ಕಾಡಿನ ಕಿಚ್ಚು ನಾಡನ್ನು ಸುಡುವುದಿಲ್ಲವೇ!

Update: 2019-03-04 18:43 GMT

‘‘ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದೊಡೆ ನಿಲಬಾರದು?’’ ಎಂಬ ವಚನವು ಜನರ ಸ್ವಾರ್ಥದಿಂದ ಬಂಡೀಪುರ ಅಭಯಾರಣ್ಯಕ್ಕೆ ಬಿದ್ದ ಕಾಡ್ಗಿಚ್ಚಿನ ಕೆನ್ನಾಲಿಗೆಯಿಂದ ಜೀವ ರಕ್ಷಿಸಿಕೊಳ್ಳಲಾಗದೆ ನಿರ್ಜೀವಗೊಂಡ ವನ್ಯಜೀವಿಗಳ ವ್ಯಥೆಯನ್ನು ವಿವರಿಸುವಂತಿದೆ. ‘‘ಕಾಡು ಸೊಂಪಾಗಿದ್ದರೆ ನಾಡು ತಂಪಾಗಿರುತ್ತದೆ’’ ಎಂಬ ಜನಪದದ ಮಾತು ಕಾಡಿನ ಮಹತ್ವವನ್ನು ಹೇಳುತ್ತದೆ. ಆದರೆ ಕರ್ನಾಟಕ ರಾಜ್ಯದ ಪ್ರಸಿದ್ಧ ಹುಲಿ ಸಂರಕ್ಷಿತ ಅಭಯಾರಣ್ಯವಾದ ಬಂಡೀಪುರವು ಪ್ರತಿ ವರ್ಷ ಕಾಡ್ಗಿಚ್ಚಿಗೆ ಬಲಿಯಾಗಿ ಮರುಭೂಮಿಯಾಗಿ ಪರಿವರ್ತಿತವಾಗುತ್ತಿರುವುದು ಶೋಚನೀಯ. ಜೀವರಾಶಿಯನ್ನು ತನ್ನ ಒಡಲಲ್ಲಿರಿಸಿ ಸಾಕಿ ಸಲುಹುತ್ತಿದ್ದ ವನ ದೇವತೆ ಇಂದು ಮಾನವನ ದುರಾಸೆಗೆ, ದುರಾಲೋಚನೆಗೆ, ಸ್ವಾರ್ಥಕ್ಕೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಹೀಗೆ ಪ್ರತೀ ವರ್ಷವು ದೇಶದ ಅರಣ್ಯ ಪ್ರದೇಶವು ನಾಶವಾಗುತ್ತಿದ್ದರೂ ನಾಡಿನ ಜನತೆ, ಆಳುವ ಸರಕಾರಗಳು ಅರಣ್ಯ ಸಂರಕ್ಷಣೆಗೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ನಾಡಿನ ನಾಶವು ತಪ್ಪಿದ್ದಲ್ಲ.

