ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವು ಶತಸಿದ್ಧ: ಮಾಜಿ ಶಾಸಕ ಮಧು ಬಂಗಾರಪ್ಪ

Update: 2019-02-26 18:36 GMT

ಶಿವಮೊಗ್ಗ, ಫೆ. 26: 'ಈ ಬಾರಿ ಸೋಲಲು ಬಂದಿಲ್ಲ. ಗೆಲುವಿನ ದಡ ಸೇರಲು ಬಂದಿದ್ದೆನೆ. ಪ್ರಿಪರೇಟರಿ (ಉಪ ಚುನಾವಣೆ) ಯಲ್ಲಿ ಸೋತಿದ್ದೆ. ಮುಖ್ಯ ಪರೀಕ್ಷೆ (ಸಾರ್ವತ್ರಿಕ ಚುನಾವಣೆ) ಯಲ್ಲಿ ಗೆದ್ದೆ ಗೆಲ್ಲುತ್ತೇನೆಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಮೂರು ತಿಂಗಳ ಹಿಂದೆ ಶಿವಮೊಗ್ಗ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ತಾನು ಸ್ಪರ್ಧಿಸಿ ಪರಾಭವಗೊಳ್ಳಲು, ಪೂರ್ವಸಿದ್ದತೆಯ ಕೊರತೆ ಮುಖ್ಯ ಕಾರಣವಾಗಿತ್ತು. ಪ್ರಚಾರಕ್ಕೆ ಹೆಚ್ಚಿನ ಸಮಯಾವಕಾಶ ಸಿಗಲಿಲ್ಲ. ಕೇವಲ 13 ದಿನ ಲಭ್ಯವಾಗಿದ್ದರಿಂದ, ಕ್ಷೇತ್ರದ ಮತದಾರರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದರು. 

ಈಗಾಗಲೇ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರವರು ತನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಉಪ ಚುನಾವಣೆಯಲ್ಲಾದ ಸಿದ್ಧತೆಯ ಕೊರತೆ, ಈ ಚುನಾವಣೆಯಲ್ಲಾಗದಂತೆ ಎಚ್ಚರವಹಿಸಲಾಗುವುದು. ಸಕಲ ಸಿದ್ಧತೆಯೊಂದಿಗೆ ಚುನಾವಣೆ ನಡೆಸುತ್ತೇನೆ. ಪ್ರಿಪೇಟರಿಯಲ್ಲಿ ಮಿಸ್ ಮಾಡಿಕೊಂಡಿದ್ದೆ. ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ. ಆ ವಿಶ್ವಾಸ ನನ್ನಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾತುಕತೆ ನಡೆದಿದೆ. ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ನಾನು ಕ್ಷೇತ್ರದಾದ್ಯಂತ ಇಂದಿನಿಂದಲೇ ವಿಧ್ಯುಕ್ತವಾಗಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. ಮತದಾರರ ವಿಶ್ವಾಸ ಗಳಿಸುವ ಕಾರ್ಯ ನಡೆಸಲಿದೆ ಎಂದು ಹೇಳಿದರು. 

ಕ್ಷೇತ್ರದ ಏಳು ಕಡೆ ಬಿಜೆಪಿ ಪಕ್ಷದ ಶಾಸಕರಿದ್ದರೂ ಕಳೆದ ಉಪ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಗೆ ಸಂದ ಮತದ ಪ್ರಮಾಣ ಕಡಿಮೆಯಾಗಿತ್ತು. ಅತ್ಯಲ್ಪ ಮತಗಳ ಅಂತರದಿಂದ ತಾನು ಪರಾಭವಗೊಂಡಿದ್ದೆ. ಈ ಬಾರಿ ಅತ್ಯಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದೇನೆ. ಬಿಜೆಪಿ ಪರಾಭವ ನಿಶ್ಚಿತವಾಗಿದೆ ಎಂದು ತಿಳಿಸಿದರು. 

ಉತ್ತಮ ಕಾರ್ಯ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತದಲ್ಲಿ ಹೊಸ ಬದಲಾವಣೆ ತಂದಿದ್ದಾರೆ. ಇತ್ತೀಚೆಗೆ ಮಂಡಿಸಿದ ಬಜೆಟ್‍ನಲ್ಲಿ ಶಿವಮೊಗ್ಗ ಜಿಲ್ಲೆಯ ಹಲವು ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ಹಾಗೆಯೇ ಜಿಲ್ಲೆಯ ಹಲವು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಸಿದ್ದಾರೆ. ಇದೆಲ್ಲವೂ ತನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. 

ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಅರಣ್ಯ ವಾಸಿಗಳಿಗೆ ಆಗಿರುವ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಹಾಗೆಯೇ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಇದೆ ಸಂದರ್ಭದಲ್ಲಿ ಒತ್ತಾಯಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಂ.ಶ್ರೀಕಾಂತ್, ಆರ್.ಎಂ.ಮಂಜುನಾಥಗೌಡ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News