ಬೇರ್ಪಟ್ಟ ದಂಪತಿ ಸಹಜೀವನಕ್ಕೆ ಕೋರ್ಟ್ ಒತ್ತಾಯಿಸಬಹುದೇ?

Update: 2019-03-06 03:48 GMT

ಹೊಸದಿಲ್ಲಿ, ಮಾ.6: ವ್ಯಕ್ತಿಯ ಖಾಸಗಿತನ ಮತ್ತು ಸ್ವಾಯತ್ತತೆಯನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಬೇರ್ಪಟ್ಟ ದಂಪತಿ ಸಹಜೀವನಕ್ಕೆ ಅಥವಾ ವೈವಾಹಿಕ ಸಂಬಂಧ ಮರು ಆರಂಭಕ್ಕೆ ನ್ಯಾಯಾಲಯ ಒತ್ತಡ ತರಲು ಹಿಂದೂ ವಿವಾಹ ಕಾಯ್ದೆಯಲ್ಲಿ ಅವಕಾಶವಿದ್ದು, ಇದನ್ನು ಪಿಐಎಲ್‌ನಲ್ಲಿ ಪ್ರಶ್ನಿಸಲಾಗಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 9ರ ಅನ್ವಯ ದಂಪತಿ ಪೈಕಿ ಒಬ್ಬರು ಪ್ರತ್ಯೇಕವಾಗಿ ವಾಸವಿದ್ದರೆ, ಒಡನಾಡಿ ಹಕ್ಕು ಮರುಸ್ಥಾಪನೆಗಾಗಿ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಇದನ್ನು ನ್ಯಾಯಾಲಯ ಮಾನ್ಯ ಮಾಡಿದ ಬಳಿಕವೂ ಇಚ್ಛೆ ಇಲ್ಲದ ಪಾಲುದಾರರು ಪತಿ/ ಪತ್ನಿಯ ಜತೆ ವಾಸಿಸಲು ಮುಂದಾಗದಿದ್ದರೆ, ನ್ಯಾಯಾಲಯ ಆದೇಶವನ್ನು ಗೌರವಿಸದೇ ಇರುವ ಕಾರಣಕ್ಕಾಗಿ ಅವರ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.

ಇಬ್ಬರು ಕಾನೂನು ವಿದ್ಯಾರ್ಥಿಗಳು ಈ ಹಕ್ಕನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲರಾದ ಓಜಸ್ವ ಪಾಠಕ್, ಮಯಾಂಕ್ ಗುಪ್ತಾ ಮತ್ತು ಸಂಜಯ್ ಹೆಗ್ಡೆ, ಆಧಾರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ನೀಡಿದ ತೀರ್ಪನ್ನು ಉಲ್ಲೇಖಿಸಿದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ, ಈ ಬಗ್ಗೆ ವಿಚಾರಣೆ ನಡೆಸುತ್ತಿದೆ. ಈ ಅರ್ಜಿಯ ಮಹತ್ವದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೂವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲು ನ್ಯಾಯಪೀಠ ನಿರ್ಧರಿಸಿತು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 9 ಲಿಂಗತಟಸ್ಥವಾಗಿದ್ದರೂ, ಬಹುತೇಕವಾಗಿ ಪುರುಷರು ತಮ್ಮಿಂದ ಬೇರ್ಪಟ್ಟ ಪತ್ನಿಯ ಮೇಲೆ ಸಂಬಂಧ ಮರುಸ್ಥಾಪನೆಗಾಗಿ ನ್ಯಾಯಾಲಯಗಳಿಂದ ಆದೇಶ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಅರ್ಜಿದಾರರ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News