ಕಾಡನ್ನು ಕಾಡುವ ಬೆಂಕಿ

Update: 2019-02-27 06:14 GMT

ಇತ್ತೀಚೆಗೆ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಕಾರುಗಳು ಬೆಂಕಿಗೆ ಆಹುತಿಯಾಗಿ ಮಾಧ್ಯಮಗಳಲ್ಲಿ ಸುದ್ದಿಯಾದವು. ರಕ್ಷಣಾ ಇಲಾಖೆಯ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವುದರಿಂದ ‘ಭದ್ರತೆ’ಯ ಕುರಿತಂತೆ ಸಾಕಷ್ಟು ಕಳವಳಗಳು ವ್ಯಕ್ತವಾದವು. ಇದೇ ಹೊತ್ತಿನಲ್ಲಿ ರಾಜ್ಯದ ವಿಶ್ವ ವಿಖ್ಯಾತ ಹುಲಿ ಸಂರಕ್ಷಿತ ಅಭಯಾರಣ್ಯ ಬಂಡೀಪುರದಲ್ಲಿಯೂ ಬೆಂಕಿ ಹರಡಿಕೊಂಡಿತ್ತು. ಕಾಡಿಗೆ ಬಿದ್ದ ಬೆಂಕಿಯು ಕಾರುಗಳಿಗೆ ಬಿದ್ದ ಬೆಂಕಿಯಷ್ಟು ಮಹತ್ವವನ್ನು ಪಡೆದುಕೊಳ್ಳಲಿಲ್ಲ. ಚರ್ಚೆಗೂ ಒಳಗಾಗಲಿಲ್ಲ. ಕಾಡ್ಗಿಚ್ಚನ್ನು ನಾವು ‘ಪ್ರಕೃತಿ ವಿಕೋಪ’ದ ಸಾಲಿಗೆ ಸೇರಿಸಿ ಬಿಟ್ಟಿದ್ದೇವೆ. ಬೆಂಕಿಗೆ ಆಹುತಿಯಾಗುವ ಕಾಡು ಪ್ರಾಣಿಗಳು, ಮರಗಳು, ಪಕ್ಷಿಗಳು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲವಾದುದರಿಂದ ರಾಜಕಾರಣಿಗಳಿಗೂ ಆ ಬೆಂಕಿಯ ಕುರಿತಂತೆ ವಿಶೇಷ ಆಸಕ್ತಿಯಿಲ್ಲ. ಈ ಕಾರಣದಿಂದಲೇ, ಪ್ರತಿ ವರ್ಷವೂ ರಾಜ್ಯದಲ್ಲಿ ಕಾಡ್ಗಿಚ್ಚು ಹಲವು ಎಕರೆ ಕಾಡುಗಳನ್ನು ಆಹುತಿ ತೆಗೆದುಕೊಳ್ಳುತಿದೆೆ. ಕಳೆದ ವರ್ಷ ಚಿಕ್ಕಮಗಳೂರು, ನಾಗರಹೊಳೆ ಸೇರಿದಂತೆ ಹಲವೆಡೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದವು. ನೆರೆ, ಬರಗಾಲದ ಸಾಲಿಗೆ ನಾವು ಈ ಕಾಡ್ಗಿಚ್ಚನ್ನು ಸೇರಿಸಿ ಹೊಣೆಗಾರಿಕೆಯಿಂದ ಪಾರಾಗಿದ್ದೇವೆ.