ಕರ್ನಾಟಕ ರಾಜ್ಯವು 38,720 ಕಿ.ಮೀ. ಅರಣ್ಯ ಪ್ರದೇಶವನ್ನು ಹೊಂದಿದೆ. ಇದು ರಾಜ್ಯದ ಶೇ.20.19 ಭೂ ಭಾಗದಷ್ಟಿದ್ದು ವೈವಿಧ್ಯ ಪ್ರಾಣಿ ಮತ್ತು ಸಸ್ಯ ಸಂಕುಲವನ್ನು ಹೊಂದಿದೆ. ಅಲ್ಲದೇ ರಾಷ್ಟ್ರದ ಆನೆಗಳ ಸಂಖ್ಯೆಯಲ್ಲಿ ಶೇ.25 ಹಾಗೂ ಹುಲಿಗಳ ಸಂಖ್ಯೆಯಲ್ಲಿ ಶೇ.20 ರಷ್ಟು ಕರ್ನಾಟಕದ ಅರಣ್ಯದಲ್ಲಿವೆ. ಹೀಗೆ ಅನೇಕ ಜೀವರಾಶಿಗಳಿಗೆ ಕರ್ನಾಟಕ ರಾಜ್ಯದ ಅರಣ್ಯಗಳು ವಾಸಸ್ಥಾನವಾಗಿವೆ. ಆದರೆ ಪ್ರತೀ ವರ್ಷ ಕಾಡ್ಗಿಚ್ಚಿನಿಂದಾಗಿ ಈ ಅಭಯಾರಣ್ಯಗಳು ನಾಶವಾಗುತ್ತಿದ್ದು ಅಪಾರ ಸಂಖ್ಯೆಯ ವನ್ಯಜೀವಿಗಳು ನಾಶವಾಗುವುದರ ಮೂಲಕ ರಾಷ್ಟ್ರದ ಅರಣ್ಯ ಸಂಪತ್ತು ಅಳಿದುಹೋಗುತ್ತಿದೆ. ಭಾರತೀಯ ಅರಣ್ಯ ಸಮೀಕ್ಷೆ ವರದಿ ಪ್ರಕಾರ ರಾಜ್ಯದಲ್ಲಿ ಕಾಡ್ಗಿಚ್ಚಿಗೆ ನಾಶವಾದ ಕರ್ನಾಟಕದ ಅರಣ್ಯ ಪ್ರದೇಶವನ್ನು ಗಮನಿಸುವುದಾದರೆ 2015ರಲ್ಲಿ 295 ಹೆಕ್ಟೇರ್ ಪ್ರದೇಶವು ನಾಶವಾಗಿದ್ದರೆ, 2016 ರಲ್ಲಿ 831, 2017ರಲ್ಲಿ 1,333 ಹೆಕ್ಟೇರ್ ಅರಣ್ಯವು ಕಾಡ್ಗಿಚ್ಚಿಗೆ ಬಲಿಯಾಗಿದೆ. ಇದಲ್ಲದೆ ಪ್ರತಿನಿತ್ಯವು 98ಕ್ಕೂ ಅಧಿಕ ಪ್ರಕರಣಗಳು ದೇಶದಾದ್ಯಂತ ವರದಿಯಾಗುತ್ತಿದ್ದು ಕರ್ನಾಟಕವೂ ಇದರಿಂದ ಹೊರತಾಗಿಲ್ಲ.

ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನವನಗಳು, 30ಕ್ಕೂ ಅಧಿಕ ವನ್ಯಜೀವಿ ಅಭಯಾರಣ್ಯಗಳು, ಪಕ್ಷಿಧಾಮಗಳಿದ್ದು ವಿಶ್ವದ ಜನರನ್ನು ಆಕರ್ಷಿಸುವುದರ ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಆದಾಯದ ಮೂಲಗಳಾಗಿವೆ. ಇಂತಹ ವನ್ಯ ಸಂಪತ್ತನ್ನು ಜಾಗರೂಕವಾಗಿ ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಹೊಣೆಯಾಗಿದೆ. ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಅಭಯಾರಣ್ಯವು ತಮಿಳುನಾಡು, ಕೇರಳರಾಜ್ಯದ ಗಡಿಭಾಗದವರೆಗೂ ವ್ಯಾಪ್ತಿಸಿದ್ದು ಇದರ ವಿಸ್ತೀರ್ಣ 874 ಕಿ.ಮೀ.ನಷ್ಟಿದೆ. ಇದು 1973ರಲ್ಲಿ ಭಾರತದ ಹುಲಿ ಸಂರಕ್ಷಿತ ಅಭಯಾರಣ್ಯವಾಗಿ ಘೋಷಿಸಲ್ಪಟ್ಟಿತ್ತಲ್ಲದೆ 1974ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಸಾರ ರಾಷ್ಟ್ರೀಯ ಉದ್ಯಾನವನವಾಗಿ ರೂಪುಗೊಂಡಿತು. ಅಲ್ಲದೆ ಸುಮಾರು 1,700ರಷ್ಟು ಆನೆಗಳನ್ನು, 350ಕ್ಕೂ ಅಧಿಕ ಹುಲಿಗಳು ಹಾಗೂ 250ಕ್ಕೂ ಅಧಿಕ ವಿವಿಧ ಪ್ರಭೇದದ ಪಕ್ಷಿಗಗಳನ್ನು ಹೊಂದಿದೆ. ಹೀಗೆ ಅನೇಕ ರೀತಿಯ ಪ್ರಾಣಿ-ಪಕ್ಷಿ ಸಂಕುಲಗಳು ವಾಸಿಸುವ ಅರಣ್ಯವು ಕಾಡ್ಗಿಚ್ಚಿನಿಂದ ಸುಟ್ಟು ಹೋಗುತ್ತಿರುವುದು ಮಾನವಕುಲದ ಅವನತಿಯಲ್ಲದೆ ಮತ್ತೇನು.

