ತಾಕತ್ತಿದ್ದರೆ ಪ್ರಧಾನಿ ಮೋದಿಯನ್ನು ಗುಂಡಿಟ್ಟು ಸಾಯಿಸಿ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

Update: 2019-03-05 12:38 GMT

ಬೆಂಗಳೂರು,ಮಾ.5: ನಾಥೂರಾಮ್ ಗೋಡ್ಸೆ ಪರ ಮಾತನಾಡುವವರು ತಾಕತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುಂಡಿಟ್ಟು ಸಾಯಿಸಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾ ನಾಯಕಿ ಹುತಾತ್ಮ ದಿನಾಚರಣೆ ದಿನದಂದು, ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹಾರಿಸಿದ ಘಟನೆ ನಡೆದಿತ್ತು. ಹಾಗೆಯೇ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆರವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಎರಡು ಘಟನೆಗಳನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಕಳೆದ ಫೆಬ್ರವರಿ 4 ರಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಳೆ ಬೇಳೂರುರವರು ಈ ಹೇಳಿಕೆ ನೀಡಿದ್ದರು ಎನ್ನಲಾಗಿದೆ. 

ಈ ವೀಡಿಯೋ ತುಣುಕಿನಲ್ಲಿ ಮೋದಿ ವಿರುದ್ಧ ಬೇಳೂರು ಟೀಕಾಪ್ರಹಾರ ನಡೆಸಿದ್ದಾರೆ. 'ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆ ಬಗ್ಗೆ ಮಾತನಾಡುತ್ತಾರಲ್ಲ ಇವರು, ಇಂತವರು ಈ ದೇಶದಲ್ಲಿರಬಾರದು. ಇವರು ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡಲು ಹೊರಟಿದ್ದಾರೆ. ನಿಮಗೆ ತಾಕತ್ತಿದ್ದರೆ ಮೋದಿಯನ್ನ ಗುಂಡಿಕ್ಕಿ ಸಾಯಿಸಿ' ಎಂದು ಹೇಳಿರುವುದು ಕಂಡುಬರುತ್ತದೆ. 

ಪ್ರಸ್ತುತ ವೀಡಿಯೋ ತುಣುಕನ್ನು ರಾಜ್ಯ ಬಿಜೆಪಿ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ಬೇಳೂರು ಗೋಪಾಲಕೃಷ್ಣ ಪ್ರಧಾನಿ ಹತ್ಯೆಗೆ ಕರೆ ನೀಡಿರುವ ಆರೋಪದಡಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

ʼಕಾಂಗ್ರೆಸ್‌ ನಾಯಕ ಬೇಳೂರು ಗೋಪಾಲಕೃಷ್ಣ ಪಕ್ಷದ ಅಧಿಕೃತ ಸಭೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಪ್ರದಾನಿಯನ್ನು ಹತ್ಯೆ ಮಾಡುವಂತೆ ಕರೆ ನೀಡಿದ್ದಾರೆ. ದೇಶದ ಪ್ರಧಾನಿಯ ಹತ್ಯೆಗೆ ಪ್ರಚೋದನೆ ನೀಡಿರುವ ಮುಖಂಡನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್‌ ಇಲಾಖೆಯನ್ನು ಆಗ್ರಹಿಸುತ್ತಿದ್ದೇವೆʼ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. 

ಕರ್ನಾಟಕ ಬಿಜೆಪಿಯ ಅಧಿಕೃತ ಟ್ವೀಟ್ ಖಾತೆಯಿಂದ ಗೋಪಾಲ ಕೃಷ್ಣ ಅವರ ಹೇಳಿಕೆಯ ವಿಡಿಯೋ ಪ್ರಕಟವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರು, ಕೇಂದ್ರ ಗೃಹ ಇಲಾಖೆಯ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News