ಶಾಂತವೇರಿ ಗೋಪಾಲಗೌಡರ ಮೊದಲ ಚುನಾವಣೆ ಮತ್ತು ಆನಂತರ

Update: 2019-03-06 18:42 GMT

ಶಾಂತವೇರಿ ಗೋಪಾಲಗೌಡ (ಜೀವನ ಚರಿತ್ರೆ)

ಲೇಖಕ: ನಟರಾಜ್ ಹುಳಿಯಾರ್,

ಪ್ರಕಟನೆ: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಹೊಸದಿಲ್ಲಿ, ಬೆಲೆ ರೂ. 180
ವಿತರಕರು: ಪಲ್ಲವ ಪ್ರಕಾಶನ ಮೊ: 9480353507

ಬಿಡುಗಡೆ: 7 ಮಾರ್ಚ್ 2019, ಗುರುವಾರ ಸಂಜೆ 5:30ಕ್ಕೆ.

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.


ಸ್ವಾತಂತ್ರ್ಯ ಚಳವಳಿಯಲ್ಲಿ ರೂಪುಗೊಂಡ ಶಾಂತವೇರಿ ಗೋಪಾಲಗೌಡರು 1950ರ ದಶಕದ ಹೊತ್ತಿಗಾಗಲೇ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಜೀವನವನ್ನು ಪ್ರವೇಶಿಸಿದ್ದರು. ಕಾಗೋಡು ಸತ್ಯಾಗ್ರಹದ ನಂತರ ದೊಡ್ಡ ನಾಯಕನಾಗಿ ಬೆಳೆಯತೊಡಗಿದ ಅವರು ಕಾಲದ ಒತ್ತಡ ಹಾಗೂ ಕಾಲದ ಅಗತ್ಯಗಳ ಕಾರಣದಿಂದ ಪೂರ್ಣಾವಧಿ ರಾಜಕಾರಣಿಯಾದರು; ತಮ್ಮ ಜೀವಿತದ ಕೊನೆಯ ತನಕ ರಾಜಕೀಯ ಜೀವನದಲ್ಲೇ ಇದ್ದರು. ಗೋಪಾಲಗೌಡರು ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಆಗಿನ ಮೈಸೂರು ರಾಜ್ಯದ ಪ್ರಥಮ ಮಹಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದರು. ಅವರು 1952ನೇ ಇಸವಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು ಕೂಡ ಒಂದು ರೀತಿಯಲ್ಲಿ ಅನಿರೀಕ್ಷಿತವಾಗಿತ್ತು.
ಗೋಪಾಲಗೌಡರ ಚುನಾವಣಾ ಪ್ರಚಾರ ಕೂಡ ಸರಳವಾಗಿತ್ತು. ಸಮಾಜವಾದಿ ಪಕ್ಷದ ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಜನರಿಗೆ ಮನ ಮುಟ್ಟುವಂತೆ ಹೇಳುವುದು; ಜನರ ಸಮಸ್ಯೆಗಳನ್ನು ಬಿಡಿಸಿಟ್ಟು ಭಾಷಣ ಮಾಡುವುದು; ‘‘ನೀವು ಜಾತಿ ನೋಡಿ ಮತ ಕೊಟ್ಟರೆ ಅದು ನನಗೆ ಬೇಡ’’ ಎಂದು ನೇರವಾಗಿ ಮತದಾರರಿಗೆ ಹೇಳುವುದು; ಕಾಂಗ್ರೆಸ್ ಪಕ್ಷದ ಎದುರಾಳಿ ಬದರಿನಾರಾಯಣರ ವಿರುದ್ಧ ಕೂಡ ಲಘುವಾಗಿ ಮಾತಾಡದೆ, ಅವರ ವಿರುದ್ಧ ತಾತ್ವಿಕವಾದ ಟೀಕೆಗಳನ್ನಷ್ಟೇ ಮಾಡುವುದು; ಊರಿಂದ ಊರಿಗೆ ಬಹುತೇಕ ಕಾಲು ನಡಿಗೆಯಲ್ಲೋ ಬಸ್ಸಿನಲ್ಲೋ ಪ್ರಯಾಣ ಮಾಡುವುದು; ಮತದಾರರ ಮನೆಯಲ್ಲಿ ಊಟ, ತಿಂಡಿ ಮಾಡಿ ಮುಂದಕ್ಕೆ ಹೋಗುವುದು; ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಮಿತಿಯೇ ಹಣ ಸಂಗ್ರಹಣೆ, ಅದರ ಲೆಕ್ಕ, ಖರ್ಚು-ವೆಚ್ಚ ಎಲ್ಲವನ್ನೂ ನೋಡಿಕೊಳ್ಳುವುದು...ಗೌಡರ ಮೊದಲ ಚುನಾವಣೆ ನಡೆದಿದ್ದು ಹೀಗೆ.
ಚುನಾವಣಾ ಪ್ರಚಾರ ಆರಂಭವಾಗಿ ಕೆಲವು ದಿನಗಳ ನಂತರ, ಬಾಡಿಗೆಗೆ ಒಂದು ಕಾರು, ಮೈಕು ವ್ಯವಸ್ಥೆಯಾಯಿತು. ಈ ನಡುವೆ ಅವರನ್ನು ಕರೆದೊಯ್ಯುತ್ತಿದ್ದ ಮಿತ್ರರೊಬ್ಬರ ಕಾರು ಬ್ರೇಕಿಲ್ಲದೆ ಹೊಳೆಯಲ್ಲಿ ಮುಳುಗುವುದು ಅಲ್ಪಸ್ವಲ್ಪದರಲ್ಲಿ ತಪ್ಪಿದ್ದೂ ಆಯಿತು. ಒಮ್ಮೆಯಂತೂ, ಹೀಗೇ ಓಡಾಡುತ್ತಾ ಓಡಾಡುತ್ತಾ ಕುದಿಯುವ ಜ್ವರದಲ್ಲೂ ಗೌಡರು ಕೆಲಸ ಮಾಡುತ್ತಿದ್ದರು. ನಡು ರಾತ್ರಿಯಾದರೂ ಜನ ಅವರ ಭಾಷಣಕ್ಕಾಗಿ ಕಾಯುತ್ತಲೇ ಇರುತ್ತಿದ್ದರು. ಇಂಥ ಸಭೆಗಳು ಬೆಳಗಿನ ಜಾವ ಮುಗಿದದ್ದೂ ಇತ್ತು. ಆ ನಡುರಾತ್ರಿಯ ಭಾಷಣಗಳಲ್ಲೂ ಸಮಾನತೆ, ಹೋರಾಟ, ಬದುಕು... ಇವೆಲ್ಲ ವಿಚಾರಗಳ ಪರಿಚಯ ಮತದಾರರಿಗೆ ಆಗುತ್ತಿತ್ತು. ಚುನಾವಣೆಯ ಪ್ರಚಾರದಲ್ಲಿ ಅವರ ಜೊತೆ ಓಡಾಡುತ್ತಿದ್ದ ಎಲ್ಲರೂ ಒಂದು ಕುಟುಂಬದಂತೆ ಅವರ ಜೊತೆ ಇರುತ್ತಿದ್ದರು. ಇದೆಲ್ಲದರ ನಡುವೆ, ಗೌಡರು ಎಲ್ಲರನ್ನೂ ನಗಿಸಿಕೊಂಡು, ಮಧ್ಯೆ ಮಧ್ಯೆ ಹಾಡು ಹೇಳಿಕೊಂಡು ದಾರಿ ಸವೆಸುತ್ತಿದ್ದರು. ಮುಂದೆ ನಾಯಕರಾಗಿ ಬೆಳೆದ ಹತ್ತಾರು ಜನರು ನವ ತರುಣ ಕಾರ್ಯಕರ್ತರು ಅವರ ಜೊತೆ ಬಂದು ಸೇರಿಕೊಳ್ಳುತ್ತಿದ್ದರು. ಇನ್ನೊಂದು ಕಡೆಯಲ್ಲಿ, ಕಾಗೋಡು ರೈತ ಹೋರಾಟದಲ್ಲಿ ಪಾಲ್ಗೊಂಡ ರೈತ ಸಮುದಾಯವೇ ಈ ಚುನಾವಣೆಯಲ್ಲಿ ಗೌಡರ ಪರ ಟೊಂಕ ಕಟ್ಟಿ ನಿಂತಿತ್ತು.
