ರಾಜ್ಯದಲ್ಲಿ ಸಮರ್ಪಕವಾಗಿ ಬರ ನಿರ್ವಹಣೆ: ಸಚಿವ ಆರ್.ವಿ.ದೇಶಪಾಂಡೆ

Update: 2019-03-05 13:59 GMT

ಧಾರವಾಡ, ಮಾ.5: ರಾಜ್ಯದಲ್ಲಿ ಹಿಂಗಾರು ಹಂಗಾಮಿಗೆ ನಷ್ಟವಾಗಿರುವುದರಿಂದ 156 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅಗತ್ಯ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಸಮರ್ಪಕವಾಗಿ ಬರ ನಿರ್ವಹಣೆ ಮಾಡಲಾಗುತ್ತಿದೆ ಎಂದು ಕಂದಾಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆಗಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಸುಮಾರು 637 ಕೋಟಿ ರೂ.ಇದೆ. ದನಕರು ಮತ್ತು ಜನರಿಗೆ ಕುಡಿಯುವ ನೀರು, ಜನರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಮತ್ತು ದನಕರುಗಳಿಗೆ ಮೇವು ಬ್ಯಾಂಕ್ ಆರಂಭಿಸಲು ಎಲ್ಲ ಜಿಲ್ಲಾಧಿಕಾರಿ ಮತ್ತು ಜಿ.ಪಂ.ಸಿ.ಇ.ಓ.ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಸೇರಿದಂತೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿವಾರ ಜಿಲ್ಲಾ ಪ್ರವಾಸ ಮಾಡಿ ಬರ ಪರಿಹಾರ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ರಿಜಿಸ್ಟರ್ ಒಪನ್ ಮಾಡಿ, ಅಲ್ಲಿ ತಮ್ಮ ಅಭಿಪ್ರಾಯ, ಪರಿಶೀಲಿಸಿದ ಅಂಶಗಳ ಕುರಿತು ದಾಖಲಿಸಬೇಕು ಎಂದು ಅವರು ತಿಳಿಸಿದರು. ಕಳೆದ ಫೆಬ್ರವರಿ 5 ರಂದು ಕೇಂದ್ರದ ಕೃಷಿ ಮತ್ತು ಗೃಹ ಸಚಿವರಿಗೆ ಸಲ್ಲಿಸಿದ್ದ ಮನವಿಯಂತೆ 11 ಜನ ಕೇಂದ್ರ ಅಧಿಕಾರಿಗಳ ತಂಡ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದೆ. ರಾಜ್ಯದಲ್ಲಿ ಭೀಕರ ಬರ ಇರುವ ಬಗ್ಗೆ ಅವರು ಒಪ್ಪಿಕೊಂಡಿದ್ದು, ಶೀಘ್ರವಾಗಿ ಕೇಂದ್ರಕ್ಕೆ ತಮ್ಮ ವರದಿ ಸಲ್ಲಿಸುವುದಾಗಿ ತಂಡದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದೇಶಪಾಂಡೆ ಹೇಳಿದರು.

ಕಳೆದ 18 ವರ್ಷಗಳಲ್ಲಿ 15 ವರ್ಷಗಳಿಂದ ರಾಜ್ಯದಲ್ಲಿ ಬರವಿದೆ. ಮುಂಗಾರು ಹಂಗಾಮಿನಲ್ಲಿ 100 ತಾಲೂಕು ಹಾಗೂ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ವರ್ಷದ ಬರ ಹೆಚ್ಚು ಕಷ್ಟಕರವಾಗಿದ್ದು, ಕಳೆದ ವರ್ಷದ ಮೇ, ಜೂನ್‌ನಲ್ಲಿ ಅತೀವೃಷ್ಟಿಯಿಂದಾಗಿ ರಾಜ್ಯದ 8-10 ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿದೆ ಎಂದು ಅವರು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ 2434 ಕೋಟಿ. ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 950 ಕೋಟಿ ರೂ. ನೀಡಲು ಕೇಂದ್ರ ಸರಕಾರ ಒಪ್ಪಿಗೆ ನೀಡಿ, ಈಗ 442 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಉಳಿದ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ದೇಶಪಾಂಡೆ ಹೇಳಿದರು.

ಪಕ್ಷಬೇಧ ಮರೆತು ಎಲ್ಲ ಜನಪ್ರತಿನಿಧಿಗಳು ಬರ ನಿರ್ವಹಣೆಗೆ ಮತ್ತು ಜನರ ತೊಂದರೆಗಳನ್ನು ನೀಗಿಸಲು ಸಹಕರಿಸಬೇಕು. ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಬರ ನಿರ್ವಹಣಾ ಕಾಮಗಾರಿಗಳ ಅನುಷ್ಠಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಸಂಸದ ಪ್ರಹ್ಲಾದ್ ಜೋಶಿ, ಶಾಸಕ ಅಮೃತ ದೇಸಾಯಿ, ಜಿ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News