ಮಹಿಳೆ ಮಾನಸಿಕ ಬಂಧನದಿಂದ ಹೊರಬರಬೇಕಿದೆ: ಡಾ.ಸುಧಾಮೂರ್ತಿ

Update: 2019-03-02 12:09 GMT

ಚಿಕ್ಕಮಗಳೂರು, ಮಾ.2: ಮಹಿಳೆ ಎಲ್ಲ ರಂಗಳಲ್ಲಿ ಮುಂದೆ ಬರದಿರಲು ಆಕೆಯಲ್ಲಿ ಆತ್ಮಸ್ಥೈರ್ಯದ ಕೊರತೆಯೆ ಕಾರಣ. ನನ್ನಿಂದ ಏನು ಸಾಧ್ಯ ಎಂಬ ಭಾವನೆ ಮಹಿಳೆಯರಲ್ಲಿದೆ. ನನ್ನಿಂದ ಸಾಧ್ಯವಿಲ್ಲವೆಂಬ ಮನೋಭಾವನೆಯಿಂದ ಹೊರ ಬಂದು ತಾನು ಏನನ್ನಾದರೂ ಸಾಧಿಸಬಲ್ಲೆ ಎಂಬುದನ್ನು ಅರಿತುಕೊಳ್ಳಬೇಕು. ಜೀವನದಲ್ಲಿ ಯಶಸ್ಸನ್ನು ಕಂಡಿರುವವರೂ ಹಲವು ಬಾರಿ ಸೋತಿರುತ್ತಾರೆ. ಆದರೆ ಅವರು ತಮ್ಮ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡಿದ್ದರಿಂದಾಗಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಪ್ರಥಮ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ.ಸುಧಾಮೂರ್ತಿ ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಪ್ರಥಮ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದಲ್ಲಿ ಆಶಯನುಡಿಗಳನ್ನಾಡಿದ ಅವರು, ಪ್ರತಿಯೊಬ್ಬ ಮಹಿಳೆಯಲ್ಲಿಯೂ ತನ್ನದೇ ಆದ ಶಕ್ತಿ ಇದೆ. ಆದರೆ ಮಹಿಳೆಯರು ತಮ್ಮ ಮನಸ್ಸಿನಲ್ಲಿಯೇ ತಮ್ಮನ್ನು ಬಂಧಿಯಾಗಿಸಿಕೊಂಡಿದ್ದಾರೆ. ಅವರ ಶಕ್ತಿಯ ಬಗ್ಗೆ ಅವರಿಗೇ ಅರಿವಿಲ್ಲದಂತಾಗಿದೆ. ತಮ್ಮನ್ನು ತಾವು ಬಂಧನದಿಂದ ಬಿಡಿಸಿಕೊಂಡು ಹೊರಬಂದು ತಮ್ಮ ಶಕ್ತಿಯನ್ನು ಉಪಯೋಗಿಸಬೇಕಿದೆ ಎಂದ ಅವರು, ಮಹಿಳೆಯರು ಮನಸ್ಸಿನಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡಿರುವುದರಿಂದ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮನ್ನು ತಾವು ಬಂಧನದಿಂದ ಬಿಡಿಸಿಕೊಂಡು ತಮ್ಮ ಶಕ್ತಿ ಬಳಸಿಕೊಳ್ಳಲು ಮುಂದಾಗಬೇಕೆಂದರು.

