ಅಲ್ಪಸಂಖ್ಯಾತ ಹಿಂದೂಗಳ ಅವಹೇಳನ ಮಾಡಿದ ಪಾಕ್ ಸಚಿವನ ವಜಾ

Update: 2019-03-05 14:59 GMT

ಹೊಸದಿಲ್ಲಿ, ಮಾ.5: ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಪಾಕಿಸ್ತಾನದ ಪಂಜಾಬ್ ರಾಜ್ಯದ ವಾರ್ತಾ ಮತ್ತು ಸಂಸ್ಕೃತಿ ಸಚಿವ ಫಯ್ಯಾಝುಲ್ ಹಸನ್ ಚೋಹನ್‌ ರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಚೋಹನ್ ಸಲ್ಲಿಸಿರುವ ರಾಜೀನಾಮೆಯನ್ನು ರಾಜ್ಯದ ಮುಖ್ಯಮಂತ್ರಿ ಉಸ್ಮಾನ್ ಬುಝ್ದಾರ್ ಸ್ವೀಕರಿಸಿದ್ದಾರೆ. ಆದರೆ, ಆಡಳಿತಾರೂಢ ಪಾಕಿಸ್ತಾನ ತೆಹ್ರೀಕೆ ಇನ್ಸಾಫ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯು ಸಚಿವರನ್ನು ‘ವಜಾಗೊಳಿಸಲಾಗಿದೆ’ ಎಂದು ಹೇಳಿದೆ.

‘‘ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದಕ್ಕಾಗಿ ಪಂಜಾಬ್ ಸರಕಾರವು ಫಯ್ಯಾಝುಲ್ ಹಸನ್ ಚೋಹನ್ ‌ರನ್ನು ವಾರ್ತಾ ಮತ್ತು ಸಂಸ್ಕೃತಿ ಸಚಿವ ಹುದ್ದೆಯಿಂದ ವಜಾಗೊಳಿಸಿದೆ. ಒಬ್ಬರ ಧರ್ಮವನ್ನು ನಿಂದಿಸುವುದು ಯಾವುದೇ ವಿಚಾರದ ಭಾಗವಾಗಲಾರದು. ಸಹಿಷ್ಣುತೆಯು ಎಲ್ಲಕ್ಕಿಂತ ಮೊದಲು ಹಾಗೂ ಅತ್ಯಂತ ಮಹತ್ವದ ಕಂಬ, ಇದರ ಮೇಲೆ ಪಾಕಿಸ್ತಾನವನ್ನು ನಿರ್ಮಿಸಲಾಗಿದೆ’’ ಎಂದು ಟ್ವಿಟರ್ ನಲ್ಲಿ ಪಾಕಿಸ್ತಾನ ತೆಹ್ರೀಕೆ ಇನ್ಸಾಫ್ ಹೇಳಿದೆ.

ಕಳೆದ ತಿಂಗಳು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಪಂಜಾಬ್ ಸಚಿವರು, ಹಿಂದೂಗಳನ್ನು ‘ದನದ ಮೂತ್ರ ಕುಡಿಯುವ ಜನರು’ ಎಂಬುದಾಗಿ ಕರೆದಿದ್ದರು ಎಂದು ‘ಸಮಾ’ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

‘‘ನಾವು ಮುಸ್ಲಿಮರು, ನಮಗೆ ಒಂದು ಧ್ವಜ ಇದೆ. ನಮ್ಮಲ್ಲಿ ಮೌಲಾ ಅಲಿಯವರರ ಶೌರ್ಯದ ಧ್ವಜವಿದೆ ಹಾಗೂ ಹಝ್ರತ್ ಉಮರ್ ಅವರ ಪರಾಕ್ರಮದ ಧ್ವಜವಿದೆ. ನಿಮ್ಮಲ್ಲಿ ಆ ಧ್ವಜವಿಲ್ಲ. ಅದು ನಿಮ್ಮ ಕೈಯಲ್ಲಿಲ್ಲ’’ ಎಂಬುದಾಗಿ ಫಯ್ಯಾಝುಲ್ ಹಸನ್ ಚೋಹನ್ ಹೇಳಿದ್ದರು.

