ದೇವೇಗೌಡರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಕಡೂರು: ಎಚ್.ಡಿ.ರೇವಣ್ಣ

Update: 2019-02-28 12:01 GMT

ಕಡೂರು, ಫೆ.28: ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ರಾಜಕೀಯ ಶಕ್ತಿ ನೀಡಿರುವುದು ಕಡೂರು ಕ್ಷೇತ್ರವಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೇಸ್ ಇದೇ ಕ್ಷೇತ್ರವಾಗಿದೆ. ಈ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಅವರು ವಿಶೇಷ ಆಸಕ್ತಿ ವಹಿಸಿ ಕಡೂರಿನ ಅಭಿವೃದ್ಧಿಗೆ 76 ಕೋಟಿ ರೂ. ಅನುದಾನ ಒದಗಿಸಿ ಮಂಜೂರು ಮಾಡಿದ್ದಾರೆಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. 

ಪಟ್ಟದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ದೇವೇಗೌಡ ಅವರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಇದಾಗಿದ್ದು, ಈ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಅವರಿಗೆ ಕಡೂರು ಕ್ಷೇತ್ರದ ಮೇಲೆ ವಿಶೇಷವಾದ ಒಲವಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಈಗಾಗಲೇ ಕ್ಷೇತ್ರಕ್ಕೆ 76 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಸರಕಾರಿ ಕಟ್ಟಡಗಳ ಕಾಮಗಾರಿಗೆ 10 ಕೋ. ರೂ. ಅನುದಾನ ನೀಡಿದ್ದಾರೆ. ಹೆದ್ದಾರಿ ಅಭಿವೃದ್ಧಿಗಾಗಿ ಮತ್ತೆ ನಾಲ್ಕು ಕೋಟಿ ರೂ ಮಂಜೂರು ಮಾಡಿದ್ದಾರೆಂದ ಅವರು, ಎಸ್ಸಿಪಿ, ಟಿಎಸ್ಪಿ ಯೋಜನೆಯಡಿಯಲ್ಲೂ 10 ಕೋಟಿ ರೂ. ನೀಡಿದ್ದಾರೆಂದು ಮಾಹಿತಿ ನೀಡಿದರು. 

ಹಿಂದಿನ ಶಾಸಕ ವೈಎಸ್‍ವಿ ದತ್ತ ಹಾಗೂ ಹಾಲಿ ವಿಪ ಸದಸ್ಯರಾದ ಧರ್ಮೇಗೌಡ, ಭೋಜೇಗೌಡ ಅವರು ಕಡೂರು ಕ್ಷೇತ್ರದ ನೀರಾವರಿ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದು, ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳಿಗೆ ಸಿಎಂ ಕುಮಾರಸ್ವಾಮಿ ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆಂದರು. 

ಮುಖ್ಯಮಂತ್ರಿ ಕುಮಾರಸ್ವಾಮಿ ಜನಪರವಾಗಿ, ರೈತಪರವಾಗಿ ಕೆಲಸ ಮಾಡುತ್ತಿದ್ದಾರೆ. 42 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದರೂ ವಿರೋಧ ಪಕ್ಷದವರು ಸಾಲ ಮನ್ನಾ ಮಾಡಿಲ್ಲ ಎನ್ನುತ್ತಿದ್ದಾರೆ. ಹಾಸನ ಜಿಲ್ಲೆಯೊಂದರಲ್ಲೆ ವಿವಿಧ ಬ್ಯಾಂಕ್‍ಗಳಲ್ಲಿ ರೈತರ 502 ಕೋಟಿ ರೂ. ಸಾಲ ಇದ್ದು, ಈಗಾಗಲೇ 192 ಕೋಟಿ ರೂ ಸಾಲ ಮನ್ನಾ ಹಣ ಬ್ಯಾಂಕ್‍ಗೆ ಬಿಡುಗಡೆಯಾಗಿದೆ. ಮಾರ್ಚ್ ಅಂತ್ಯದಲ್ಲಿ ಬಾಕಿ 400 ಕೋಟಿ ರೂ. ಬಿಡುಗಡೆಯಾಗಲಿದೆ ಎಂದರು.