ಮಹಿಳೆಯರಿಗೆ ನಿಸರ್ಗವೇ ಹೆಚ್ಚಿನ ಶಕ್ತಿಯನ್ನು ನೀಡಿದೆ. ಮಹಿಳೆ ಪುರುಷನಿಗಿಂತಲೂ ಹೆಚ್ಚು ಬುದ್ಧಿವಂತೆ, ತಾಳ್ಮೆ ಇರುವವಳು. ಮಗುವಾಗಿ, ಯುವತಿಯಾಗಿ, ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ, ಅತ್ತೆಯಾಗಿ, ಸೊಸೆಯಾಗಿ, ನಾದಿನಿಯಾಗಿ, ಪತ್ನಿಯಾಗಿ ಈ ರೀತಿ ಹಲವು ನಾಜೂಕಾದ ಜವಾಬ್ದಾರಿಗಳನ್ನು ತನ್ನ ಜೀವನದಲ್ಲಿ ಮಹಿಳೆ ನಿರ್ವಹಿಸುತ್ತಾಳೆ. ಗಂಡನಿಗೆ ಎಷ್ಟೇ ಸಂಬಳ ಬಂದರೂ ಅದನ್ನು ಸರಿಯಾಗಿ ಬಳಸಿಕೊಂಡು ಕುಟುಂಬವನ್ನು ಸಲಹುತ್ತಾಳೆ. ಆಕೆ ಒಂದು ರೀತಿಯಲ್ಲಿ ಕಚೇರಿಯ ವ್ಯವಸ್ಥಾಪಕರಂತೆ ಕೆಲಸ ಮಾಡುತ್ತಾಳೆ. ಮಹಿಳೆಗಿಂತ ಉತ್ತಮ ವ್ಯವಸ್ಥಾಪಕರು ಸಿಗಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಿಸಿದ ಅವರು, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಪ್ರತಿಯೊಬ್ಬ ಯಶಸ್ವಿ ಪುರುಷನ ಪಕ್ಕದಲ್ಲಿ ಓರ್ವ ಮಹಿಳೆ ಇರುತ್ತಾಳೆ. ಅದೇ ರೀತಿ ಓರ್ವ ಯಶಸ್ವೀ ಮಹಿಳೆಯ ಹಿಂದೆ ಸರಿಯಾಗಿ ಅರಿತುಕೊಳ್ಳಬಲ್ಲ ಓರ್ವ ಪುರುಷ ಇರುತ್ತಾನೆ ಎಂಬುದೂ ಸತ್ಯ ಎಂದರು.

ಮಹಿಳೆಯರು ವೈಚಾರಿಕವಾಗಿ ಬದಲಾಗಬೇಕು. ಆಗ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬದಲಾವನೆಗೆ ವೈಚಾರಿಕ ಮನೋಭಾವನೆ ಬೇಕೇ ಬೇಕು. ವೈಚಾರಿಕತೆ ವಿಚಾರದಲ್ಲಿ ಮಹಾರಾಷ್ಟ್ರದ ಮಹಿಳೆಯರು ಬಹಳ ಮುಂದಿದ್ದಾರೆ. ತಾವು ಒಮ್ಮೆ ಮಹಾರಾಷ್ಟ್ರದ ಮಹಿಳಾ ಮಂಡಳಿಯ ಸಭೆಯೊಂದರಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಮಹಿಳೆಯರು ಬಹಳ ಉತ್ತಮವಾಗಿ ಚರ್ಚೆ ನಡೆಸಿದರು. ವಿಧವೆ ಮಹಿಳೆಗೆ ಪುನಃ ಮದುವೆ ಮಾಡಬೇಕು ಎಂಬುದು ಅದರಲ್ಲಿ ಒಂದು ನಿರ್ಣಯವಾದರೆ ಮತ್ತೊಂದು ನಿರ್ಣಯ ಗಂಡು ಮಕ್ಕಳಿಗೆ ಅಡುಗೆ ಮಾಡುವುದನ್ನು ಹೇಳಿಕೊಡಬೇಕೆಂಬುದಾಗಿತ್ತು. ಅದಕ್ಕೆ ಕಾರಣವೇನೆಂದು ಕೇಳಿದರೆ, ಹಿಂದೆ ಮಹಿಳೆಯರು ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಾಗಾಗಿ ಮನೆಯ ಕೆಲಸಗಳನ್ನು ಪೂರ್ಣವಾಗಿ ಅವರೇ ಮಾಡಬೇಕಿತ್ತು. ಆದರೆ ಈಗ ಪುರುಷರಿಗೆ ಸಮನಾಗಿ ಮಹಿಳೆಯರೂ ಕೆಲಸ ಮಾಡುತ್ತಾರೆ. ಹೊರಗೂ ಕೆಲಸ ಮಾಡಿ ಮತ್ತೆ ಮನೆಕೆಲಸವನ್ನೂ ಆಕೆಯೇ ಮಾಡಬೇಕಾಗುತ್ತದೆ. ಗಂಡು ಮಕ್ಕಳೂ ಅಡುಗೆ ಮಾಡುವುದನ್ನು ಕಲಿತರೆ ಇಬ್ಬರೂ ಪರಸ್ಪರ ಸಹಕಾರದಿಂದ ಮನೆ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತದೆ ಎಂಬ ಉತ್ತರ ಅವರಿಂದ ಬಂದಿತು. ಈ ರೀತಿ ವೈಚಾರಿಕವಾಗಿ ಚಿಂತಿಸುವ ಕೆಲಸವನ್ನು ನಮ್ಮ ಮಹಿಳೆಯರೂ ಮಾಡಬೇಕಿದೆ ಎಂದರು.