‘‘ನೀವು ನಮಗಿಂತ ಏಳು ಪಟ್ಟು ಶ್ರೇಷ್ಠ ಎಂಬ ಭ್ರಮೆಯಲ್ಲಿ ಬದುಕಬೇಡಿ. ನಮ್ಮಲ್ಲಿ ಏನಿದೆಯೋ ಅದನ್ನು ನೀವು ಹೊಂದಲು ಸಾಧ್ಯವಿಲ್ಲ, ಮೂರ್ತಿ ಪೂಜೆ ಮಾಡುವವರೇ’’ ಎಂದು ಅವರು ಹೇಳಿದ್ದರು. ಅವರ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ, ಉಭಯ ದೇಶಗಳ ನಡುವಿನ ಉದ್ವಿಗ್ನತೆಯಲ್ಲಿ ಉಂಟಾದ ಹೆಚ್ಚಳದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಮಾನವಹಕ್ಕು ಸಚಿವೆಯಿಂದ ಖಂಡನೆ

ಪಂಜಾಬ್ ಸಚಿವರು ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ವಾಗ್ದಾಳಿಯನ್ನು ಕೇಂದ್ರ ಮಾನವಹಕ್ಕುಗಳ ಸಚಿವೆ ಶಿರೀನ್ ಮಝರಿ ಖಂಡಿಸಿದ್ದಾರೆ.

‘‘ಯಾರದೇ ಧರ್ಮವನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ. ನಮ್ಮ ಹಿಂದೂ ಪ್ರಜೆಗಳು ಕೂಡ ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸಹಿಷ್ಣುತೆ ಮತ್ತು ಪರಸ್ಪರ ಗೌರವದ ಮಹತ್ವದ ಬಗ್ಗೆ ನಮ್ಮ ಪ್ರಧಾನಿ ಯಾವಾಗಲೂ ಮಾತನಾಡುತ್ತಿರುತ್ತಾರೆ. ಯಾವುದೇ ರೀತಿಯ ಅಸಹಿಷ್ಣುತೆ ಅಥವಾ ಧಾರ್ಮಿಕ ದ್ವೇಷದ ಪ್ರಚಾರವನ್ನು ನಾವು ಸಹಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.

ಬಿಳಿ ಇಲ್ಲದೆ ಪಾಕ್ ಧ್ವಜ ಸಂಪೂರ್ಣವಲ್ಲ: ಹಣಕಾಸು ಸಚಿವ

‘‘ಪಾಕಿಸ್ತಾನದ ರಾಷ್ಟ್ರಧ್ವಜವು ಹಸಿರು ಮಾತ್ರವಲ್ಲ, ಅದರಲ್ಲಿ ಬಿಳಿಯೂ ಇದೆ. ಬಿಳಿ ಇಲ್ಲದೆ ಧ್ವಜ ಸಂಪೂರ್ಣವಾಗುವುದಿಲ್ಲ. ರಾಷ್ಟ್ರದ್ವಜದ ಬಿಳಿ ಬಣ್ಣವು ಅಲ್ಪಸಂಖ್ಯಾತರನ್ನು ಪ್ರತಿನಿಧಿಸುತ್ತದೆ’’ ಎಂದು ಹಣಕಾಸು ಸಚಿವ ಅಸಾದ್ ಉಮರ್ ಹೇಳಿದ್ದಾರೆ.

‘ನನ್ನಷ್ಟೇ ಪಾಕಿಸ್ತಾನದ ಹಿಂದೂಗಳು ಕೂಡ ದೇಶದ ವ್ಯವಸ್ಥೆಯ ಭಾಗವಾಗಿದ್ದಾರೆ. ಖಾಯಿದೆ ಅಝಮ್ ರ ಸಮಗ್ರ ಹೋರಾಟ ತಾರತಮ್ಯ ರಹಿತ ದೇಶಕ್ಕಾಗಿ ಎಂಬುದನ್ನು ಜ್ಞಾಪಿಸಿಕೊಳ್ಳಿ’’ ಎಂದು ಅವರು ಹೇಳಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News