ಏನೇ ಆದರೂ ಪಟ್ನಾ ಸಾಹಿಬ್‌ನಿಂದಲೇ ಲೋಕಸಭೆಗೆ ಸ್ಪರ್ಧೆ: ಶತ್ರುಘ್ನ ಸಿನ್ಹಾ

Update: 2019-03-03 16:56 GMT

ಲಖ್ನೊ,ಮಾ.3: ಪರಿಸ್ಥಿತಿ ಏನೇ ಇದ್ದರೂ ಬಿಹಾರದ ಪಟ್ನಾ ಸಾಹಿಬ್‌ನಿಂದಲೇ ಲೋಕಸಭೆಗೆ ಸ್ಪರ್ಧಿಸುವುದಾಗಿ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ರವಿವಾರ ತಿಳಿಸಿದ್ದಾರೆ. ಬಿಜೆಪಿ ನಾಐಕರ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ಸಿನ್ಹಾರ ಈ ಹೇಳಿಕೆಯಿಂದ ಪಕ್ಷವು ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಟ್ನಾದಿಂದ ಸ್ಪರ್ಧಿಸಲು ಟಿಕೆಟ್ ನೀಡದಿದ್ದರೂ ಅಲ್ಲಿಂದಲೇ ಸ್ಪರ್ಧಿಸುವುದು ಖಚಿತ ಎಂಬುದನ್ನು ಸ್ಪಷ್ಟಪಡಿಸಿದೆ.

ಪರಿಸ್ಥಿತಿ ಏನೇ ಆಗಲಿರಲಿ, ಕ್ಷೇತ್ರ ಮಾತ್ರ ಅದೇ ಆಗಿರುತ್ತದೆ ಎಂದು ಸಿನ್ಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಟ್ನಾದಿಂದ ಬಿಜೆಪಿ ಸಂಸದನಾಗಿ ಆಯ್ಕೆಗೊಂಡಿರುವ ಸಿನ್ಹಾ 2015ರ ಬಿಹಾರ ಚುನಾವಣೆಯ ನಂತರ ಹಲವು ವಿಷಯಗಳಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಹಲವು ವಿಷಯಗಳಲ್ಲಿ ಸಿನ್ಹಾ ತನ್ನ ಪಕ್ಷದ ಅಭಿಪ್ರಾಯದ ವಿರುದ್ಧ ಮಾತನಾಡಿದ್ದರು. ಕಳೆದ ಜನವರಿಯಲ್ಲಿ ಕೊಲ್ಕತಾದಲ್ಲಿ ವಿಪಕ್ಷಗಳು ನಡೆಸಿದ ಬಿಜೆಪಿ ವಿರೋಧಿ ರ್ಯಾಲಿಯಲ್ಲಿ ಸಿನ್ಹಾ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದರು.

ಇತ್ತೀಚೆಗೆ ಸಿನ್ಹಾ ಲಖ್ನೊದಲ್ಲಿ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಶತ್ರುಘ್ನ ಅವರ ಪತ್ನಿ ಪೂನಂ ಸಿನ್ಹಾ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಪೂನಂ ಸಿನ್ಹಾ ಸದ್ಯ ಗೃಹಸಚಿವ ರಾಜನಾಥ್ ಸಿಂಗ್ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಜಧಾನಿ ಲಖ್ನೊದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

ಈ ಸುದ್ದಿಯನ್ನು ಶತ್ರುಘ್ನ ಸಿನ್ಹಾ ಅತ್ತ ನಿರಾಕರಿಸಿಯೂ ಇಲ್ಲ ಇತ್ತ ಒಪ್ಪಿಯೂ ಇಲ್ಲ. ಜನರು ಪೂನಂ ಸಿನ್ಹಾ ರಾಜಕೀಯಕ್ಕೆ ಬರಬೇಕೆಂದು ಬಯಸುತ್ತಾರೆ. ಆದರೆ ಆಕೆ ಬರುತ್ತಾರೆಯೇ ಇಲ್ಲವೇ ತಿಳಿದಿಲ್ಲ ಎಂದು ಸಿನ್ಹಾ ತಿಳಿಸಿದ್ದರು. ಇತ್ತೀಚೆಗೆ ಶತ್ರುಘ್ನ ಸಿನ್ಹಾ ಸಮಾಜವಾದಿ ಪಕ್ಷದ ಮುಖಂಡರ ಜೊತೆ ಹೆಚ್ಚಿನ ಒಡನಾಟ ಬೆಳೆಸಿಕೊಂಡಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಯನ್ನು ಅವರು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸು ಸಾಧ್ಯತೆಯಿದೆ ಎಂಬ ವದಂತಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News