ಅರಣ್ಯ-ಕಂದಾಯ ಭೂಮಿ ಜಂಟಿ ಸರ್ವೇಗೆ ಶೀಘ್ರ ಕ್ರಮವಹಿಸಿ: ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಸೂಚನೆ

Update: 2019-02-27 13:11 GMT

ಚಿಕ್ಕಮಗಳೂರು, ಫೆ.27: ಸಾಗುವಳಿ ಭೂಮಿ ಹಕ್ಕುಪತ್ರ ವಿತರಣೆ ಹಾಗೂ ಫಾರಂ ನಂ.94ಸಿ ಅಡಿಯಲ್ಲಿ ನಿವೇಶನ ಹಂಚಿಕೆ ಕಂದಾಯ-ಅರಣ್ಯ ಇಲಾಖೆಗಳಿಗೆ ಒಳಪಟ್ಟ ಭೂಮಿ ಸರ್ವೇ ಆಗದಿರುವುದರಿಂದ ತೀವ್ರ ಸಮಸ್ಯೆಯಾಗಿದೆ. ಕಂದಾಯ-ಅರಣ್ಯ ಭೂಮಿ ಗಡಿ ಗುರುತಿಗೆ ಎರಡೂ ಇಲಾಖಾಧಿಕಾರಿಗಳಲ್ಲಿ ಸಮನ್ವಯ ಮುಖ್ಯ. ಶೀಘ್ರ ಅಧಿಕಾರಿಗಳು ಜಂಟಿ ಸರ್ವೇ ಮೂಲಕ ಗಡಿ ಗುರುತಿಗೆ ಕ್ರಮವಹಿಸಬೇಕೆಂದು ಅರಣ್ಯ, ಪರಿಸರ ಹಾಗೂ ಜೀವಶಾಶ್ತ್ರ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ನಝೀರ್ ಸಾಬಾ ಸಭಾಂಗಣದಲ್ಲಿ ಕರೆಯಲಾಗಿದ್ದ ಚಿಕ್ಕಮಗಳೂರು ಅರಣ್ಯ ವೃತ್ತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬೆಳ್ಳಿ ಪ್ರಕಾಶ್ ಸೇರಿದಂತೆ ಜಿಪಂ, ತಾಪಂ ಸದಸ್ಯರು, ಜಿಲ್ಲೆಯಲ್ಲಿ ಕಂದಾಯ ಹಾಗೂ ಅರಣ್ಯ ಭೂಮಿ ಜಂಟಿ ಸರ್ವೇ ಆಗದಿರುವುದರಿಂದ ಈ ಭೂಮಿಯಲ್ಲಿ ಸಾಗುವಳಿಯಲ್ಲಿ ರೈತರಿಗೆ, ಬಡಜನರಿಗೆ ಹಕ್ಕುಪತ್ರಗಳನ್ನು ನೀಡಲು ತೊಡಕಾಗಿದೆ. ನಿವೇಶನ ರಹಿತರಿಗೆ ನಿವೇಶನ ನೀಡಲೂ ಜಾಗ ಇಲ್ಲದಂತಾಗಿದೆ ಎಂಬ ಆರೋಪಗಳು ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಈ ಸಮಸ್ಯೆ ನಿವಾರಣಗೆ ಮಾಡುವ ಸಲುವಾಗಿ ಶೀಘ್ರ ಎರಡೂ ಇಲಾಖೆಗಳ ಅಧಿಕಾರಿಗಳ ತಂಡ ಸರ್ವೇ ಕಾರ್ಯಕ್ಕೆ ಮುಂದಾಗಬೇಕು. ಈ ಸಮಸ್ಯೆ ರಾಜ್ಯದಾದ್ಯಂತ ಇದ್ದು, ಚಿಕ್ಕಮಗಳೂರಿನಿಂದಲೇ ಇದಕ್ಕೆ ಚಾಲನೆ ನೀಡಲಾಗುವುದು. ಈ ಸರ್ವೇ ಕಾರ್ಯ ಎಲ್ಲ ಜಿಲ್ಲೆಗಳಿಗೂ ಮಾದರಿಯಾಗುವಂತಾಗಬೇಕೆಂದ ಅವರು, ಇದಕ್ಕೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಇಲಾಖೆ ವತಿಯಿಂದಲೇ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯ ಆರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಸಮಸ್ಯೆ ಜ್ವಲಂತವಾಗಿದ್ದರೂ ಹಿಂದಿನ ಅರಣ್ಯ ಸಚಿವರು ಸಮಸ್ಯೆ ಆಲಿಸಿ ಹೋದರೇ ಹೊರತು ಪರಿಹಾರ ಒದಗಿಸಲಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಲು ಕಾನೂನಿನೊಂದಿಗೆ ಮಾನವೀಯ ನೆಲೆಗಟ್ಟಿನಡಿ ಅರಣ್ಯಾಧಿಕಾರಿಗಳು ಕಾರ್ಯ ನಿರ್ವಹಿಸುವುದು ಅಗತ್ಯವಿದೆ. ಜಿಲ್ಲೆಯಲ್ಲಿ ಮಾನವ-ಪ್ರಾಣಿಗಳ ಸಂಘರ್ಷ ಹೆಚ್ಚಿದ್ದು, ಪ್ರತೀ ವರ್ಷ ಬಡ ರೈತಾಪಿ ವರ್ಗದವರು ಆನೆಯಂತಹ ಕಾಡು ಪ್ರಾಣಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೃತರಿಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು ಪ್ರಾಣಿಗಳ ದಾಳಿಯಿಂದ ಜನರ ಪ್ರಾಣ ಹಾಗೂ ಬೆಳೆ ರಕ್ಷಣೆಗೆ ಶಾಶ್ವತ ಯೋಜನೆ ಜಾರಿ ಮಾಡುತ್ತಿಲ್ಲ. ಸಚಿವರು ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಯೋಜನೆ ಜಾರಿಗೆ ಕ್ರಮಗೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಮೆರೆಯುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅರಣ್ಯ ಕಾಯ್ದೆ, ಸುಪ್ರೀಂ ಕೋಟ್‍ನ ಆದೇಶ ನೆಪ ಮಾಡಿ ವಿವಿಧ ಅರಣ್ಯ ಯೋಜನೆಗಳ ಹೆಸರಿನಲ್ಲಿ ಬಡಜನರನ್ನು ಬೀದಿಪಾಲು ಮಾಡುತ್ತಿದ್ದಾರೆ. ಡೀಮ್ಡ್ ಪಾರೆಸ್ಟ್ ನಿಂದಾಗಿ ನಿವೇಶನಗಳನ್ನೂ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನ ಸರಕಾರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು 9 ಲಕ್ಷ ಹೆಕ್ಟೇರದ ಡೀಮ್ಡ್ ಪಾರೆಸ್ಟ್ ಪೈಕಿ 3 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಆದೇಶಿಸಿದ್ದರು. ಆದರೆ ಇದು ಜಿಲ್ಲೆಯಲ್ಲಿ ಪ್ರಗತಿ ಕಂಡಿಲ್ಲ. ಇಂತಹ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಸಾಗುವಳಿ ಚೀಟಿ ನೀಡಲು ಆಗುತ್ತಿಲ್ಲ. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಿಂದ ಪರಿಶಿಷ್ಟ ಪಂಗಡದವರಿಗೆ ಮಾತ್ರ ಲಾಭವಾಗಿದ್ದು, ಪರಿಶಿಷ್ಟ ಜಾತಿ ಸೇರಿದಂತೆ ಇತರ ಜಾತಿಜನಾಂಗದವರು ತಮ್ಮ ಕೃಷಿ ಭೂಮಿಯಿಂದ ಒಕ್ಕಲೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ವ್ಯಾಪ್ತಿಯಲ್ಲಿ ಗಿರಿಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಮುಂದಾದರೆ ಅರಣ್ಯಾಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆಂದು ಆರೋಪಿಸಿದರು.

