ದಿಲ್ಲಿಯಲ್ಲಿ ಕಾಂಗ್ರೆಸ್ –ಆಪ್ ಮೈತ್ರಿ ಇಲ್ಲ: ಶೀಲಾ ದೀಕ್ಷಿತ್

Update: 2019-03-05 15:43 GMT

ಹೊಸದಿಲ್ಲಿ,ಮಾ.5: ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ನಡೆದ ಮಾತುಕತೆ ವಿಫಲವಾದ ನಂತರ ಆಮ್ ಆದ್ಮಿ ಪಕ್ಷದ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳದಂತೆ ಪಕ್ಷ ನಿರ್ಧರಿಸಿರುವುದಾಗಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಶೀಲಾ ದೀಕ್ಷಿತ್ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಆಪ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ ಒಲವು ವ್ಯಕ್ತಪಡಿಸಿದ್ದರೂ ರಾಜ್ಯದ ಏಳು ಲೋಕಸಭಾ ಸ್ಥಾನಗಳ ಪೈಕಿ ಆಪ್ ಈಗಾಗಲೇ ಆರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್‌ಗೆ ಎರಡು ಸೀಟುಗಳನ್ನು ಬಿಟ್ಟುಕೊಡಲು ಆಪ್ ಸಿದ್ಧವಿದ್ದರೂ ಮೂರು ಸ್ಥಾನಗಳನ್ನು ನೀಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಈ ಮಾತುಕತೆ ಮುರಿದು ಬಿದ್ದ ಕಾರಣ ಆಪ್‌ನಿಂದ ದೂರ ಸರಿಯಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಮತ್ತು ಆಪ್‌ನ ಸಂಜಯ್ ಸಿಂಗ್ ಎರಡು ಪಕ್ಷಗಳ ಮಧ್ಯೆ ಮೈತ್ರಿ ಬಗ್ಗೆ ಚರ್ಚೆಯ ಹೊಣೆಯನ್ನು ಹೊತ್ತಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸನ್ನು ಒಪ್ಪಿಸಲು ಪ್ರಯತ್ನಿಸಿ ಸುಸ್ತಾಗಿರುವುದಾಗಿ ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.

ನಾವು ಮೈತ್ರಿ ಮಾಡಿಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಲ್ಲಿಯ ಎಲ್ಲ ಏಳು ಸ್ಥಾನಗಳಲ್ಲೂ ಸೋಲನುಭವಿಸಲಿದೆ. ಆದರೆ ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಏನು ಇದೆಯೋ ತಿಳಿದಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News