ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ವಿಚಾರ ಹೈಕಮಾಂಡ್ ನಿರ್ಧಾರ: ಸಂಸದ ಉಗ್ರಪ್ಪ

Update: 2019-03-05 18:41 GMT

ದಾವಣಗೆರೆ, ಮಾ.5: ಹಿರಿಯ ನಟಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಟಿ ಸುಮಲತಾ ಕೆಲ ದಿನಗಳ ಹಿಂದಷ್ಟೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಸುಮಲತಾ ತೆಗೆದುಕೊಂಡಿರಬಹುದು. ಆದರೆ, ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠರದ್ದೇ ತೀರ್ಮಾನ ಎಂದರು.

ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರ, ಜೆಡಿಎಸ್ ಪಕ್ಷಕ್ಕೆ ಎಷ್ಟು ಕ್ಷೇತ್ರ, ಎಲ್ಲೆಲ್ಲಿ ಯಾವ ಪಕ್ಷಕ್ಕೆ ಟಿಕೆಟ್ ನೀಡಬೇಕೆಂಬುದನ್ನೂ ಪಕ್ಷಗಳ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್ಸಿನ ಮುಖಂಡರು ಉಮೇಶ ಜಾಧವ್‌ರನ್ನು ಕರೆ ತಂದು ಶಾಸಕರನ್ನಾಗಿ ಮಾಡಿದರು. ಆದರೆ, ಅವರು ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜನಾದೇಶಕ್ಕೆ ಅವಮಾನಿಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ಗೆ ಅನೇಕರು ಬರುತ್ತಾರೆ, ಹೋಗುತ್ತಾರೆ. ಜಾಧವ್ ಹೋದಾಕ್ಷಣವೇ ಕಾಂಗ್ರೆಸ್ ಬಡವಾಯಿತು ಎಂದರೆ ಅದು ಭ್ರಮೆಯಷ್ಟೇ. ಶಾಸಕರಾಗಿದ್ದರೂ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ ಇಂತಹ ಸಮಯ ಸಾಧಕರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ. ಉಮೇಶ ಜಾಧವ್ ರಾಜೀನಾಮೆ ಹಿಂದೆ ಬಿಜೆಪಿ ಮುಖಂಡರ ಕುತಂತ್ರವೂ ಇದೆ ಎಂದು ಉಗ್ರಪ್ಪಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News