ಭಾರತದಲ್ಲಿ ಕಾಡ್ಗಿಚ್ಚು ಎನ್ನುವುದು ಒಂದು ಅವಘಡ ಮಾತ್ರವಲ್ಲ, ರಾಜಕೀಯವೂ ಕೂಡ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಕಾಡ್ಗಿಚ್ಚುಗಳ ಹಿಂದೆ ಮನುಷ್ಯ ಕೈಗಳು ಕೆಲಸ ಮಾಡುತ್ತಿವೆ. ಕಾಡು ಎನ್ನುವುದು ಕಾರ್ಪೊರೇಟ್ ಶಕ್ತಿಗಳಿಗೆ ಬಗೆದಷ್ಟೂ ಮುಗಿಯದ ಸಂಪತ್ತಿನ ಗಣಿ. ಆದುದರಿಂದಲೇ ಅವರಿಗೆ ಕಾಡಿನೊಳಗೆ ಅನಾಯಾಸವಾಗಿ ಪ್ರವೇಶ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಅವರ ದುರಾಸೆಗೆ ಪೂರಕವಾದ ತೀರ್ಪನ್ನು ನೀಡಿ, ಲಕ್ಷಾಂತರ ಮಂದಿ ಆದಿವಾಸಿಗಳನ್ನು ಬಲವಂತವಾಗಿ ಎತ್ತಂಗಡಿ ಮಾಡಲು ತನ್ನ ಸಮ್ಮತಿಯನ್ನು ನೀಡಿದೆ. ಆ ಮೂಲಕ ಕಾಡನ್ನೇ ದೇವರೆಂದು ಭಾವಿಸಿ ಬದುಕುತ್ತಾ, ಅದನ್ನು ರಕ್ಷಿಸುತ್ತಾ ಬಂದಿದ್ದ ಆದಿವಾಸಿಗಳ ಎದೆಗೆ ನ್ಯಾಯವ್ಯವಸ್ಥೆ ಕಿಚ್ಚಿಟ್ಟಿದೆ. ಕಾಡನ್ನು ದೋಚಲು ಹೊಂಚು ಹಾಕಿ ಕೂತವರಿಗೆ ಆದಿವಾಸಿಗಳು ಬಹುದೊಡ್ಡ ತೊಡಕಾಗಿದ್ದರು. ಇದೀಗ ಆ ತೊಡಕು ನಿವಾರಣೆಯಾದಂತಾಗಿದೆ. ಮುಂದಿನ ದಿನಗಳಲ್ಲಿ ಕಾಡಿನ ಬೆಂಕಿ ಇನ್ನಷ್ಟು ಭೀಕರವಾಗಿರುತ್ತದೆ ಎನ್ನುವುದರ ಸೂಚನೆಯಾಗಿದೆ ಇದು.

ಮುಖ್ಯವಾಗಿ ಕಾಡಿನಲ್ಲಿ ಬೆಂಕಿ ಹರಡುವುದರ ಹಿಂದೆ ಮನುಷ್ಯ ಕೈವಾಡವಿರುವುದು ಈ ಹಿಂದೆಯೇ ಹಲವು ಬಾರಿ ಬೆಳಕಿಗೆ ಬಂದಿದೆ. ಸ್ಥಳೀಯ ರಾಜಕೀಯಗಳು, ಕಾರ್ಪೊರೇಟ್ ವಲಯಗಳ ದುರುದ್ದೇಶ, ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ಇವೆಲ್ಲವೂ ಜೊತೆಯಾದಾಗ ಕಾಡು ಭೀಕರ ಬೆಂಕಿಗೆ ಆಹುತಿಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿಯೇ ಇದರಲ್ಲಿ ನೇರವಾಗಿ ಶಾಮೀಲಾಗುವುದಿದೆ. ಕಾಡಿನಲ್ಲಿರುವ ಮರಗಳನ್ನು ಮರಗಳ್ಳರಿಗೆ ಮಾರಾಟ ಮಾಡಲು ನೆರವಾಗಿ ಬಳಿಕ, ಮರದ ಲೆಕ್ಕಗಳನ್ನು ಕಾಡ್ಗಿಚ್ಚಿನ ಮೂಲಕ ಜಮಾ ಮಾಡುತ್ತಾರೆ. ಕಳವಾಗಿರುವ ಮರಗಳನ್ನೆಲ್ಲ ಕಾಡ್ಗಿಚ್ಚಿನಲ್ಲಿ ಸುಟ್ಟು ಹೋದವು ಎಂದು ಲೆಕ್ಕ ಕೊಡುತ್ತಾರೆ. ಇದೇ ಸಂದರ್ಭದಲ್ಲಿ ಅರಣ್ಯದಲ್ಲಿರುವ ಆದಿವಾಸಿಗಳ ಬದುಕನ್ನು ನರಕಗೊಳಿಸಲು, ಆ ಮೂಲಕ ಅವರು ತಾವಾಗಿಯೇ ಅರಣ್ಯ ಬಿಟ್ಟು ಹೋಗುವಂತೆ ಮಾಡಲು ಕೃತಕ ಕಾಡ್ಗಿಚ್ಚನ್ನು ಸೃಷ್ಟಿಸುವುದಿದೆ. ಇಂತಹ ಕಾಡ್ಗಿಚ್ಚಿನ ಮೂಲಕವೇ ಈ ದೇಶದಲ್ಲಿ ಲಕ್ಷಾಂತರ ಆದಿವಾಸಿಗಳು ಕಾಡಿನಿಂದ ಹೊರ ಬಿದ್ದದ್ದಿದೆ. ಇದೇ ಸಂದರ್ಭದಲ್ಲಿ ಕಾಡಿನ ಮೇಲೆ ಹಿಡಿತ ಸಾಧಿಸುವ ಕಾಡುಗಳ್ಳರ ಗುಂಪುಗಳ ನಡುವಿನ ತಿಕ್ಕಾಟವೂ ಅಂತಿಮವಾಗಿ ಕಾಡಿಗೆ ಬೆಂಕಿ ಹಚ್ಚುವುದರಿಂದ ಮುಕ್ತಾಯವಾಗುವುದಿದೆ. ಅಥವಾ ಕೆಲವೊಮ್ಮೆ ಅರಣ್ಯಾಧಿಕಾರಿಗಳ ಮೇಲಿನ ಸಿಟ್ಟಿನಿಂದ ಕಾಡಿಗೆ ಬೆಂಕಿ ಹಚ್ಚುವ ದುಷ್ಟರಿದ್ದಾರೆ.

ಒಂದೆಡೆ ಕಾಡಿಗೆ ಬೆಂಕಿ ಬಿದ್ದ ಹಾಗೆಯೇ ಮಗದೊಂದೆಡೆ ಆ ಬೆಂಕಿಯಿಂದ ಬೀಡಿ ಹಚ್ಚುವ ದೊಡ್ಡ ಸಂಖ್ಯೆಯ ರಾಜಕಾರಣಿಗಳಿದ್ದಾರೆ. ಈಶಾನ್ಯ ಭಾರತದಲ್ಲಿ ಕಾಡಿನೊಳಗೆ ಬೃಹತ್ ಉದ್ಯಮಿಗಳು ಪ್ರವೇಶಿಸಬೇಕಾದರೆ ಮೊದಲು ಕಾಡಿಗೆ ಬೆಂಕಿ ಬೀಳಬೇಕು. ಗಣಿಗಾರಿಕೆಯಂತಹ ಯೋಜನೆಗಳನ್ನು ರೂಪಿಸುವುದರ ಹಿಂದೆಯೂ ಕಾಡ್ಗಿಚ್ಚನ್ನು ಬಳಸಿಕೊಳ್ಳುವ ದುಷ್ಟ ಕಾರ್ಪೊರೇಟ್ ಶಕ್ತಿಗಳಿವೆ. ಇಂದು ಉದ್ಯಮಿಗಳ ಕ್ರೌರ್ಯವೇ ಈಶಾನ್ಯದಲ್ಲಿ ಕಾಡಿನ ನಿವಾಸಿಗಳು ಅಂತಿಮವಾಗಿ ಶಸ್ತ್ರ ಹಿಡಿಯಬೇಕಾದ ಸ್ಥಿತಿಯನ್ನು ನಿರ್ಮಿಸಿದೆ. ಕಾಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳೂ ಕಾಡ್ಗಿಚ್ಚನ್ನು ಸೃಷ್ಟಿಸಿವೆ. ಇವೆಲ್ಲವನ್ನು ಸರಕಾರಕ್ಕೆ ತಡೆಯಲು ಸಾಧ್ಯವಿಲ್ಲ ಎಂದೇನಿಲ್ಲ. ಆದರೆ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಹೆಚ್ಚಿನ ಸರಕಾರಗಳು ತಿಳಿದೋ ತಿಳಿಯದೆಯೋ ಸ್ವಯಂ ಭಾಗಿಯಾಗಿರುತ್ತವೆ. ಆದುದರಿಂದಲೇ ಪ್ರತಿ ವರ್ಷ ಲಕ್ಷಾಂತರ ಎಕರೆ ಕಾಡುಗಳು ಉರಿದು ನಾಶವಾಗುವುದನ್ನು ದೇಶ ಅಸಹಾಯಕವಾಗಿ ನೋಡಬೇಕಾಗುತ್ತದೆ.