ಮೂಡಿಗೆರೆ ತಾ.ಪಂ. ಅಧ್ಯಕ್ಷ ರತನ್ ಮಾತನಾಡಿ, ತಾಲೂಕಿ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿದ್ದ 4 ಸಾವಿರ ಮನೆಗಳು ಮಂಜೂರಾಗಿದ್ದವು. ಆದರೆ ಡೀಮ್ಡ್ ಪಾರೆಸ್ಟ್ ನಿಂದಾಗಿ ನಿವೇಶನ ನೀಡಲು ಸಾಧ್ಯವಾಗದೇ ಮನೆಗಳು ಹಿಂಪಡೆಯಲಾಗಿದೆ. ಅರಣ್ಯ ಸಮಸ್ಯೆಗೆ ಮುಕ್ತಿ ಹಾಡದಿದ್ದರೆ ಬಡಜನರಿಗೆ ಸೌಲಭ್ಯ ನೀಡಲು ಅಸಾಧ್ಯ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸರಕಾರದಿಂದ ಮಂಜೂರಾಗಿರುವ ಸಮುದಾಯ ಭವನ ನಿವೇಶನಕ್ಕೂ ಅರಣ್ಯ ಅಧಿಕಾರಿಗಳು ಅಡ್ಡಿಯುಂಟು ಮಾಡುತ್ತಿದ್ದಾರೆಂದು ಆರೋಪಿಸಿದರು. 

ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಬಯಲು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಭದ್ರ ಮೇಲ್ದಂಡೆ ಯೋಜನೆ ಆರಂಭವಾಗಿ 12 ವರ್ಷ ಕಳೆದಿದ್ದರೂ ಕೆಲವೆಡೆ ಅರಣ್ಯ ಭೂಮಿ ಸಮಸ್ಯೆ ಇತ್ಯರ್ಥವಾಗದೇ ಕುಡಿಯಲು ನೀರು ದೊರೆಯುತ್ತಿಲ್ಲ. ಈ ಬಗ್ಗೆ ತುರ್ತಾಗಿ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪರಿಸರ ಸಂಘಟನೆಗಳ ಪರವಾಗಿ ಮಾತನಾಡಿದ ವೀರೇಶ್, ಜಿಲ್ಲೆಗೆ ವರ್ಷಕ್ಕೆ 80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಇದಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ಮೂಲಸೌಕರ್ಯಗಳಿಲ್ಲ. ಜಿಲ್ಲೆಯ ಪ್ರವಾಸೋಧ್ಯಮದ ಅಭಿವೃದ್ಧಿಗೆ ನೂತನ ಪ್ರವಾಸೋದ್ಯಮ ನೀತಿ ರೂಪಿಸಬೇಕಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 1200 ಕುಟುಂಬಗಳ ಪೈಕಿ 800 ಕುಟುಂಬಗಳು ಸ್ವಯಂಪ್ರೇರಿತರಾಗಿ ಕಾಡಿನಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿವೆ. ಆದರೆ ಸರಕಾರ ಸೂಕ್ತ ಪರಿಹಾರ ನೀಡದಿರುವುದರಿಂದ ಸಮಸ್ಯೆ ಜಟಿಲವಾಗುವಂತಾಗಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ಶಿಶಿಲ ಭೈರಾಪುರ ರಸ್ತೆಯಿಂದ ಮಳೆ ಕಾಡುಗಳು ಮತ್ತು ವನ್ಯ ಪ್ರಾಣಿಗಳ ಆವಾಸ ಸ್ಥಾನಗಳು ನಾಶವಾಗುತ್ತಿದ್ದು, ರಸ್ತೆ ನಿರ್ಮಾಣಕ್ಕೆ ತಡೆ ನೀಡಬೇಕೆಂದರು. ಅಕ್ರಮ ರೆಸಾರ್ಟ್, ಹೋಂ ಸ್ಟೇಗಳಿಂದಾಗಿ ಪರಿಸರ ಸೂಕ್ಷ್ಮ ಪ್ರದೇಶಗಳು ಅಪಾಯದಂಚಿನಲ್ಲಿದ್ದು, ಇವುಗಳಿಗೆ ಕಡಿವಾಣ ಹಾಕಬೇಕೆಂದರು.

ಇದೇ ವೇಳೆ ಮಾತನಾಡಿದ ಕಾಫಿ ಬೆಳೆಗಾರ ತೀರ್ಥ ಮಲ್ಲೇಶ್, ಪರಿಸರ ವಾದಿಗಳು ಕಾಫಿ ಬೆಳೆಗಾರರ ಪಾಲಿಗೆ ವ್ಯಾದಿಗಳಾಗಿ ಮಾರ್ಪಾಟ್ಟಿದ್ದಾರೆ. ಬೆಳೆಗಾರರನ್ನು ಪರಿಸರ ನಾಶ ಮಾಡುವವರೆಂದು ಬಿಂಬಿಸುತ್ತಿದ್ದಾರೆ. ಜಿಲ್ಲೆಯ ಕಾಫಿ ಉದ್ಯಮ ದೇಶಕ್ಕೆ ನೀಡುತ್ತಿರುವ ಕೊಡುಗೆ ಅಪಾರ ಎಂದ ಅವರು, ಮಲೆನಾಡಿನಲ್ಲಿ ಭತ್ತದ ಬೆಳೆ ಬೆಳೆಯದಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಭತ್ತ ಬೆಳೆಯುವ ರೈತರಿಗೆ ಪ್ರತೀ ಹೆಕ್ಟೆರ್ ಗೆ 20 ಸಾವಿರದಂತೆ ಸಹಾಯಧನ ನೀಡಬೇಕು. ಮಲೆನಾಡಿನಲ್ಲಿ ಹೆಚ್ಚಾಗಿರುವ ಕಾಡಾನೆ ದಾಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕೆಂದರು.