ಕಾಡ್ಗಿಚ್ಚಿಗೆ ಪ್ರಮುಖ ಕಾರಣಗಳು ಮತ್ತು ಅದನ್ನು ನಿಯಂತ್ರಿಸಲು ನಾವು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ಬಗ್ಗೆ ಸರಕಾರ ಮತ್ತು ಸಾರ್ವಜನಿಕರು ಚಿಂತಿಸಬೇಕಿದೆ. ಅರಣ್ಯಗಳ ನಾಶಕ್ಕೆ ತಕ್ಷಣದ ಕಾರಣಗಳು ಸಿಗುವುದೆಂದರೆ ಕಾಡನ್ನೇ ಅವಲಂಬಿಸಿ ಜೀವನ ಸಾಗಿಸುವ ಬುಡಕಟ್ಟಿನ ಜನರು ವ್ಯವಸಾಯಕ್ಕಾಗಿ ಭೂಮಿಯನ್ನು ಹದಗೊಳಿಸಲು ಹಚ್ಚುವ ಬೆಂಕಿಯಿಂದ ಕಾಡ್ಗಿಚ್ಚು ಸಂಭವಿಸುತ್ತಿದೆಯೆನ್ನುವ ಆರೋಪ. ಆದರೆ ಕಾಡಿನ ಬೆಂಕಿಗೆ ಇನ್ನಿತರ ಕಾರಣಗಳೂ ಇರಬಹುದಾಗಿದೆ. ಕಾಡಿನ ಸೌಂದರ್ಯ ನೋಡಲು ಹೋಗುವ ಚಾರಣಿಗರು ಬಳಸುವ ಬೀಡಿ, ಸಿಗರೇಟ್‌ನಿಂದ ಕಾಡ್ಗಿಚ್ಚು ಸಂಭವಿಸಬಹುದು. ಅಲ್ಲದೆ ಉದ್ಯಾನವನಕ್ಕೆ ಭೇಟಿ ನೀಡುವ ಸಾರ್ವಜನಿಕರ ನಿರ್ಲಕ್ಷ್ಯವೂ ಕೂಡ ಕಾಡ್ಗಿಚ್ಚಿಗೆ ಕಾರಣವಾಗಬಹುದು. ಅಂದರೆ ಸಾರ್ವಜನಿಕರು ಬಳಸುವ ಬೆಂಕಿ ಉತ್ಪತ್ತಿ ಮಾಡುವ ಟಾರ್ಚ್‌ಗಳು, ಬೆಂಕಿ ಪೊಟ್ಟಣ, ಲೈಟರ್‌ಗಳನ್ನು ಎಲ್ಲಂದರಲ್ಲಿ ಬಿಸಾಡುವುದರಿಂದ ಬೆಂಕಿ ಸಂಭವಿಸುವ ಸಾಧ್ಯತೆಗಳಿವೆ. ಅಲ್ಲದೆ ಅರಣ್ಯದ ಸುತ್ತಮುತ್ತಲ ಹಳ್ಳಿಯ ಜನರು ಕಟ್ಟಿಗೆಗಾಗಿ ಕಾಡಿನೊಳಗೆ ನುಸುಳುವುದಲ್ಲದೆ ಕಾಡಿಗೆ ಬೆಂಕಿ ಹಚ್ಚುವ ಕೆಲಸವನ್ನೂ ಮಾಡುವುದುಂಟು. ಇಂತಹ ಕೃತ್ಯಗಳಿಂದ ಅಪಾರ ಸಂಖ್ಯೆಯ ಜೀವರಾಶಿಗಳು ನಶಿಸಿಹೋಗುತ್ತಿವೆ.

