ಸಮುದ್ರ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಉಗ್ರರಿಗೆ ತರಬೇತಿ: ನೌಕಾ ಪಡೆ ಮುಖ್ಯಸ್ಥ ಎಚ್ಚರಿಕೆ

Update: 2019-03-05 10:41 GMT

ಹೊಸದಿಲ್ಲಿ, ಮಾ.5:  ಸಮುದ್ರದ ಮೂಲಕ ಹಾಗೂ ವಿವಿಧ ಇತರ ರೀತಿಗಳಲ್ಲಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ವರದಿಗಳು ನಮಗೆ  ದೊರಕಿದೆ ಎಂದು ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಂಬಾ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

26/11 ಮುಂಬೈ ದಾಳಿಯನ್ನು ಲಷ್ಕರ್-ಎ-ತೊಯ್ಬಾದ 10 ಮಂದಿ ಉಗ್ರರು ಸಮುದ್ರದ ಮೂಲಕ ಆಗಮಿಸಿ ಭಾರತೀಯ ಮೀನುಗಾರಿಕಾ ಟ್ರಾಲರ್ ಒಂದನ್ನು ಅಪಹರಿಸಿ ಮುಂಬೈ ತಲುಪಿ ನಡೆಸಿದ್ದನ್ನು ಇಲ್ಲಿ ಸ್ಮರಿಬಹುದು.

ರಾಜಧಾನಿಯಲ್ಲಿ ಇಂಡೋ ಪೆಸಿಫಿಕ್ ರೀಜನಲ್ ಡೈಲಾಗ್ ನಲ್ಲಿ ಜಾಗತಿಕ ತಜ್ಞರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. “ಜಗತ್ತಿನ ಈ ಭಾಗವು ವಿವಿಧ ರೀತಿಯ ಉಗ್ರವಾದವನ್ನು  ಇತ್ತೀಚಿಗಿನ ವರ್ಷಗಳಲ್ಲಿ  ಸಾಕ್ಷಿಯಾಗಿದೆ. ಈ ಪ್ರಾಂತ್ಯದ ಕೆಲವೇ ಕೆಲವು ದೇಶಗಳು ಮಾತ್ರ ಈ ಸಮಸ್ಯೆಯಿಂದ ಹೊರತಾಗಿವೆ''  ಎಂದು ಅವರು ಹೇಳಿದರು.

“ಒಂದು ದೇಶದ ಸರಕಾರ ಪ್ರವರ್ತಿತ ಉಗ್ರವಾದದಿಂದ ಭಾರತ ಬಹಳಷ್ಟು ಗಂಭೀರ ಬೆದರಿಕೆ ಎದುರಿಸುತ್ತಿದೆ'' ಎಂದು ಹೇಳಿದ ನೌಕಾ ಪಡೆಯ ಮುಖ್ಯಸ್ಥ ``ಇತ್ತಿಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯು  ಭಾರತವನ್ನು ಅಸ್ಥಿರಗೊಳಿಸಲು  ಯತ್ನಿಸುತ್ತಿರುವ ದೇಶವೊಂದು ಬೆಂಬಲಿಸುತ್ತಿರುವ ಉಗ್ರರಿಂದ ನಡೆದಿದೆ'' ಎಂದು ಪಾಕಿಸ್ತಾನವನ್ನು ಹೆಸರಿಸದೆಯೇ ಅವರು ಹೇಳಿದರು.

``ಒಂದು  ನಿರ್ದಿಷ್ಟ ಬ್ರ್ಯಾಂಡ್ ನ ಉಗ್ರವಾದ ಮುಂದೆ ಜಾಗತಿಕ ಸಮಸ್ಯೆಯಾಗಬಹುದು, ಈ ಸಮಸ್ಯೆ ಪರಿಹಾರಕ್ಕೆ ಭಾರತದ ಭದ್ರತಾ ಪಡೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News