ಸೈನಿಕ ದಾಳಿ 130 ಕೋಟಿ ಭಾರತೀಯರ ಗೆಲುವು: ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್

Update: 2019-02-27 13:25 GMT

ದಾವಣಗೆರೆ,ಫೆ.27: ಭಾರತದ ಸೈನಿಕರು ಪಾಪಿಸ್ತಾನದ ದಾಳಿಗೆ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದಾರೆ. ಆದ್ದರಿಂದ ಇದು ಭಾರತೀಯ ಸೈನಿಕರ, ದೇಶದ 130 ಕೋಟಿ ಭಾರತೀಯರ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಸಸೇ ರಾಜ್ಯ ಗೌರವಾಧ್ಯಕ್ಷ ಡಿ. ಬಸವರಾಜ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಕರ್ನಾಟಕ ಸಮರ ಸೇನೆ ಹಮ್ಮಿಕೊಂಡಿದ್ದ ‘ಏಕತೆಯ ಶಕ್ತಿಯಾಗಿ ಪ್ರಬಲ ಭಾರತ’ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ವಿಚಾರ ಬಂದಾಗ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ, ಸೈನಿಕರ ಪರ ನಿಲ್ಲಬೇಕು. ಉಕ್ಕಿನ ಮಹಿಳೆ ಇಂದಿರಾಗಾಂಧಿ 1971ರಲ್ಲಿ ಯುದ್ದ ಪ್ರದೇಶಕ್ಕೆ ತೆರಳಿ ನಮ್ಮ ಸೈನಿಕರಿಗೆ ಬಲತುಂಬಿದ್ದರು. ಆದರೆ, ಅವರ್ಯಾರೂ ಯುದ್ದದ ಗೆಲವನ್ನು ಪಕ್ಷದ ಗೆಲುವೆಂಬಂತೆ ಸಂಭ್ರಮಿಸದೇ ದೇಶದ ಗೆಲುವೆಂದು ಬೀಗಿದ್ದರು ಎಂದು ಸ್ಮರಿಸಿದರು.

ಭಾರತೀಯ ಸೈನಿಕರು ಪಾಕಿಸ್ತಾನ ಗಡಿಯ ಸುಮಾರು 80 ಕಿ.ಮೀ ಒಳನುಗ್ಗಿ 300ಕ್ಕೂ ಅಧಿಕ ಉಗ್ರರನ್ನು ಎಡೆಮುರಿಕಟ್ಟಿದ್ದು 4 ಲಕ್ಷ ಸೈನಿಕರನ್ನು ಕೊಂದದ್ದಕ್ಕೆ ಸಮ. ಏಕೆಂದರೆ, ಅವರೆಲ್ಲರೂ ಅತ್ಯಂತ ಅಪಾಯಕಾರಿಯಾದ ಮಾನವಬಾಂಬ್ ಉಗ್ರರು. ಆದ್ದರಿಂದ ನಾವು ಯುದ್ದಕ್ಕೆ ಹೋಗದಿದ್ದರೂ ಹೋದಂತಹ ವೀರಸೈನಿಕರಿಗೆ ಬೆಂಬಲಿಸಿ, ಬಲ ತುಂಬಬೇಕಿದೆ ಎಂದ ಅವರು, ದೇಶದ ವಿಚಾರ ಬಂದಾಗ ಕರ್ನಾಟಕ ಸಮರ ಸೇನೆ ಸಮರಕ್ಕೂ ಸಿದ್ಧಗೊಳ್ಳಬೇಕು. ಈ ನಿಟ್ಟಿನಲ್ಲಿ ಉತ್ತಮ ವಿಚಾರ ಮಂಥನ ಹಮ್ಮಿಕೊಂಡಿರುವುದು ಶ್ಲಾಘನೀಯವೆಂದರು.