ಕಾಡು ಎಂದರೆ ಬರೇ ಮರಗಳಷ್ಟೇ ಅಲ್ಲ. ಪ್ರಾಣಿ, ಪಕ್ಷಿ, ಕೀಟ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ. ಬೆಂಕಿ ಈ ವೈವಿಧ್ಯ ಸರಪಣಿಯನ್ನೇ ಕಡಿದು ಹಾಕುತ್ತದೆ. ಇವುಗಳ ನಾಶ ಪರೋಕ್ಷವಾಗಿ ಮನುಷ್ಯನ ನಾಶವೂ ಹೌದು. ಇದೇ ಸಂದರ್ಭದಲ್ಲಿ ಅಮೂಲ್ಯವಾದ ಔಷಧೀಯ ಗುಣಗಳುಳ್ಳ ಗಿಡ ಮೂಲಿಕೆಗಳೂ ನಮ್ಮಿಂದ ಕಣ್ಮರೆಯಾಗುತ್ತವೆೆ. ನಾವಿಂದು ಹಣದ ರೂಪದಲ್ಲಿ ಮರಗಳಿಗೆ, ಪ್ರಾಣಿಗಳಿಗೆ ಬೆಲೆಕಟ್ಟಬಾರದು. ಬದಲಿಗೆ ಅವುಗಳಿಗೂ ಪರಿಸರಕ್ಕೂ ಇರುವ ಅವಿನಾಭಾವ ಸಂಬಂಧಗಳ ಕಡೆಗೆ ಗಮನ ಹರಿಸಬೇಕಾಗಿದೆ. ಕಾಡುಗಳು ತನ್ಮೂಲಕ ಹವಾಮಾನದ ಸಮತೋಲನವನ್ನು ಕಾಪಾಡುತ್ತವೆ. ಕಾಡಿನ ನಾಶದಿಂದ ಪ್ರಕೃತಿಯ ಲಯ ತಪ್ಪುತ್ತದೆ. ಇದರ ನೇರ ದುಷ್ಪರಿಣಾಮವನ್ನು ಮನುಷ್ಯ ಅನುಭವಿಸಬೇಕಾಗುತ್ತದೆ. ಈಗಾಗಲೇ ಅನುಭವಿಸುತ್ತಿದ್ದಾನೆ ಕೂಡ. ಪ್ರತಿ ವರ್ಷ ಕಾಡಿನ ಬೆಂಕಿ ಸುದ್ದಿಯಾಗುತ್ತಿದೆಯಾದರೂ ಇಂತಹ ಅವಘಡಗಳನ್ನು ಎದುರಿಸಲು ಸೂಕ್ತ ವ್ಯವಸ್ತೆ ಮಾಡುವಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ನೂರಾರು ಎಕರೆ ಕಾಡುಗಳಿಗೆ ಬೆಂಕಿ ಬಿದ್ದಾಗ, ಅರಣ್ಯದಲ್ಲಿರುವ ಹತ್ತಾರು ಸಿಬ್ಬಂದಿಯಿಂದ ಅದನ್ನು ಆರಿಸುವುದಕ್ಕೆ ಸಾಧ್ಯವೇ? ತಕ್ಷಣವೇ ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಂಕಿ ಇನ್ನಿತರ ಪ್ರದೇಶಗಳಿಗೆ ಹರಡದಂತೆ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವುದಕ್ಕೆ ಸರಕಾರಕ್ಕೆ ಇರುವ ಅಡ್ಡಿಯಾದರೂ ಏನು?