ಲೇಖಕರು ಎಂದೂ ಓದುಗರನ್ನು ಮೋಸಗೊಳಿಸುವ ಕೆಲಸವನ್ನು ಮಾಡಬಾರದು. ಹಣ ಕೊಟ್ಟು ಪುಸ್ತಕವನ್ನು ಖರೀದಿಸುವ ಓದುಗನ ಮನಸ್ಸಿಗೆ ಸಂತಸವುಂಟು ಮಾಡುವ ಸಾಹಿತ್ಯವನ್ನು ಬಳಸಬೇಕು. ಓರ್ವ ಲೇಖಕನಾಗುವವನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದುವ ಹವ್ಯಾಸ ಇಲ್ಲದವನು ಎಂದಿಗೂ ಸಾಹಿತಿ ಆಗಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಾಣಬೇಕು ಎಂದ ಅವರು, ಭಾರತೀಯರಿಗೆ ಮತ್ತೊಬ್ಬರನ್ನು ಪದೇ ಪದೆ ಹೊಗಳುವ ಕೆಟ್ಟ ಅಭ್ಯಾಸವಿದೆ. ದೇವರನ್ನೂ ನಾವು ಸದಾಕಾಲ ಹೊಗಳುತ್ತಲೇ ಇರುತ್ತೇವೆ. ಬಹುಶಃ ಅದೇ ಅಭ್ಯಾಸ ನಮ್ಮ ಜೀವನದಲ್ಲಿಯೂ ಅಡಕವಾಗಿದೆ. ಮತ್ತೊಬ್ಬರನ್ನು ಹೊಗಳಿದರೆ ಮಾತ್ರ ನಮ್ಮ ಕೆಲಸ ಆಗುತ್ತದೆ ಎಂಬ ಭಾವನೆ ನಮ್ಮಲ್ಲಿ ದಟ್ಟವಾಗಿ ಬೇರೂರಿದೆ. ಆದರೆ ಇದೊಂದು ಕೆಟ್ಟ ಅಭ್ಯಾಸ. ಇದನ್ನು ಬಿಡುವುದು ಒಳ್ಳೆಯದು ಎಂದು ಹೇಳಿದರು.

ನಾನೊಮ್ಮೆ ಬೇರೆ ಊರಿಗೆ ಹೋಗಿದ್ದಾಗ ಅಲ್ಲಿ ಮರಿ ಆನೆಯೊಂದಿತ್ತು. ಅದನ್ನು ತಾನು ಮುಟ್ಟಿದಾಗ ಅದು ನನ್ನನ್ನು ಸೊಂಡಿಲಿನಿಂದ ದೂಡಿತು. ಆಗ ನಾನು ದೂರ ಹೋಗಿ ಬಿದ್ದೆ. ಅಷ್ಟು ಚಿಕ್ಕ ಆನೆಗೆ ಎಷ್ಟೊಂದು ಶಕ್ತಿ ಇದೆ ಎಂಬ ಆಶ್ಚರ್ಯ ನನ್ನಲ್ಲಿ ಮೂಡಿತು. ಅದರ ಪಕ್ಕದಲ್ಲಿಯೇ ಮರಿ ಆನೆಯ ತಾಯಿಯ ಕಾಲುಗಳನ್ನು ಚೈನಿನಿಂದ ಕಟ್ಟಿ ನಿಲ್ಲಿಸಲಾಗಿತ್ತು. ಅದು ತನ್ನ ಪಾಡಿಗೆ ತಾನು ಹುಲ್ಲನ್ನು ಮೇಯುತ್ತ ನಿಂತಿತ್ತು. ನಾನು ಆನೆಯ ಮಾವುತನ ಬಳಿ ಹೋಗಿ ಮರಿ ಆನೆಗೇ ಇಷ್ಟೊಂದು ಶಕ್ತಿ ಇದೆ. ಈ ತಾಯಿ ಆನೆ ತನ್ನ ಶಕ್ತಿಯಿಂದ ಮರವನ್ನು ಕೆಡವಿ ಓಡಿ ಹೋಗಬಹುದಲ್ಲವೆ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಮಾವುತ ಚೈನಿನಿಂದ ಆನೆಯನ್ನು ಕಟ್ಟಿರುವುದರಿಂದ ಆನೆ ತನ್ನನ್ನು ತಾನು ಬಂಧಿ ಎಂದು ಭಾವಿಸಿದೆ. ಅದಕ್ಕೆ ತನ್ನ ಶಕ್ತಿ ಅರಿವಿಲ್ಲ ಎಂಬ ಉತ್ತರ ನೀಡಿದನು. ಅದೇ ರೀತಿ ಮಹಿಳೆಯರೂ ತಮ್ಮ ಮನಸ್ಸಿನಲ್ಲಿ ತಮ್ಮನ್ನು ತಾವು ಬಂಧಿ ಎಂದು ಭಾವಿಸಿದ್ದಾರೆ. ಮಹಿಳೆಗೆ ಅವರ ಶಕ್ತಿಯ ಅರಿವಿಲ್ಲ ಎಂದು ಹೇಳಿದರು.

