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 596 ಮಂಗಗಳು ಮರಣ ಹೊಂದಿವೆ. ಈ ವರ್ಷ ರೋಗ ಲಕ್ಷಣಗಳು ಬೆಳಕಿಗೆ ಬಂದ ತಕ್ಷಣ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ರೋಗ ಬಾಧಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದು, ಸಮಿತಿಯು ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಕಳೆದ ಐದು ವರ್ಷಗಳ ಸರಾಸರಿ ಲೆಕ್ಕದ ಆಧಾರದಲ್ಲಿ ಅಂದಾಜು 70 ರಿಂದ 85 ಸಾವಿರ ಪ್ರಮಾಣದಲ್ಲಿ ಲಸಿಕೆ ಅವಶ್ಯಕವಿದೆ. ಈ ಲಸಿಕೆಯ ಬಾಳಿಕೆ ಕೇವಲ 8 ತಿಂಗಳಷ್ಟೇ. ಹೀಗಾಗಿ, ಇದನ್ನು ದೀರ್ಘಾವಧಿವರೆಗೆ ಶೇಖರಿಸಿ ಇಡಲು ಸಾಧ್ಯವಿಲ್ಲ. ಜಿಲ್ಲಾಡಳಿತ 71,689 ಲಸಿಕೆ ಪೂರೈಸುವ ಸಾಮರ್ಥ್ಯ ಹೊಂದಿದೆ. ಹೆಚ್ಚವರಿ 2.71 ಲಕ್ಷ ಲಸಿಕೆ ಖರೀದಿಗೆ ಬೆಂಗಳೂರಿನ ‘ಪ್ರಾಣಿ ಆರೋಗ್ಯ ಹಾಗೂ ಪಶು ಜೈವಿಕ ಸಂಸ್ಥೆಗೆ’ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಗನ ಕಾಯಿಲೆ ತಡೆ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲು 2019-20ನೆ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಈ ವರ್ಷ ಜೂನ್‌ವರೆಗೆ 1.65 ಲಕ್ಷ ಡಿಎಂಪಿ ಬಾಟಲ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅದರಂತೆ ಇಲ್ಲಿಯ ತನಕ 59 ಸಾವಿರ ಡಿಎಂಪಿ ಬಾಟಲ್‌ಗಳನ್ನು ಕಾಯಿಲೆ ಬಾಧಿತ ಪ್ರದೇಶಗಳಿಗೆ ಪೂರೈಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News