ಪುಲ್ವಾಮ ದಾಳಿ ‘ಅಪಘಾತ’ ಎಂದ ದಿಗ್ವಿಜಯ್ ಸಿಂಗ್

Update: 2019-03-05 16:33 GMT

ಹೊಸದಿಲ್ಲಿ, ಮಾ. 5: ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮಂಗಳವಾರ ಮಾಡಿದ ಸರಣಿ ಟ್ವೀಟ್‌ನಲ್ಲಿ ಪುಲ್ವಾಮ ದಾಳಿ ‘ಅಪಘಾತ’ ಎಂದು ವ್ಯಾಖ್ಯಾನಿಸಿದ್ದಾರೆ. ಭಾರತೀಯ ವಾಯು ಪಡೆ ಬಾಲಕೋಟ್‌ನಲ್ಲಿ ನಡೆಸಿದ ದಾಳಿ ಸತ್ಯವೋ ಸುಳ್ಳೋ ಎಂಬ ಬಗ್ಗೆ ವರದಿ ನೀಡುವಂತೆ ಸಿಂಗ್ ಸರಕಾರವನ್ನು ಆಗ್ರಹಿಸಿದ್ದಾರೆ.

'ಪುಲ್ವಾಮ ‘ಅಪಘಾತ’ದ ಹಿನ್ನೆಲೆಯಲ್ಲಿ ವಾಯು ಪಡೆ ನಡೆಸಿದ ದಾಳಿಯ ಬಗ್ಗೆ ಕೆಲವು ವಿದೇಶಿ ಮಾಧ್ಯಮಗಳು ಸಂದೇಹ ವ್ಯಕ್ತಪಡಿಸಿವೆ. ಇದು ಭಾರತದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತಿವೆ” ಎಂದು ಸಿಂಗ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘‘ಪ್ರಧಾನ ಮಂತ್ರಿ ಅವರೇ ನಿಮ್ಮ ಕೆಲವು ಸಚಿವರು 300 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ 250 ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದಿತ್ಯನಾಥ್ 400 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಿದ್ದಾರೆ. ಎಸ್.ಎಸ್. ಅಹ್ಲುವಾಲಿಯ ಅವರು ಯಾರೂ ಹತರಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ನೀವು ಮೌನವಾಗಿದ್ದೀರಿ. ಆದುದರಿಂದ ಯಾರು ಸುಳ್ಳುಗಾರರು ಎಂಬುದನ್ನು ತಿಳಿಯಲು ದೇಶ ಬಯಸುತ್ತದೆ.’’ ಎಂದು ಅವರು ಹೇಳಿದ್ದಾರೆ.

ಪುಲ್ವಾಮ ದಾಳಿ ‘ಅಪಘಾತ’ ಎಂಬ ದಿಗ್ವಿಜಯ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಕಾಂಗ್ರೆಸ್‌ಗೆ ಏನಾಗಿದೆ ?, ಅದು ದೇಶದ ಭಾವನೆಗೆ ವಿರುದ್ಧವಾಗಿ ಮಾತನಾಡುತ್ತಿದೆ. ಸಶಸ್ತ್ರ ಸೇನಾ ಪಡೆ ನೀಡಿದ ಮಾಹಿತಿಯನ್ನು ಅದು ತಿರಸ್ಕರಿಸುತ್ತಿದೆ. ಸಶಸ್ತ್ರ ಸೇನಾ ಪಡೆ ಹಾಗೂ ಅದರ ಸಾಮರ್ಥ್ಯವನ್ನು ಪ್ರಶ್ನಿಸುವಲ್ಲಿ ಪ್ರಜಾಪ್ರಭುತ್ವ ಇರಲಾರದು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News