ಕನ್ನಡದಲ್ಲಿ ಬರೆದರೂ ಸಾಹಿತಿ ಎಂದು ಕರೆಯಲಿಲ್ಲ: ನಾನು ಚಿಕ್ಕ ವಯಸ್ಸಿನಿಂದಲೂ ಕನ್ನಡ ಸಾಹಿತ್ಯವನ್ನು ಓದುತ್ತಿದ್ದೇನೆ. ನಾನು ಮೊದಲು ಪುಸ್ತಕವನ್ನು ಬರೆದಿದ್ದು ಕನ್ನಡದಲ್ಲಿಯೇ. ನನ್ನ ಕನ್ನಡದ ಸಾಹಿತ್ಯ ಕನ್ನಡಕ್ಕೆ ಮಾತ್ರ ಸೀಮಿತವಾಯಿತು. ಮೊದಲ ಬಾರಿಗೆ ನನ್ನ 52ನೇ ವಯಸ್ಸಿನಲ್ಲಿ ಇಂಗ್ಲೀಷ್‍ನಲ್ಲಿ ಪುಸ್ತಕವನ್ನು ಬರೆದೆ. ಅದು ಇಂಗ್ಲೀಷ್ ಮೇಲಿನ ವ್ಯಾಮೋಹದಿಂದಲ್ಲ. ಆದರೆ ಇಂಗ್ಲೀಷ್ ಸಾಹಿತ್ಯವನ್ನು ಬರೆಯಲಾರಂಭಿಸಿದ ನಂತರ ನನ್ನ ಪುಸ್ತಕವು 22 ವಿವಿಧ ಭಾಷೆಗಳಲ್ಲಿ ಮುದ್ರಣವಾಯಿತು. ಕನ್ನಡದಲ್ಲಿ ಬರೆದಿದ್ದರೂ ರಾಜ್ಯದಲ್ಲಿ ನನ್ನನ್ನು ಎಂದಿಗೂ ಸಾಹಿತಿ ಎಂದು ಪರಿಗಣಿಸಿಲ್ಲ. ಕೇವಲ ಇನ್ಫೋಸಿಸ್ ಹಾಗೂ ಸಮಾಜ ಸೇವಕಿ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಆದರೆ ಇಂಗ್ಲೀಷ್‍ನಲ್ಲಿ ನನ್ನನ್ನು ಲೇಖಕಿ ಎಂದು ಗುರುತಿಸಲಾಗುತ್ತದೆ. ಇಂಗ್ಲೀಷ್‍ನಲ್ಲಿ ಕಾದಂಬರಿಯನ್ನು ಬರೆಯುವುದು ಸುಲಭದ ಕೆಲಸವಲ್ಲ. ನಾನು ಸಾಹಿತ್ಯ ಬರೆಯುವಾಗ ಮೊದಲು ಕನ್ನಡದಲ್ಲಿಯೇ ಬರೆಯುತ್ತೇನೆ. ಕನ್ನಡದಲ್ಲಿ ಬರೆಯುವಾಗ ನನ್ನ ಮನಸ್ಸಿನ ಭಾವನೆಗಳು ಸುಲಭವಾಗಿ ಹೊರ ಹೊಮ್ಮುತ್ತವೆ. ಆ ನಂತರ ಅದನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡುತ್ತೇನೆ, ಆದ್ದರಿಂದ ನಾನು ಕನ್ನಡದ ಸಾಹಿತಿ.

