ನಿಖಿಲ್ ಚುನಾವಣಾ ಕಣಕ್ಕಿಳಿಯುವುದಾದರೆ ಮಂಡ್ಯದಿಂದಲೇ ಸ್ಪರ್ಧೆ: ಸಿಎಂ ಕುಮಾರಸ್ವಾಮಿ

Update: 2019-03-03 14:11 GMT

ಶಿವಮೊಗ್ಗ, ಮಾ.3: ಮಂಡ್ಯದ ಜನರ ಭಾನವೆ ಏನೆಂಬುವುದು ತನಗೆ ಗೊತ್ತಿದೆ. ಪುತ್ರ ನಿಖಿಲ್ ಕುಮಾರಸ್ವಾಮಿ ಏನಾದರೂ ಲೋಕಸಭೆ ಚುನಾವಣೆಗೆ ನಿಲ್ಲಬೇಕಾದರೆ, ಅವರು ಮಂಡ್ಯದಿಂದಲೇ ಸ್ಪರ್ಧಿಸುತ್ತಾರೆ. ಮೈಸೂರು ಅಥವಾ ಇನ್ಯಾವುದೋ ಕ್ಷೇತ್ರಕ್ಕೆ ಪಲಾಯನ ಮಾಡುವುದಿಲ್ಲ. ಪಲಾಯನ ಮಾಡುವ ಜಾಯಮಾನವೂ ನಮ್ಮ ಕುಟುಂಬದ್ದಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ರವಿವಾರ ಮಧ್ಯಾಹ್ನ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಯಾರೋ ಹೆದರಿಸುತ್ತಾರೆ ಎಂದು ಹೆದರಿಕೊಂಡು ಹೋಗುವ ಜಾಯಮಾನ ನಮ್ಮ ಕುಟುಂಬದ್ದಲ್ಲ. ನಮ್ಮ ಕುಟುಂಬಕ್ಕೆ ಹೋರಾಟದ ಹಿನ್ನೆಲೆಯಿದೆ. ಎಂದಿಗೂ ಹೇಡಿತನದ ರಾಜಕಾರಣವನ್ನು ನಮ್ಮ ಕುಟುಂಬ ಮಾಡುವುದಿಲ್ಲ. ಏನೇ ಆಗಲಿ ಎದುರಿಸುತ್ತೇವೆ. ನಿಖಿಲ್ ಕುಮಾರಸ್ವಾಮಿಯನ್ನು ಬೇರೆಡೆ ಪಲಾಯನ ಮಾಡಿಸುವ ಪ್ರಶ್ನೆಯೇ ಇಲ್ಲ' ಎಂದು ಹೇಳುವ ಮೂಲಕ, ಮಂಡ್ಯದಿಂದ ಕಣಕ್ಕಿಳಿಯುವ ತಯಾರಿ ನಡೆಸುತ್ತಿರುವ ಚಿತ್ರನಟಿ ಸುಮಲತಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದು ನಿಶ್ಚಿತ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಜಿಲ್ಲೆಯ ಶಾಸಕರು, ನಾಯಕರು ನಮ್ಮ ಬಗ್ಗೆ ವೈಯಕ್ತಿಕವಾಗಿ ಅಭಿಮಾನ ಹೊಂದಿದ್ದಾರೆ. ನಮ್ಮ ಕುಟುಂಬದಿಂದ ಅಭ್ಯರ್ಥಿಯಾದರೆ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂಬ ನಿಲುವು ಅವರದ್ದಾಗಿದೆ ಎಂದರು. 

ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬರುತ್ತಿದ್ದೇನೆ. ಜೆಡಿಎಸ್ ಪಲಾಯನವಾದ ಮಾಡುವುದಿಲ್ಲ. ಎಂತಹ ಕಷ್ಟ ಕಾಲದಲ್ಲಿಯೂ ಮಂಡ್ಯ ಜಿಲ್ಲೆಯ ಜನರು ಪಕ್ಷ ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಪ್ರಸ್ತುತ ಕೆಲ ವ್ಯಕ್ತಿಗಳು ಮಂಡ್ಯ ಜಿಲ್ಲೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ. ಯಾರ್ಯಾರು ಎಷ್ಟೆಷ್ಟು ಋಣ ತೀರಿಸಿದ್ದಾರೆ ಎಂಬುವುದು ಗೊತ್ತಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News