ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಶಾಸಕ, ಸಂಸದರ ನಡುವೆ ಮಾತಿನ ಚಕಮಕಿ

Update: 2019-03-05 18:43 GMT

ದಾವಣಗೆರೆ, ಮಾ.5: ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಿರ್ಮಾಣವಾಗುತ್ತಿರುವ ನಗರದ ಪಿಬಿ ರಸ್ತೆಯ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಯಾರು ಮಾಡಿದ್ದು? ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಮಧ್ಯೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.

ಕಾರ್ಯಕ್ರಮ ನಿರೂಪಿಸುತ್ತಿದ್ದ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಬೈರೇಶ್, ನಗರದ ಅಭಿವೃದ್ಧಿಗೆ ಕಾಂಗ್ರೆಸ್‌ನ ಶಾಸಕರು 553 ಕೋಟಿ ರೂ. ಅನುದಾನ ತಂದಿದ್ದಾರೆ ಎಂಬ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಆಕ್ಷೇಪ ವ್ಯಕ್ತಪಡಿಸಿ, ಇಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಧಾನಿಯವರ ಕನಸಿನದ್ದು. ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ್ದು, ಇಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಮಪಾಲು ಅನುದಾನ ಇದೆ. ಆದರೆ, ಇದು ಕೇವಲ ರಾಜ್ಯ ಸರಕಾರದ್ದು, ಕಾಂಗ್ರೆಸ್ ಶಾಸಕರ ಅನುದಾನದ್ದಲ್ಲ. ಸಾರ್ವಜನಿಕರಿಗೆ ಸುಳ್ಳು ಹೇಳಬಾರದು ಎಂದು ಹೇಳಿದರು.

ದಾವಣಗೆರೆ ಎಂದರೆ ಶಾಮನೂರು ಶಿವಶಂಕರಪ್ಪಮತ್ತು ಮಕ್ಕಳು ಎಂಬಂತಾಗಿದೆ. ಪ್ರತಿನಿತ್ಯ ನನ್ನ ಬಗ್ಗೆ ಕಾಂಗ್ರೆಸ್ ಶಾಸಕರು ಪತ್ರಿಕೆಗಳ ಮೂಲಕ ತಿರುಗೇಟು ಕೊಡುತ್ತಿದ್ದಾರೆ. ನಾನು ಮನೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಯಾರು ಮನೆಗೆ ಹೋಗುತ್ತಾರೆ ಎಂಬುದು ಜನರಿಗೆ ಗೊತ್ತು ಎಂದು ಸಿದ್ದೇಶ್ವರ್ ಅವರು ಪಕ್ಕದಲ್ಲೇ ಕುಳಿತ ಶಾಮನೂರು ಶಿವಶಂಕರಪ್ಪಗೆ ತಿರುಗೇಟು ನೀಡಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಾಮಗಾರಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ್ದೇ ಆಗಿದೆ. ಆದರೆ ಈ ಕಾಮಗಾರಿ ಯೋಜನೆ ರೂಪಿಸಿದವರು ಯಾರು? ಎಂಬ ಪ್ರಶ್ನೆ ಬಂದಾಗ ಅದು ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ ಎಂದು ಮಗನ ಪರ ಮಾತನಾಡಿದರು.

ಸಾರ್ವಜನಿಕರಿಗೆ ಹಾಗೂ ಬಸ್ ಮಾಲಕರಿಗೂ ತೊಂದರೆಯಾಗಬಾರದು ಎಂಬ ಹಿನ್ನಲೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಸುಸಜ್ಜಿತವಾದ ಯೋಜನೆ ರೂಪಿಸಿದರು. ಅದರ ಪರಿಣಾಮವೇ ಇಂದಿನ ಕಾಮಗಾರಿಗೆ ಶಿಲಾನ್ಯಾಸ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಚಮನ್ ಸಾಬ್, ಪಾಲಿಕೆ ಸದಸ್ಯರಾದ ದಿನೇಶ್ ಶೆಟ್ಟಿ ಹಾಗೂ ಸುರೇಂದ್ರ ಮೋಯ್ಲಿ, ಮುಖಂಡರಾದ ಎನ್. ತಿಪ್ಪಣ್ಣ, ಕೆ.ಎಸ್. ಮಲ್ಲೇಶಪ್ಪ, ಯಶವಂತ್‌ರಾವ್ ಜಾಧವ್, ಕೆ.ಜಿ. ಶಿವಕುಮಾರ್, ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಹಾಗೂ ಬಸ್ ಏಜೆಂಟರ ಸಂಘ ಪದಾಧಿಕಾರಿಗಳು ಇದ್ದರು.

ಹಣ ಯಾರದೇ ಆಗಿರಬಹುದು. ಆದರೆ, ಅದರ ಸದುಪಯೋಗ, ಬಳಕೆ, ಯೋಜನೆ ರೂಪಿಸಿದ್ದು ಪ್ರಮುಖವಾಗುತ್ತದೆ ಎಂಬುದನ್ನು ಮರೆಯಬಾರದು. ಒಳ್ಳೆಯ ಕೆಲಸ ಮಾಡಿದವರನ್ನು ಯಾವತ್ತು ಮರೆಯಬಾರದು.

-ಶಾಮನೂರು ಶಿವಶಂಕರಪ್ಪ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News