ಮಡಿಕೇರಿ: ಸಂಪೂರ್ಣವಾಗಿ ನೆಲಕಚ್ಚಿದ ಕಾಫಿ ಬೆಳೆ; ಶೇ.60 ರಷ್ಟು ಫಸಲು ನಷ್ಟ

Update: 2019-03-03 18:34 GMT

ಮಡಿಕೇರಿ, ಮಾ.3: ಕಳೆದ ವರ್ಷ ಸುರಿದ ದಾಖಲೆ ಪ್ರಮಾಣದ ಮಳೆಯ ಪರಿಣಾಮ ಕೊಡಗಿನ ಜೀವಬೆಳೆ ಕಾಫಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಶೇ.60 ರಷ್ಟು ಫಸಲು ನಷ್ಟವಾಗಿದೆ. ಈ ಬಾರಿ ಕೇವಲ ಕೆಲವೇ ಚೀಲಗಳಷ್ಟು ಕಾಫಿ ಕೊಯ್ದಿರುವ ದೊಡ್ಡ ಬೆಳೆಗಾರರು ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಮಹಾಮಳೆಯ ಪರಿಣಾಮ ಮಡಿಕೇರಿ ತಾಲೂಕನ್ನು ಹೆಚ್ಚಾಗಿ ಕಾಡಿದ್ದು, ತೋಟ, ಗದ್ದೆಗಳು ಇದೇ ತಾಲೂಕಿನಲ್ಲಿ ಕೊಚ್ಚಿ ಹೋಗಿದ್ದವು. ಅಳಿದುಳಿದ ತೋಟಗಳ ಪರಿಸ್ಥಿತಿ ಇದ್ದೂ ಇಲ್ಲದಂತಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅತಿ ಕಡಿಮೆ ಫಸಲನ್ನು ಪಡೆದ ವರ್ಷ ಇದಾಗಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ. ಕಕ್ಕಬ್ಬೆ, ನಾಲಡಿ, ಗಾಳಿಬೀಡು, ಮಕ್ಕಂದೂರು ಸೇರಿದಂತೆ ಇನ್ನೂ ಕೆಲವು ಭಾಗಗಳಲ್ಲಿ ಪ್ರಮುಖ ಆರ್ಥಿಕ ಬೆಳೆಯಾದ ಕಾಫಿ, ಕರಿಮೆಣಸು ಫಸಲು ಸಂಪೂರ್ಣವಾಗಿ ನೆಲಕಚ್ಚಿದೆ. ಈ ಭಾಗದಲ್ಲಿ ಸುಮಾರು 400 ಇಂಚಿಗೂ ಅಧಿಕ ಮಳೆಯಾದ ಪರಿಣಾಮ ಒಂದು ಎಕರೆ ತೋಟದಲ್ಲಿ 6-7 ಚೀಲವಷ್ಟೇ ಫಸಲು ದೊರೆತಿದೆ.    

ಹಿಂದಿನ ವರ್ಷಗಳಲ್ಲಿ ಲಾರಿಯಲ್ಲಿ ಕಾಫಿ ಫಸಲನ್ನು ಸಾಗಿಸುತ್ತಿದ್ದ ಬೆಳೆಗಾರರು ಪ್ರಸ್ತುತ ವರ್ಷ ಸ್ವಂತ ಜೀಪಿನಲ್ಲಿ ನಾಲ್ಕೈದು ಕಾಫಿ ಚೀಲಗಳನ್ನು ಸಾಗಿಸುವಂತಾಗಿದೆ. 24 ಮಂದಿ ಕಾರ್ಮಿಕರು 40 ಮೂಟೆ ಕಾಫಿಯನ್ನು ಕೊಯ್ಲು ಮಾಡುವಲ್ಲಿ ಕೇವಲ 14 ಮೂಟೆಯಷ್ಟು ಕಾಫಿಯನ್ನು ಕೊಯ್ದಿದ್ದಾರೆ ಎಂದು ಬೆಳೆಗಾರರು ಸಂಕಷ್ಟವನ್ನು ತೋಡಿಕೊಳ್ಳುತ್ತಾರೆ. ಕಾರ್ಮಿಕರ ಕೊರತೆ, ರಸಗೊಬ್ಬರದ ಬೆಲೆ ಏರಿಕೆ ನಡುವೆ ಕಾಫಿತೋಟವನ್ನು ನಿರ್ವಹಣೆ ಮಾಡುವುದೇ ಅತಿಕಷ್ಟ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ. 

ಮುಂದಿನ ವರ್ಷವು ಕಾಫಿ ಹಾಗೂ ಕರಿಮೆಣಸು ಬೆಳೆಯ ಫಸಲು ಕಡಿಮೆಯಾಗುವ ಸಾಧ್ಯತೆಗಳಿದ್ದು, ಅಪಾರ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ  ಪರಿಹಾರ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.   