-ಡಾ.ಸುಧಾಮೂರ್ತಿ

ಮಹಿಳಾ ಸಮ್ಮೇಳನ ಅಗತ್ಯ
ಸಾಹಿತ್ಯ ಪರಿಷತ್ ವತಿಯಿಂದ ಮಹಿಳಾ ಸಮ್ಮೇಳನಗಳನ್ನು ನಡೆಸುವುದು ಆವಶ್ಯಕ. ಮಹಿಳೆಯರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದು ರಾಜಕೀಯ ಸಮಸ್ಯೆ ಇರಬಹುದು, ಐಟಿ, ಬಿಟಿ ಸಮಸ್ಯೆ ಇರಬಹುದು, ಉದ್ಯೋಗದ ಸಮಸ್ಯೆ ಇರಬಹುದು. ಕೆಲವೊಂದು ಸಮಸ್ಯೆಗಳನ್ನು ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸುಲಭವಾಗಿ ಚರ್ಚಿಸಲು ಸಾಧ್ಯವಾಗುತ್ತದೆ. ವರ್ಷಕ್ಕೊಮ್ಮೆಯಾದರೂ ಆಗಲಿ, ಎರಡು ವರ್ಷಕ್ಕೊಮ್ಮೆಯಾದರೂ ಆಗಲಿ ಮಹಿಳಾ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು.
-ಡಾ.ಸುಧಾಮೂರ್ತಿ

ನೀರಸವಾಗಿದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕಲಾತಂಡಗಳು ತಡವಾಗಿ ಬಂದಿದ್ದರಿಂದ ಮೆರವಣಿಗೆಯು ಬೆಳಗ್ಗೆ 10:30ಕ್ಕೆ ಆರಂಭವಾಯಿತು. ರಾಜ್ಯಮಟ್ಟದ ಸಮ್ಮೇಳಕ್ಕೆ ಭಾರೀ ಪ್ರಚಾರ ನೀಡಲಾಗಿದೆ ಎಂದು ಸಂಘಟಕರು ಹೇಳಿಕೊಂಡಿದ್ದರೂ ಮೆರವಣಿಗೆಯಲ್ಲಿ ಸಾಹಿತ್ಯಾಕಸ್ತರ ಕೊರತೆ ಎದ್ದು ಕಾಣುತ್ತಿತ್ತು. ಡಾ.ಸುಧಾಮೂರ್ತಿ ಅವರಂತವರ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಸಂಘಟಕರು ಸರಿಯಾದ ಪ್ರಚಾರ ನೀಡಿಲ್ಲ. ಇದರಿಂದ ಮೆರವಣಿಗೆಯಲ್ಲಿ ಬೆರಳೆಣಿಕಯಷ್ಟು ಜನ ಪಾಲ್ಗೊಳ್ಳುವಂತಾಗಿದೆ ಎಂದು ಸಾರ್ವಜನರಿಕರು ಬೊಟ್ಟು ಮಾಡಿದ್ದು ಕಂಡು ಬಂತು.

ಮೆರವಣಿಗೆ ಆರಂಭವಾದ ನಂತರವೂ ವ್ಯವಸ್ಥಿತವಾಗಿ ನಡೆಯಲಿಲ್ಲ. ಮೆರವಣಿಗೆ ಆಜಾದ್ ಪಾರ್ಕ್ ವೃತ್ತ ದಾಟಿ ತೊಗರಿಹಂಕಲ್ ವೃತ್ತದತ್ತ ಸಾಗುವ ಮಧ್ಯೆ ಆಶ್ರಯ ನರ್ಸಿಂಗ್ ಹೋಂ ಬಳಿ ಸಾರ್ವಜನಿಕರು ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲು ಅಡ್ಡಗಟ್ಟಿದರು. ಆಗ ಮುಂದೆ ಸಾಗುತ್ತಿದ್ದ ಕಲಾತಂಡಗಳು ದೂರ ಸಾಗಿದ್ದವು. ಆ ನಂತರ ಸಮ್ಮೇಳನಾಧ್ಯಕ್ಷರು ಕುಳಿತಿದ್ದ ಸಾರೋಟ್ ಹಾಗೂ ಕಲಾತಂಡಗಳ ನಡುವೆ ಬಾರೀ ಅಂತರ ಏರ್ಪಟ್ಟಿತ್ತು. ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು, ಮಹಿಳೆಯರ ಡೊಳ್ಳು ಕುಣಿತ, ಮಹಿಳೆಯರ ಚೆಟ್ಟಿ ಮೇಳ, ಮಹಿಳೆಯರ 2 ವೀರಗಾಸೆ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಮ್ಮೇಳನಾಧ್ಯಕ್ಷೆ ಡಾ.ಸುಧಾಮೂರ್ತಿ ಅವರನ್ನು ಅಲಂಕೃತಗೊಂಡಿದ್ದ ಸಾರೋಟಿನಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಸುಧಾಮೂರ್ತಿ ಅವರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಶ್ರೀಶೈಲ್ ಮೆಟಗುಡ್ಡ ಸಾರೋಟಿನಲ್ಲಿ ಕುಳಿತುಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News