ಬೆಳಗಾವಿ ಪತ್ರೆಮಠದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪಾಕಿಸ್ತಾನಿ ಉಗ್ರರು ಎಲ್ಲೆಡೆ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಇಡೀ ವಿಶ್ವವನ್ನೇ ನಿಯಂತ್ರಿಸುವ ಹುನ್ನಾರ ನಡೆಸುತ್ತಿದ್ದಾರೆ. ಆದರೆ, ಅದೆಂದಿಗೂ ಸಾಧ್ಯವಿಲ್ಲ. ಭಾರತದ 130 ಕೋಟಿ ಜನತೆ ಸಿಟ್ಟಿಗೆದ್ದರೆ ಮುಂದಾಗುವ ಅನಾಹುತ ಊಹಿಸಲು ಸಾಧ್ಯವಾಗಷ್ಟು ಘೋರವಾಗಿರುತ್ತದೆ. ಭಾರತೀಯರು ಶಾಂತಿಪ್ರಿಯರು. ಆದರೆ, ಭಾರತ ನಮ್ಮ ಹೆತ್ತ ತಾಯಿ. ತಾಯಿಗೆ ತೊಂದರೆ ಕೊಡಲು ಯತ್ನಿಸಿದರೆ ಮಕ್ಕಳಾದ ನಾವು ಸಹಿಸಲು ಸಾಧ್ಯವೇ ಇಲ್ಲ ಎಂಬುದನ್ನು ಪಾಪಿಸ್ತಾನ ಇನ್ನಾದರೂ ಅರಿಯಲಿ ಎಂದು ಎಚ್ಚರಿಸಿದರು.

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಂದೂರು ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶವು ವಿವಿಧತೆಯಲ್ಲಿ ಏಕತೆ ಕಂಡು ಜಗತ್ತಿಗೆ ವಸುದೈವಕುಟುಂಬಕಂ ಎಂಬ ಘೋಷವಾಕ್ಯದ ಸಂದೇಶ ನೀಡಿದೆ. ಅಸಮಾನತೆ ಅಸಹಜತೆಯ ಮಧ್ಯೆಯೂ ಐಕ್ಯತೆಯಲ್ಲಿ ಪ್ರಬಲತೆಯನ್ನು ಹೊಂದಿದೆ. ವಿಶ್ವಮಟ್ಟದಲ್ಲಿ ಭಾರತವು ಪ್ರಬಲ ದೇಶವಾಗಿದ್ದು ಭಾರತೀಯರೆಲ್ಲರೂ ಏಕತೆಯ ಮಂತ್ರ ಜಪಿಸಬೇಕೆಂದರು.

ರಾಜ್ಯ ಕಾರ್ಯಾಧ್ಯಕ್ಷ ಬಿ. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಕಸಸೇ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಗೀತಾ ಕದರಮಂಡಲಗಿ, ಉಪಾಧ್ಯಕ್ಷೆ ವೈ. ಭಾಗ್ಯದೇವಿ, ಜಿ.ಪಿ.ಪ್ರಕಾಶ್, ಜಿಲ್ಲಾಧ್ಯಕ್ಷ ಯೋಗೀಶ್, ಉಮಾ, ವಿಜಯ್ ಜಾಧವ್, ಯುವ ಘಟಕದ ರಾಜ್ಯಾಧ್ಯಕ್ಷ ಎಂ. ಮನು, ಸಂಘಟನೆ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಕ್, ಹಾವೇರಿ ಜಿಲ್ಲಾಘಟಕದ ಅಧ್ಯಕ್ಷೆ ಕವಿತಾ ಕುಬಸದ್ ಮತ್ತಿತರರಿದ್ದರು. ನೂತನ ಕಾರ್ಯಕರ್ತರನ್ನು ಸಂಘಟನೆಗೆ ಸೇರಿಸಲಾಯಿತು.

ಮಂಜುಳಾ ಸ್ವಾಗತಿಸಿದರು. ಅನ್ನಪೂರ್ಣೆಶ್ವರಿ ಪ್ರಾರ್ಥಿಸಿದರು. ರಾಜ್ಯ ವಕ್ತಾರೆ ವಿದ್ಯಾರಾಣಿ ಗಡದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News