ಪ್ರಕೃತಿ ವಿಕೋಪದಿಂದಾಗಿ ಕಾಫಿ ಉತ್ಪಾದನೆ ಸಂಪೂರ್ಣವಾಗಿ ಕುಂಟಿತಗೊಂಡಿದೆ. ವಿದೇಶಿ ವಿನಿಮಯ ಕಾಫಿ ಫಸಲಿಗೆ ವಿಮೆ ಸೌಲಭ್ಯ ಇಲ್ಲದಿರುವುದು ದುರದೃಷ್ಟಕರ. ಅತಿವೃಷ್ಟಿಯಿಂದಾಗಿ ನಷ್ಟವಾದ ಕಾಫಿ ಬೆಳೆಗಾರರಿಗೆ ಎನ್‍ಡಿಆರ್‍ಎಫ್ ಪರಿಹಾರ ಸಿಕ್ಕಿಲ್ಲ. ಕರಿಮೆಣಸಿಗೆ ಕೇಂದ್ರ ಫಸಲು ಭೀಮಾ ಯೋಜನೆಯಡಿ ಪ್ರೀಮಿಯಂ ಪಾವತಿಸಿದರೂ ಕೂಡ ಯಾವುದೇ ಪರಿಹಾರ ಸಿಕ್ಕಿಲ್ಲ. ಇವೆಲ್ಲದರ ನಡುವೆ ಕಾರ್ಮಿಕರ ಕೊರತೆ, ರಸಗೊಬ್ಬರ ಬೆಲೆ ಏರಿಕೆ ಸಮಸ್ಯೆಗಳ ನಡುವೆ ಕಾಫಿ ಬೆಳೆಗಾರರು ಹೈರಾಣಾಗಿದ್ದು, ಅತಿವೃಷ್ಟಿ ಪರಿಹಾರ, ವಿಮಾ ಸೌಲಭ್ಯ ಬಿಡುಗಡೆಯೊಂದಿಗೆ ಕೊಡಗಿನ ಕಾಫಿ, ಏಲಕ್ಕಿ, ಕರಿಮೆಣಸು ಹಾಗೂ ಅಡಿಕೆ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸುವ ಮೂಲಕ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಒತ್ತಾಯಿಸಿದ್ದಾರೆ.

ಕಾಫಿ ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರ್ಕಾರ ರೈತರ ಮತ್ತು ಬೆಳೆಗಾರರ ಸಾಲಮನ್ನಾ ಎಂದು ಘೋಷಿಸಿದೆ. ಆದರೆ ಸಾಲಮನ್ನಾಕ್ಕಿಂತ ಕಾಫಿ, ಕರಿಮೆಣಸು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಬೇಕು. ಹಾಗಾದಾಗ ಮಾತ್ರ ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯವೆಂದು ಕಾಫಿ ಬೆಳೆಗಾರ ಪಾಂಡಂಡ ನರೇಶ್ ಅಭಿಪ್ರಾಯ ಪಡುತ್ತಾರೆ.  

ಕಾಫಿ ಫಸಲು ಕುಂಟಿತಗೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲು ಬೆಳೆಗಾರರು ಮುಂದೆ ಬರುತ್ತಿಲ್ಲ. ಇದರಿಂದ ಕಾರ್ಮಿಕ ವರ್ಗಕ್ಕೂ ಕೆಲಸವಿಲ್ಲದೆ ನಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಪ್ರತಿ ಕೆ.ಜಿಗೆ ಇಷ್ಟು ಕೂಲಿ ಎಂದು ಗುತ್ತಿಗೆ ಪಡೆಯುವ ಕಾರ್ಮಿಕರು ಕೂಡ ಈ ಬಾರಿ ನಷ್ಟ ಅನುಭವಿಸಿದ್ದಾರೆ. ಸ್ಥಳೀಯ ಕಾರ್ಮಿಕರಿಗೆ ದುಬಾರಿ ವೇತನ ನೀಡಬೇಕಾಗುತ್ತದೆ ಎಂದು ತೋಟದ ಮಾಲಕರು ಹೊರರಾಜ್ಯ ಮತ್ತು ಹೊರ ಜಿಲ್ಲೆಯ ಕಾರ್ಮಿಕರುಗಳಿಗೆ ಆಶ್ರಯ ನೀಡಿ ದುಡಿಸಿಕೊಳ್ಳುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಆಶ್ರಯ ಮತ್ತು ಕೆಲಸ ನೀಡುವುದಕ್ಕೆ ಸ್ಥಳೀಯ ಕಾರ್ಮಿಕ ವರ್ಗದಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯೂ ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬೆಳೆಗಾರರ ನಷ್ಟದೊಂದಿಗೆ ಕಾರ್ಮಿಕ ವರ್ಗವೂ ಸಂಕಷ್ಟಕ್ಕೆ ಸಿಲುಕಿದೆ, ಹಣದ ಕೊರತೆ ಎದುರಾಗಿರುವುದರಿಂದ ವ್ಯಾಪಾರ, ವಹಿವಾಟುಗಳು ಕೂಡ ಕುಂಟಿತಗೊಂಡಿದೆ. ಇನ್ನು ಎರಡು ತಿಂಗಳುಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗುವುದರಿಂದ ಇನ್ಯಾವ ಅನಾಹುತ ಕಾದಿದೆಯೋ ಎನ್ನುವ ಆತಂಕದಲ್ಲೆ ಕೊಯ್ದ ಕಾಫಿ ಫಸಲನ್ನು ಉಳಿಸಿಕೊಳ್ಳದೆ ತಕ್ಷಣ ಮಾರಾಟಕ್ಕೆ ಮುಂದಾಗಿದ್ದಾರೆ ತೋಟದ ಮಾಲಕರು. ಒಟ್ಟಿನಲ್ಲಿ ಪ್ರಕೃತಿಯ ಮುನಿಸು ಮಾಲಕ ವರ್ಗದಿಂದ ಆರಂಭಗೊಂಡು ಕಾರ್ಮಿಕ ಮತ್ತು ವರ್ತಕ ವರ್ಗದವರೆಗೆ ಆರ್ಥಿಕ ಹೊಡೆತವನ್ನು ನೀಡುತ್ತಲೇ ಇದೆ. 

Writer - ಲಕ್ಷ್ಮೀಶ್

contributor

Editor - ಲಕ್ಷ್ಮೀಶ್

contributor

Similar News