ಭಾರತೀಯ ಸೇನೆ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-03-03 16:04 GMT

ಹುಬ್ಬಳ್ಳಿ, ಮಾ. 3: ಭಾರತೀಯ ಸೇನೆ ಯಾವುದೇ ಒಂದು ಪಕ್ಷದ ಸೇನೆಯಲ್ಲ. ಅದು ದೇಶ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ, ಸೇನೆಯನ್ನು ರಾಜಕೀಯಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಾಯುಪಡೆ ದಾಳಿಯಿಂದ ಬಿಜೆಪಿ ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲಿದೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಹೇಳಿಕೆಯ ವಿಡಿಯೋ ನನ್ನ ಬಳಿ ಇದೆ. ಆದರೆ, ಅವರು ಇದೀಗ ತಾನು ಹಾಗೇ ಹೇಳಿಕೆ ನೀಡಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಸಾಕ್ಷಿ ಕೇಳಿಲ್ಲ: ವಾಯುಸೇನೆ ದಾಳಿಗೆ ಸಂಬಂಧಿಸಿದಂತೆ ನಾವು ಯಾರಿಗೂ ಸಾಕ್ಷಿ ಕೇಳಿಲ್ಲ. ವಾಯುಸೇನೆ ಕಾರ್ಯಾಚರಣೆ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ, ಕಾರ್ಯಾಚರಣೆ ನಡೆದ ಬಳಿಕ ಸಹಜವಾಗಿ ವಿಡಿಯೋ ಸಾಕ್ಷಿ ಬಿಡುಗಡೆ ಮಾಡಲಾಗುತ್ತೆ. ಅದು ಇದ್ದರೆ ಬಿಡುಗಡೆ ಮಾಡಲಿ ಎಂದರು.

ದಾಳಿಗೆ ಸಂಬಂಧಿಸಿದಂತೆ ಸಾಕ್ಷಿ ಬಿಡುಗಡೆ ಮಾಡಿ ಎಂದು ನಾವು ಯಾರಿಗೂ ಒತ್ತಾಯಿಸುವುದಿಲ್ಲ. ಯಾವುದೇ ತೊಂದರೆ ಇಲ್ಲದೆ ಇದ್ದರೆ ಕಾರ್ಯಾಚರಣೆಯ ಸಾಕ್ಷ್ಯ ಬಿಡುಗಡೆ ಮಾಡಲಿ. ತೊಂದರೆ ಇದ್ದರೆ ಸಾಕ್ಷ್ಯ ಬಿಡುಗಡೆ ಮಾಡುವುದು ಬೇಡ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News