ಮೊದಲ ದಿನದ ದ್ವಿತೀಯ ಪಿಯು ಪರೀಕ್ಷೆ ಶಾಂತಿಯುತ

Update: 2019-03-01 18:52 GMT

ಬೆಂಗಳೂರು, ಮಾ.1: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಯ ಮೊದಲ ದಿನ ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯದ ಪರೀಕ್ಷೆಯನ್ನು ಸುಮಾರು 6ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾವುದೆ ಆತಂಕವಿಲ್ಲದೆ ಬರೆದರು.

ಶುಕ್ರವಾರ ಬೆಳಗ್ಗೆ 10.15ರಿಂದ ಪರೀಕ್ಷೆಗಳು ಆರಂಭಗೊಂಡಿದ್ದು, ಬಹುತೇಕ ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆಗೆ ಬೆಳಗ್ಗೆ 9.30ಕ್ಕೆ ಪರೀಕ್ಷೆ ಕೇಂದ್ರಗಳಿಗೆ ಹಾಜರಾಗಿದ್ದರು. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಯಾವ ರೂಮಿನಲ್ಲಿದೆ ಎಂದು ಗೊತ್ತು ಮಾಡಿಕೊಂಡು, ಪರೀಕ್ಷೆಗೆ ಸಂಬಂಧಿಸಿದ ವಿಷಯವನ್ನು ಪುನಃ ಮನನ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತು:ದ್ವಿತೀಯ ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಸಮೀಪವೇ ಅಡ್ಡಾಡುತ್ತಿದ್ದ ಪೋಷಕರನ್ನು ಪೊಲೀಸರು ವಾಪಾಸ್ ಕಳುಹಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು 2,026 ವಿಶೇಷ ಮೇಲ್ವಿಚಾರಕರು ಹಾಗೂ ಸ್ಕ್ವಾಡ್ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಚಿತ ಸಾರಿಗೆ ಸೌಲಭ್ಯ: ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಬಸ್ ನಿರ್ವಾಹಕರಿಗೆ ತೋರಿಸಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿ ಪರೀಕ್ಷೆಗಳಿಗೆ ಹಾಜರಾಗಿದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News