ಬಿಜೆಪಿಯವರು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅವರ ಇಮೇಜ್ ಈಗ ಕಡಿಮೆಯಾಗಿರುವುದರಿಂದ ಲೋಕಸಭೆ ಚುನಾವಣೆ ಗೆಲ್ಲಲು ಏನೂ ಬೇಕಾದರೂ ಮಾಡುತ್ತಾರೆ ಎಂದ ಅವರು, ಕುಮಾರಸ್ವಾಮಿ ಅವರ ಸಾಲಮನ್ನಾ ಯೋಜನೆಯನ್ನು ಟೀಕಿಸಿದ್ದ ಮೋದಿ ಅವರು, ರೈತರ ಸಾಲ ಮನ್ನಾ ಮಾಡುವುದು ಪಾಪದ ಕೆಲಸ ಎಂದಿದ್ದರು. ಆದರೀಗ ರೈತರ ಖಾತೆಗೆ ಭಿಕ್ಷುಕರಿಗೆ ನೀಡುವಂತೆ ವಾರ್ಷಿಕವಾಗಿ 6 ಸಾವಿರ ಹಣ ಹಾಕುವುದಾಗಿ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಬಿಜೆಪಿಯವರಿಗೆ ರೈತರ ಮೇಲೆ ಕಾಳಜಿ ಇದ್ದಿದ್ದೇ ಆದಲ್ಲಿ ಈ ಯೋಜನೆಯನ್ನು ಮೊದಲೇ ಘೋಷಿಸಬೇಕಿತ್ತು. ಚುನಾವಣಾ ಸಂದರ್ಭದಲ್ಲಿ ಘೋಷಿಸಿರುವುದು ರಾಜಕೀಯ ಮಾಡಲು ಎಂದು ಟೀಕಿಸಿದರು. 

ಕೋಮುವಾದಿಗಳನ್ನು ದೂರ ಇಡಲು ಮೈತ್ರಿ:

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಸಚಿವ ರೇವಣ್ಣ, ಈ ಸಂಬಂದ ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ಮಾತುಕತೆ ನಡೆಸಿದ್ದಾರೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಎರಡೂ ಪಕ್ಷಗಳು ಅಹಂ ಬಿಟ್ಟು ಗೆಲ್ಲುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ತಂತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದ ಅವರು, 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲೇಬೇಕಿದೆ. ಈ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಪ್ರಾಬಲ್ಯದಲ್ಲಿದೆಯೋ ಅಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ಹಾಸನ ಕ್ಷೇತ್ರದಲ್ಲಿ ಮೊದಲ ಆದ್ಯತೆ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ. ಅವರು ಅಲ್ಲೇ ಸ್ಪರ್ಧಿಸಬೇಕೆಂಬುದು ನಮ್ಮ ಅನಿಸಿಕೆಯಾಗಿದೆ. ಎಲ್ಲಿ ಬೇಕಾದರೂ ಸ್ಪರ್ಧಿಸುವ ಸ್ವಾತಂತ್ರ್ಯ ಅವರಿಗಿದೆ ಎಂದ ಅವರು, ದೇವೇಗೌಡ ಹಾಸನದಿಂದ ಸ್ಪರ್ಧಿಸದಿದ್ದಲ್ಲಿ ಪ್ರಜ್ಷಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಲಾಗುವುದು. ಈ ಬಗ್ಗೆ ವರಿಷ್ಠರ ತೀರ್ಮಾನ ಅಂತಿಮ ಎಂದರು. 

ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸುವ ಬಗ್ಗೆ ಪತ್ರಕರ್ತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಸ್ಪರ್ಧೆ ಬಗ್ಗೆ ತನಗೇನೂ ಗೊತ್ತಿಲ್ಲ. ಸುಮಲತಾ ಅವರು ಕಾಂಗ್ರೆಸ್‍ನವರು. ಅವರ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ಮುಖಂಡರೇ ತೀರ್ಮಾನಿಸಲಿದ್ದಾರೆಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಯಾವ ಜನಪರ ಕೊಡುಗೆಗಳನ್ನೂ ನೀಡಿಲ್ಲ. ರಾಜ್ಯದ ಪಾಲಿನ ಅನುದಾನವನ್ನೂ ಸಮರ್ಪಕವಾಗಿ ನೀಡಿಲ್ಲ. ನರೇಗಾದಡಿಯಲ್ಲಿ ಕೇಂದ್ರ ಸರಕಾರ ಎರಡೂವರೆ ಸಾವಿರ ಕೋಟಿ ರೂ. ಅನುದಾನ ನೀಡಬೇಕಿದೆ. ಅತೀವೃಷ್ಟಿಗೆ ಪರಿಹಾರದ ರೂಪದಲ್ಲಿ 900 ಕೋಟಿ ರೂ. ಬರಬೇಕಿದೆ. ರಾಜ್ಯದಲ್ಲಿ 142 ತಾಲೂಕು ಬರಪೀಡಿತ ಎಂದು ಘೋಷಿಸಿದರೂ ಕೇಂದ್ರ ಸರಕಾರ ಬಿಡಿಗಾಸನ್ನೂ ನೀಡಿಲ್ಲ. ಈ ಬಗ್ಗೆ ಬಿಜೆಪಿ ಮುಖಂಡರು ಮಾತೇ ಆಡುವುದಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News