ಆಮ್ ಆದ್ಮಿ ಪಕ್ಷದ ಜತೆಯೂ ಮೈತ್ರಿಗೆ ಮುಂದಾದ ಕಾಂಗ್ರೆಸ್

Update: 2019-03-02 04:14 GMT

ಹೊಸದಿಲ್ಲಿ, ಮಾ12: ಮುಂಬರುವ ಲೋಕಸಭಾ ಚುನಾವಣೆಗೆ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾತುಕತೆ ಆರಂಭಿಸಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾತುಕತೆಯಲ್ಲಿ ತೊಡಗಿರುವ ಪಕ್ಷದ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

ಉಭಯ ಪಕ್ಷಗಳ ನಡುವೆ ಶುಕ್ರವಾರ ಮಾತುಕತೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿರುವ ಮುಖಂಡರು ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದಿಲ್ಲಿಯಲ್ಲಿ ಒಟ್ಟು ಏಳು ಲೋಕಸಭಾ ಸ್ಥಾನಗಳಿವೆ.

ರಾಹುಲ್‌ ಗಾಂಧಿಯವರ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡರು, ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಕೆಲ ಸ್ಥಳೀಯ ಮುಖಂಡರ ಮನವೊಲಿಕೆಗೆ ಮುಂದಾಗಿದ್ದಾರೆ. ಇದುವರೆಗೆ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಜಯ್ ಮಾಕೆನ್ ಕೂಡಾ ಆಮ್ ಆದ್ಮಿ ಜತೆಗೆ ಮೈತ್ರಿ ಮಾಡಿಕೊಳ್ಳುವುದನ್ನು ವಿರೋಧಿಸಿದ್ದರು.

"ಎಲ್ಲವೂ ಸುಸೂತ್ರವಾಗಿ ನಡೆದರೆ, ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗುವ ಮುನ್ನ ಅಂದರೆ ಮುಂದಿನ ವಾರದ ಒಳಗಾಗಿ ಮೈತ್ರಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಆದರೆ ಈ ದಿಲ್ಲಿ ಮೈತ್ರಿಗೂ ಇತರ ರಾಜ್ಯಗಳಿಗೂ ಯಾವ ಸಂಬಂಧವೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಂಜಾಬ್, ಹರ್ಯಾಣ ಮತ್ತು ಗೋವಾ ರಾಜ್ಯಗಳಿಗೂ ಈ ಮೈತ್ರಿ ವಿಸ್ತರಿಸಬೇಕು ಎನ್ನುವುದು ಆಮ್ ಆದ್ಮಿ ಪಕ್ಷದ ಬಯಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News