ಕೇಂದ್ರದ ವಿರುದ್ಧ ನಿವೃತ್ತ ಸಿಆರ್‌ಪಿಎಫ್ ಯೋಧರ ಆಕ್ರೋಶ

Update: 2019-03-03 17:25 GMT

ಹೊಸದಿಲ್ಲಿ,ಮಾ.3: ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ನಿವೃತ್ತ ಸಿಆರ್‌ಪಿಎಫ್ ಯೋಧರು ಒನ್ ರ್ಯಾಂಕ್ ಒನ್ ಪೆನ್ಶನ್ (ಒಆರ್‌ಒಪಿ) ಗೆ ಆಗ್ರಹಿಸಿ ರವಿವಾರ ದಿಲ್ಲಿಯ ಜಂತರ್ ಮಂತರ್ ಮೈದಾನದಲ್ಲಿ ಧರಣಿ ನಡೆಸಿದರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆ ನಡೆದು ವಾರಗಳಷ್ಟೇ ಕಳೆದಿದ್ದು, ನಿವೃತ್ತ ಯೋಧರು ಒಆರ್‌ಒಪಿಗೆ ಆಗ್ರಹಿಸಿ ಸರಕಾರಕ್ಕೆ ಮತ್ತೊಮ್ಮೆ ತಮ್ಮ ಆಗ್ರಹವನ್ನು ಸಲ್ಲಿಸಿದ್ದಾರೆ.

ಸೇನೆಯ ಸಿಬ್ಬಂದಿಯೊಬ್ಬ ಸಾವನ್ನಪ್ಪಿದರೆ ಆತ ಸೇನೆಯಲ್ಲಿ ಸೇವೆ ಸಲ್ಲಿಸಬಹುದಾಗಿದ್ದ ಸಮಯದವರೆಗಿನ ವೇತನ ಮತ್ತು ನಂತರ ಆತನ ಪಿಂಚಣಿ ಕುಟುಂಬ ಸದಸ್ಯರಿಗೆ ಸಿಗುತ್ತದೆ. ಆದರೆ ಸಿಆರ್‌ಪಿಎಫ್ ಯೋಧರಿಗೆ ಆ ಸೌಲಭ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ 65ರ ಹರೆಯದ ಮುಹಮ್ಮದ್ ಶೇರ್ ಖೇದ ವ್ಯಕ್ತಪಡಿಸಿದ್ದಾರೆ. ಶೇರ್ ಸಿಆರ್‌ ಪಿಎಫ್‌ ನಲ್ಲಿ ಪೇದೆಯಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಎನ್‌ ಡಿಟಿವಿ ವರದಿ ಮಾಡಿದೆ.

