ಪ್ರೊಫೆಸರ್ ಸಂದೀಪ್ ರಿಂದ ಪೊಲೀಸ್ ದೂರು: ಎಬಿವಿಪಿಯ 6 ಮಂದಿಯ ವಿರುದ್ಧ ಎಫ್‍ಐಆರ್

Update: 2019-03-06 13:42 GMT

ಬೆಂಗಳೂರು, ಮಾ.6: ಇತ್ತೀಚಿಗಿನ ಭಾರತ-ಪಾಕ್ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಎಬಿವಿಪಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಲವಂತವಾಗಿ ಮೊಣಕಾಲೂರಿ ಕ್ಷಮಾಪಣೆ ಕೋರಿದ್ದ ವಿಜಯಪುರದ ಡಾ. ಪಿ ಜಿ ಹಾಲಕಟ್ಟಿ ಇಂಜಿನಿಯರಿಂಗ್ ಕಾಲೇಜ್ ಆ್ಯಂಡ್ ಟೆಕ್ನಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಸಂದೀಪ್ ಮಾರ್ಚ್ 3ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಅಂತೆಯೇ ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಆರು ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಆರೋಪಿಗಳನ್ನು ಸಚಿನ್ ಬಾಗೇವಾಡಿ, ಕಮಲೇಶ್ ಸಾಹುಕಾರ್, ವಿನೋದ್ ಮಣಿವಡ್ಡರ್, ಬಸವರಾಜ್ ಲಗಾಲಿ, ಸಚಿನ್ ಕೋಲೂರ್ ಹಾಗೂ ಸಂತೋಷ್ ಚೌಧುರಿ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಎಬಿವಿಪಿ ಸದಸ್ಯರಾಗಿದ್ದಾರೆ. ಅವರ ವಿರುದ್ಧ ಸೆಕ್ಷನ್ 143, 147, 341,447, 290. 504, 506, 149  ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತ ಪ್ರೊಫೆಸರ್ ಸಂದೀಪ್, ತಮಗೀಗ ತಮ್ಮ ಉದ್ಯೊಗ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ತಮ್ಮ ಗೌರವದ ಬಗ್ಗೆ ಚಿಂತೆಯಾಗಿದೆ ಎಂದಿದ್ದಾರೆ. “ನಾನೊಬ್ಬ ದೇಶವಿರೋಧಿ ಎಂದು ನಂಬಿರುವ ಜನರಿದ್ದಾರೆ. ಪೊಲೀಸ್ ತನಿಖೆಗಿಂತ ಇದರ ಬಗ್ಗೆ ನನಗೆ ಹೆಚ್ಚು ಚಿಂತೆಯಾಗಿದೆ. ಪೊಲೀಸರ ತನಿಖೆಗೆ ಸಮಯ ತಗಲುವುದು. ನಂತರವಷ್ಟೇ ಯಾರಿಗಾದರೂ ಶಿಕ್ಷೆ ದೊರೆಯುವುದೇ ಎಂದು ತಿಳಿಯುವುದು.  ಆದರೆ ನನ್ನ ಮಾನ ಹಾನಿಯಾಗಿದೆ. ಅದನ್ನು ಹೇಗೆ ವಾಪಸ್ ಪಡೆಯುವುದು?'' ಎಂದು ಅವರು ಹೇಳಿದ್ದಾರೆ.

ಮಂಗಳವಾರವಷ್ಟೇ ಅವರು ಕಾಲೇಜಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು  ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಬೇಡವೇ ಎಂದು ನಿರ್ಧರಿಸಲು ಕಾಲೇಜು ಪಂಚ ಸದಸ್ಯರ ಸಮಿತಿ ರಚಿಸಿದೆ.  ಕಾಲೇಜು ವಿದ್ಯಾರ್ಥಿಗಳಾಗಿರುವ ಕೆಲ ಎಬಿವಿಪಿ ಸದಸ್ಯರ ಒತ್ತಡದ ಮೇರೆಗೆ ಈ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು  ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News