ಬೆಳೆಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ: ಅಧಿಕಾರಿಗಳಿಗೆ ಕೊಡಗು ಜಿಲ್ಲಾಧಿಕಾರಿ ನಿರ್ದೇಶನ

Update: 2019-03-06 18:33 GMT

ಮಡಿಕೇರಿ, ಮಾ.6: ಬೆಳೆಹಾನಿ ಪರಿಹಾರ ಸಂಬಂಧ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ, ಕೂಡಲೇ ಕಚೇರಿಗೆ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಕಾಮಗಾರಿಗಳು ಹಾಗೂ ಪರಿಹಾರ ವಿತರಣೆ ಪ್ರಗತಿ ಕುರಿತು ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆಹಾನಿ ಸಂಬಂಧಿಸಿದಂತೆ ಈಗಾಗಲೇ ಬೆಳೆ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಬಾಕಿ ಇರುವುದನ್ನು ತಂತ್ರಾಂಶದಲ್ಲಿ ಅಳವಡಿಸಿ ಮಾಹಿತಿ ಒದಗಿಸುವಂತೆ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆ, ತೋಟ ಕಳೆದುಕೊಂಡ ಬಿಟ್ಟು ಹೋಗಿರುವ ಕುಟುಂಬದವರ ನಿಖರ ಮಾಹಿತಿಯನ್ನು ಶುಕ್ರವಾರದೊಳಗೆ ಒದಗಿಸುವಂತೆ ಅನೀಸ್ ಕಣ್ಮಣಿ ಜಾಯ್ ಅಧಿಕಾರಿಗಳಿಗೆ ಸೂಚಿಸಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ಕುಟುಂಬದವರಲ್ಲಿ ಸುಮಾರು 76 ಕುಟುಂಬಗಳ ದಾಖಲಾತಿ ಇಲ್ಲದಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಪುನರ್ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬಾಣೆ ಭೂಮಿಗೆ ಸಂಬಂಧಿಸಿದಂತೆ ಬೆಳೆಹಾನಿ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಸಂಬಂಧ ಪರಿಹಾರ ಯಾರಿಗೆ ನೀಡಬಹುದು ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಕಂದಾಯ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ಈಗಾಗಲೇ ಜಂಬೂರು, ಮದೆ, ಕರ್ಣಂಗೇರಿಯಲ್ಲಿ ನಿರ್ಮಾಣವಾಗುತ್ತಿರುವ ಮನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಮನೆಗಳನ್ನು ಕೂಡಲೇ ನಿರ್ಮಾಣ ಮಾಡಬೇಕಿದೆ. ಜೊತೆಗೆ ಬೆಳೆಹಾನಿಯ ಪರಿಹಾರವನ್ನು ಅರ್ಹ ಕುಟುಂಬಗಳಿಗೆ ಶೀಘ್ರದಲ್ಲಿ ತಲುಪಿಸಬೇಕಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಮಾತನಾಡಿದರು. ಸಭೆಯಲ್ಲಿ ತಹಶೀಲ್ದಾರ್ ಗೋವಿಂದ ರಾಜು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News