ಪಿಂಚಣಿ ಸೌಲಭ್ಯದ ಜೊತೆಗೆ ನಮಗೆ ಹುತಾತ್ಮ ಸ್ಥಾನಮಾನವನ್ನೂ ನೀಡಬೇಕು ಎಂದು ಮುಹಮ್ಮದ್ ಶೇರ್ ಆಗ್ರಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ಗಾಯಗೊಂಡಿದ್ದ ಸಿಆರ್‌ಪಿಎಫ್ ಯೋಧ ರವಿವಾರ ಮೃತಪಟ್ಟಿದ್ದಾರೆ. ಪೂಂಛ್ ಜಿಲ್ಲೆಯ ಬಳಿ ನಿಯಂತ್ರಣ ರೇಖೆಯಲ್ಲಿ ನಡೆದ ಶೆಲ್ ದಾಳಿಯಲ್ಲಿ ಶನಿವಾರ ಇಬ್ಬರು ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದರು. ನಾವು ನಮ್ಮ ಕುಟುಂಬ, ಹೆತ್ತವರು, ಕೆಲಸ ಕಾರ್ಯಗಳನ್ನು ತೊರೆದು ಬರುತ್ತೇವೆ. ಹಿಂದಿನ ಹಾಗೂ ಹಾಲಿ ಸರಕಾರ ನಮ್ಮ ಜೊತೆ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು 24 ವರ್ಷ ಸಿಆರ್‌ಪಿಎಫ್‌ನಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸಿರುವ ಕೇರಳದ 65 ವರ್ಷದ ಜಾರ್ಜ್ ಸಿ.ವಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಮ್ಮನ್ನು ಅರೆಸೈನಿಕ ಪಡೆ ಎಂದು ಕರೆಯಬಹುದು. ಆದರೆ ಸೈನಿಕರು ಉಪಯೋಗಿಸುವುದು ನಮ್ಮ ಭುಜಗಳನ್ನು. ಸಶಸ್ತ್ರಪಡೆಗಳನ್ನು ಮೇಲಕ್ಕೆತ್ತಿ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಜಾರ್ಜ್ ಅಭಿಪ್ರಾಯಿಸಿದ್ದಾರೆ. ತ್ರಿವರ್ಣ ಧ್ವಜಗಳನ್ನು ಹಾರಿಸಿ ಭಿತ್ತಿಪತ್ರಗಳನ್ನು ಹಿಡಿದು ಧರಣಿ ನಡೆಸಿದ ನಿವೃತ್ತ ಸಿಆರ್‌ಪಿಎಫ್ ಯೋಧರು ಅತ್ಯಂತ ಉದ್ವಿಗ್ನ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಸೈನಿಕರಿಗೆ ವಿಶೇಷ ಭತ್ತೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೊತೆಗೆ ಸರಕಾರಿ ಆರೋಗ್ಯಸೇವೆ ಮತ್ತು ಸೇನೆಯಲ್ಲಿರುವಂತೆ ಸಬ್ಸಿಡಿ ಇರುವ ಕ್ಯಾಂಟೀನ್ ಸೇವೆಯನ್ನು ಒದಗಿಸುವಂತೆಯೂ ಧರಣಿನಿರತರು ಆಗ್ರಹಿಸಿದ್ದಾರೆ. ಇದೇ ವೇಳೆ ನಿವೃತ್ತ ಯೋಧರು ಜಂತರ್ ಮಂತರ್ ಸುತ್ತ ಕ್ಯಾಂಡಲ್ ಮಾರ್ಚ್ ನಡೆಸಿದರು.

ಸರಕಾರಿ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಪರಿಣಾಮವಾಗಿ ಭದ್ರತಾಪಡೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಿಸಲಾಗಿಲ್ಲ ಎಂದು ಆರೋಪಿಸಿರುವ ಅರೆಸೈನಿಕಪಡೆಗೆ ಸೇರಲು ಬಯಸಿರುವ ಯುವಕರು ನಿವೃತ್ತ ಯೋಧರ ಜೊತೆ ಧರಣಿಯಲ್ಲಿ ಕೈಜೋಡಿಸಿದ್ದರು.

ಭದ್ರತಾಪಡೆಗಳಲ್ಲಿ 72,000 ಹುದ್ದೆಗಳು ಖಾಲಿಯಿರುವುದಾಗಿ ಸಿಬ್ಬಂದಿ ಆಯ್ಕೆ ಆಯೋಗ 2011ರಲ್ಲಿ ತಿಳಿಸಿತ್ತು. ಈ ಪೈಕಿ ಕೇವಲ 44,000 ಹುದ್ದೆಗಳನ್ನು ತುಂಬಲಾಗಿದೆ. ಈ ಸಂಬಂಧ ನಾವು ಗೃಹ ಸಚಿವರನ್ನು ಭೇಟಿಯಾದರೂ ನಮಗೆ ಸುಳ್ಳು ಭರವಸೆಯನ್ನು ನೀಡಲಾಗಿತ್ತು ಎಂದು 28ರ ಹರೆಯದ ರಾಮರತನ್ ಮೀನಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News