ಜಿ.ಪಂ. ಸದಸ್ಯೆ ಕವಿತಾಲಿಂಗರಾಜು ಮಾತನಾಡಿ, ಜಾಗರ ಜಿ.ಪಂ. ಮತ ಕ್ಷೇತ್ರದಲ್ಲಿ 60-70 ಕುಟುಂಬಗಳ ಮನೆಗಳಿಗೆ ವಿದ್ಯುತ್ ಒದಗಿಸಲು ಅರಣ್ಯ ಇಲಾಖೆ ತಡೆಯೊಡ್ಡುತ್ತಿರುವ ಬಗ್ಗೆ ಗಮನ ಸೆಳೆದರು. ಬೀರೂರು ಪಪಂ ಅಧ್ಯಕ್ಷೆ ಸವಿತಾ ರಮೇಶ್ ಕಸವಿಲೇವಾರಿ ಜಾಗದ ಸಮಸ್ಯೆ ಪರಿಹರಿಸಲು ಮನವಿ ಮಾಡಿದರು. ತಾಪಂ ಅಧ್ಯಕ್ಷ ಜಯಣ್ಯ ಅರಣ್ಯ ಇಲಾಖೆಯ ಅಕ್ರಮಗಳು, ನಿಷೇಧಿತ ನೀಲಗಿರಿ, ಅಕೇಶಿಯಾ ತೋಪುಗಳ ನಿರ್ಮಾಣದ ಬಗ್ಗೆ ಸಚಿವರಿಗೆ ದೂರು ಹೇಳಿದರು. ಶಾಸಕರು ಹಾಗೂ ಜನಪ್ರತಿನಿಧಿಗಳು ಹೇಳಿದ ಪ್ರತೀ ಸಮಸ್ಯೆಗಳನ್ನು ಸಾವದಾನದಿಂದ ಆಲಿಸಿದ ಸಚಿವರು ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಭರವಸೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನ್ನತಿ ಶ್ರೀಧರ್, ಅರಣ್ಯಾಧಿಕಾರಿಗಲಾದ ಸಂಜಯ್, ಕುಮಾರ್, ವಿಜಯ್ ಮೋಹನ್‍ರಾಜ್, ಜಿಪಂ ಸದಸ್ಯೆ ಜಸಂತಾ ಹಾಗೂ ಜಿಲ್ಲೆಯ ಅರಣ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಒಂದು ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅವಕಾಶವಿದೆ. ಇದಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‍ಲೈನ್ ಅರ್ಜಿ ಹಾಕದಿರುವುದರಿಂದ ಸಮಸ್ಯೆಗಳು ಉದ್ಭವಿಸಿವೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾಹಿತಿ ನೀಡಲು ಎಲ್ಲ ಜಿಪಂ ಕೆಡಿಪಿ ಸಭೆಗಳಲ್ಲಿ ತಿಳಿಸಲು ಸರಕಾರದ ನಿರ್ದೇಶನವಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ, ನಿವೇಶನ ಸಮಸ್ಯೆಗ ಅರಣ್ಯ-ಕಂದಾಯಾಧಿಕಾರಿಗಳ ಜಂಟಿ ಸರ್ವೇಯಿಂದ ಮುಕ್ತಿ ದೊರೆಯಲಿದೆ. ಆನೆ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಕಂಬಿ ಬಳಸಿ ತಡೆಗೋಡೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿ ವಿಲೇವಾರಿಯಾಗದ ಅರ್ಜಿಗಳನ್ನು ಮರುಪರಿಶೀಲನೆ ಮಾಡಲಾಗುವುದು.
- ಸತೀಶ್ ಜಾರಕಿ ಹೊಳಿ, ಸಚಿವ

ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳ ನಿರ್ಮಾಣಕ್ಕೆ 100 ಕೋಟಿ ಹಣವಿದೆ. ಇದರಲ್ಲಿ ಚಿಕ್ಕಮಗಳೂರಿನಲ್ಲಿರುವ ಆನೆ ಹಾವಳಿ ಪ್ರದೇಶ ಗುರುತಿಸಿ ಕಾಮಗಾರಿ ಆರಂಭಿಸಲಾಗುವುದು. ಅರಣ್ಯ ವ್ಯಾಪ್ತಿಯಲ್ಲಿ ನೀರು, ವಿದ್ಯುತ್ ಸಂಪರ್ಕ, ಶಾಲೆ ಮತ್ತಿತರ ಮೂಲಕರ್ಯಕ್ಕೆ ಭೂಮಿ ನೀಡಲು ಅವಕಾಶವಿದೆ. ಆದರೆ ಈ ಕಾಮಗಾರಿಗಳ ಡಿಪಿಆರ್ ಮಾಡುವುದಕ್ಕೂ ಮುನ್ನ ಇಲಾಖೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲೇಬೇಕು. ಜಂಟಿ ಸರ್ವೇ ಬಳಿಕ 1974ಕ್ಕೂ ಮುನ್ನ ಸಾಗುವಳಿ ಜಮೀನುಗಳ ಇತ್ಯರ್ಥಕ್ಕೆ ಕ್ರಮವಹಿಸಲಾಗುವುದು. 

- ಪುನ್ನತಿ ಶ್ರೀಧರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News