ಇಂದು ಸರಕಾರ ಹೊಸದಾಗಿ ಕಾಡುಗಳನ್ನು ಬೆಳೆಸುವ ಕುರಿತಂತೆ ಮಾತನಾಡುತ್ತದೆ. ಆದರೆ ಇದೇ ಸಂದರ್ಭದಲ್ಲಿ ಇರುವ ಕಾಡುಗಳು ಪ್ರತಿವರ್ಷ ಇಷ್ಟಿಷ್ಟೇ ನಾಶವಾಗುತ್ತಿರುವುದನ್ನು ತಡೆಯಲು ಅದರ ಮುಂದೆ ಯಾವುದೇ ಯೋಜನೆಗಳಿಲ್ಲ. ಬೆಂಕಿ ಸಾವಿರಾರು ಎಕರೆ ಪ್ರದೇಶಗಳನ್ನು ಆಹುತಿ ತೆಗೆದುಕೊಂಡ ಬಳಿಕವಷ್ಟೇ ಸರಕಾರ ಪ್ರತಿಕ್ರಿಯಿಸುತ್ತದೆ. ಕೆಲವು ಯೋಜನೆಗಳನ್ನು ಘೋಷಿಸುತ್ತದೆ. ಆದರೆ ಅದು ಅನುಷ್ಠಾನಕ್ಕೆ ಬರುವುದಿಲ್ಲ. ಬಂಡೀಪುರದ ಬೆಂಕಿಯಾದರೂ ಸರಕಾರಕ್ಕೆ ಒಂದು ಪಾಠವಾಗಬೇಕು. ಕಾಡಿನ ಬೆಂಕಿ ಆರಿಸುವುದಕ್ಕೆ ಅತ್ಯಾಧುನಿಕ ತರಬೇತಿಗಳು ಅರಣ್ಯ ಸಿಬ್ಬಂದಿಗೆ ಬೇಕು. ಹಾಗೆಯೇ ತಂತ್ರಜ್ಞಾನ ಮತ್ತು ತಕ್ಷಣವೇ ವೈಮಾನಿಕ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ತನ್ನದೇ ಆದ ಹೆಲಿಕಾಪ್ಟರ್‌ಗಳನ್ನು ಹೊಂದಬೇಕು. ಕಾಡು ಅಳಿದರೆ ನಾಡು ಉಳಿಯುವುದಿಲ್ಲ ಎನ್ನುವ ಎಚ್ಚರಿಕೆಯ ಜೊತೆಗೆ ಕಾಡಿನ ರಕ್ಷಣೆಗಾಗಿ ಹೆಚ್ಚು ಹೆಚ್ಚು ಅನುದಾನಗಳನ್ನು ಸರಕಾರ ಬಿಡುಗಡೆ ಮಾಡಬೇಕು. ಕಾಡುಗಳ್ಳರ ಮಾಫಿಯಾದಿಂದ ಅರಣ್ಯ ಸಿಬ್ಬಂದಿಗಳು ಜೀವ ಭಯದಿಂದ ಕೆಲಸ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಮತ್ತು ಅವರಿಗೆ ನೀಡಬೇಕಾದ ಸಲಕರಣೆಗಳಲ್ಲೂ ಹೆಚ್ಚಳವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News