ಸರಕಾರಗಳು ಮತ್ತು ನಾಡಿನ ಜನತೆ ಕಾಡ್ಗಿಚ್ಚನ್ನು ನಿಯಂತ್ರಿಸಲು ಅಗತ್ಯವಾದ ಕ್ರಮಗಳನ್ನು ಹಾಗೂ ಅಗತ್ಯವಾದ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯವಿದೆ. ಸರಕಾರಗಳು ಕಾಡಿನೊಳಗೆ ಜೀವಿಸುವ ಬುಡಕಟ್ಟು ಜನರನ್ನು ನಿರಾರ್ಶಿತರನ್ನಾಗಿ ಮಾಡಲು ತೋರುವ ಉತ್ಸಾಹವನ್ನು ಅವರಿಗೆ ಅಗತ್ಯವಾದ ಆಶ್ರಯವನ್ನು ಒದಗಿಸಲು ತೋರದಿರುವುದು ನೋವಿನ ಸಂಗತಿ. ಅಂದರೆ ಸರಕಾರಗಳು 2006ರ ಅರಣ್ಯ ಹಕ್ಕು ಕಾಯ್ದೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಚಾರಣಿಗರ ನಿರ್ಬಂಧ ಕಾಯ್ದೆಯನ್ನು ಜಾರಿಗೆ ತರಬೇಕು, ಅತ್ಯಾಧುನಿಕ ತಂತ್ರಜ್ಞಾನಗಳಾದ ಸ್ಯಾಟಲೈಟ್, ಡ್ರೋನ್, ರೋಬೊಟ್‌ಗಳನ್ನು ಉಪಯೋಗಿಸಿಕೊಂಡು ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ತುರ್ತುಕ್ರಮಗಳನ್ನು ಕೈಗೊಳ್ಳಬೇಕು. ಕಾಡ್ಗಿಚ್ಚು ನಂದಿಸುವ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಬೇಕು ಹಾಗೂ ಅದಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ನೇಮಿಸಬೇಕು. ಬೆಂಕಿಯನ್ನು ನಂದಿಸಲು ನೀರನ್ನು ಬಳಸುವ ಬದಲು ನೊರೆಯನ್ನು ಬಳಸುವ ತಂತ್ರಜ್ಞಾನವು ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಇರುವಂತೆ ನಮ್ಮಲ್ಲೂ ಅಳವಡಿಸಿಕೊಳ್ಳಬೇಕು.

ಕಾಡ್ಗಿಚ್ಚನ್ನು ನಂದಿಸಲು ವಿಮಾನ, ಹೆಲಿಕಾಪ್ಟರ್ ಅಗ್ನಿಶಾಮಕ ದಳಗಳನ್ನು ಬಳಸಬೇಕು. ಅರಣ್ಯ ಸಂರಕ್ಷಣಾ ಸಿಬ್ಬಂದಿಗೆ ಉತ್ತಮ ತರಬೇತಿಗಳನ್ನು ನೀಡಬೇಕು. ಉದ್ಯಾನವನಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ತಿಳುವಳಿಕೆ ನೀಡುವ ಸಾಕ್ಷ್ಯಚಿತ್ರಗಳ ಪ್ರದರ್ಶನಗಳನ್ನು ಮಾಡಿಸಬೇಕು. ಇದಲ್ಲದೆ ಸಾರ್ವಜನಿಕರು ಅರಣ್ಯಗಳ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಂಡು ತಮ್ಮ ಸುತ್ತಮುತ್ತಲಿನ ಜನರಿಗೆ ಜಾಗೃತಿ ಮೂಡಿಸಬೇಕು ಹಾಗೂ ತಿಳುವಳಿಕೆ ನೀಡಬೇಕು. ಹೀಗೆ ನಾಡಿನ ಪ್ರತಿಯೊಬ್ಬ ಪ್ರಜೆಯು ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿತು ಬದುಕಬೇಕಿದೆ. ಅಲ್ಲದೆ ವನ್ಯ ಸಂಪತ್ತನ್ನು ಕಾಪಾಡಿಕೊಳ್ಳದೆ ತಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು, ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಇನ್ನಿತರೆ ಮಾರಕಗಳಿಗೆ ಬಲಿಯಾಗಿ ಇಡೀ ಜೀವ ಸಂಕುಲವೆ ನಾಶವಾಗುವ ದಿನಗಳು ದೂರವಿಲ್ಲ.

Writer - ಶ್ರೀನಿವಾಸ್ ಕೆ., ಬೆಂಗಳೂರು

contributor

Editor - ಶ್ರೀನಿವಾಸ್ ಕೆ., ಬೆಂಗಳೂರು

contributor

Similar News