ಗರ್ತಿಕೆರೆ ರಾಘವೇಂದ್ರನೆಂಬ ಹುಡುಗ ಗೋಪಾಲಗೌಡರ ಪಟ್ಟ ಶಿಷ್ಯನಾಗಿದ್ದು, ಲಾವಣಿಗಳನ್ನು ಕಟ್ಟಿ ಗೌಡರ ಪರವಾಗಿ ಪ್ರಚಾರ ಮಾಡುತ್ತಿದ್ದ. ಸಂಗೀತಗಾರರೂ, ಚಿತ್ರ ಕಲಾವಿದರೂ ಆಗಿದ್ದ ದೊಂಬರ ಹಾದಿಗಲ್ ರಾಮಪ್ಪಬಿಳಿ ಕಾಗದದಲ್ಲಿ ‘ಓಟು ಕೊಡಿ- ಗೋಪಾಲಗೌಡ’ ಎಂದು ಬರೆದು, ಅದರ ಪಕ್ಕದಲ್ಲಿ ಆಲದ ಮರದ ಚಿತ್ರ ಬರೆಯುತ್ತಿದ್ದರು. ಆ ಕಾಲದಲ್ಲಿ ರಾಮಪ್ಪತಮ್ಮ ಜೀವನ ನಿರ್ವಹಣೆಗಾಗಿ ನಾಟಕದ ಸೀನ್ಸ್ ಬರೆಯುತ್ತಿದ್ದರು; ಸೈಕಲ್ ಶಾಪ್ ನಡೆಸುತ್ತಿದ್ದರು. ರಾಮಪ್ಪಬರೆದ ಚಿತ್ರಗಳ ಮೂಲಕವೂ ಸಮಾಜವಾದಿ ಪಕ್ಷದ ಆಲದಮರದ ಗುರುತು ನಿಧಾನವಾಗಿ ಆ ಕ್ಷೇತ್ರದ ಜನರ ಮನಸ್ಸಿನಲ್ಲಿ ಬೇರುಬಿಡತೊಡಗಿತು. ಆ ಕಾಲವನ್ನು ನೆನೆಯುತ್ತಾ ಹಾದಿಗಲ್ ರಾಮಪ್ಪಹೇಳುತ್ತಾರೆ: ‘‘ಒಂದು ದಿನ ಗೋಪಾಲ ಗೌಡರು ನಾನು ಚಿತ್ರ ಬರೆಯುವುದನ್ನೇ ನೋಡುತ್ತಾ ಕುಳಿತಿದ್ದರು. ಹಗಲೂ ರಾತ್ರಿ ಇಷ್ಟೊಂದು ವಾಲ್ ಪೋಸ್ಟರ್ಸ್‌ ಪುಕ್ಕಟೆ ಬರಿತೀಯಲ್ಲ, ಜೀವನ ಹೆಂಗೆ ಮಾಡ್ತೀಯೋ ರಾಮಣ್ಣಾ?’’ ಅಂದರು. ‘‘ರಾಮಣ್ಣಾ, ನೀವೆಲ್ಲ ಸುಖೀಜೀವಿಗಳಾಗಿ ಬಾಳೋದು ಯಾವಾಗಲೋ’’ ಎಂದು ನಿಟ್ಟುಸಿರುಬಿಡುತ್ತಿದ್ದರು. ಆಗ ನಾನು, ‘‘ಮೊದಲು ನೀವು ಗೆದ್ದು ಬನ್ನಿ. ಆಮೇಲೆ ಆ ಬಗ್ಗೆ ಯೋಚಿಸೋಣ ’’ಎನ್ನುತ್ತಿದ್ದೆ.
 ಕೊನೆಗೂ ಗೋಪಾಲಗೌಡರ ಮೊದಲ ಚುನಾವಣೆ ಮುಗಿದು ರಾತ್ರಿ ಹತ್ತು ಗಂಟೆಗೆ ಫಲಿತಾಂಶ ಪ್ರಕಟವಾಯಿತು. ಗೌಡರು 1952ರ ಚುನಾವಣೆಯಲ್ಲಿ ಬದರಿನಾರಾಯಣರನ್ನು ಪರಾಭವಗೊಳಿಸಿ ಬಹುಮತದಿಂದ ಚುನಾಯಿತರಾಗಿದ್ದರು. ಗೌಡರ ಪ್ರಬಲ ಬೆಂಬಲಿಗರಾಗಿದ್ದ ರಘುನಾಥರಾವ್ ಚುನಾವಣೆ ಫಲಿತಾಂಶ ಬಂದ ಆ ರಾತ್ರಿಯನ್ನು ನೆನೆಸಿಕೊಳ್ಳುತ್ತಾರೆ: ‘‘ರಾತ್ರಿ ಸುಮಾರು ಒಂದು ಗಂಟೆ. ಮನೆಯ ಮುಂದೆ ಕಾರೊಂದರ ಹಾರನ್. ಎದ್ದು ನೋಡಿದರೆ ಗೌಡರು. ನಾನು ‘ಏನ್ರೀ ಈ ಸರಿ ರಾತ್ರಿ’ ಎಂದರೆ, ಆಗ ಅವರು ‘ಸ್ವಾಮಿ, ನಿಮ್ಮೆಲ್ಲರ ಸಹಕಾರದಿಂದ ಗೆದ್ದೆ. ಅದಕ್ಕೆ ಕೃತಜ್ಞತೆ ಸಲ್ಲಿಸಿ ಹೋಗುವುದು ನನ್ನ ಕರ್ತವ್ಯ’ ಎಂದು ತಿಳಿಸಿದರು.’’ ಮತದಾರರು ಕೊಟ್ಟ ವೋಟಿನ ಋಣ ಅನ್ನೋದು ತಾಯಿಯ ಋಣಕ್ಕಿಂತ ದೊಡ್ಡದೆಂದು ಗೋಪಾಲಗೌಡರು ತಮ್ಮ ಜೊತೆಯಲ್ಲಿದ್ದವರಿಗೆಲ್ಲ ಹೇಳುತ್ತಿದ್ದರು. 1952ರಲ್ಲಿ ಗೌಡರ ಚುನಾವಣಾ ವೆಚ್ಚ ಐದು ಸಾವಿರ ಮೀರಿರಲಿಲ್ಲ ಎಂದು ಗೌಡರ ಎಲ್ಲ ಚುನಾವಣೆಗಳ ಎಲೆಕ್ಷನ್ ಏಜೆಂಟ್ ಆಗಿದ್ದ ಶಾಮ ಐತಾಳ ಬರೆಯುತ್ತಾರೆ.
ಈ ಚುನಾವಣೆಯಲ್ಲಿ ಗೋಪಾಲಗೌಡರು ವಿಧಾನಸಭೆಗೆ ಆರಿಸಿ ಬಂದ ವಿದ್ಯಮಾನದಲ್ಲಿ ಹಲವು ಸಂದೇಶಗಳಿದ್ದವು. ಒಂದು: ಭಾರೀ ಜಮೀನ್ದಾರರೊಬ್ಬರನ್ನು ಗೇಣಿದಾರನೊಬ್ಬನ ತರುಣ ಮಗ ಸೋಲಿಸಿದ್ದ. ಎರಡು, ಈ ಹೊಸನಗರ-ಸಾಗರ ವಿಧಾನಸಭಾ ಕ್ಷೇತ್ರ ತನ್ನದೇ ಆದ ಸರಳ ರೀತಿಯಲ್ಲಾದರೂ ವರ್ಗಸಮರದ ಹಾದಿಯೊಂದನ್ನು ತೋರಿಸಿತ್ತು. ‘‘ಗೋಪಾಲಗೌಡರು ವಿಧಾನಸಭೆಗೆ ಆರಿಸಿ ಹೋಗಿದ್ದರಿಂದಾಗಿ ಬಡವರಿಗೆ, ಭೂಹೀನರಿಗೆ, ನಿರ್ಗತಿಕರಿಗೆ, ಗೇಣಿದಾರರಿಗೆ ದೊಡ್ಡ ಚೈತನ್ಯ ಬಂದಂತಾಯಿತು. ಉಳುವವನೇ ನೆಲದೊಡೆಯನಾಗಬೇಕು. ಗೇಣಿ ಪದ್ಧತಿ ರದ್ದಾಗಬೇಕು ಎನ್ನುವ ಕೂಗು ಶಾಸನಸಭೆಯಲ್ಲಿ ಮೊಳಗಿತು’’ ಎಂದು ಎಚ್. ಡಿ. ಸುರೇಂದ್ರ ಬರೆಯುತ್ತಾರೆ. ಮೂರು, ಗೌಡರ ಜಾತ್ಯತೀತ ವ್ಯಕ್ತಿತ್ವಕ್ಕೆ ಎಲ್ಲ ಜಾತಿಯ ಜನರೂ ಮಾರು ಹೋಗಿದ್ದರು; ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಹಾಗೂ ಚುನಾವಣೆಗಳು ಜಾತ್ಯತೀತ ಸ್ಪರ್ಶ ಪಡೆಯತೊಡಗಿದ್ದವು.
ಹೀಗೆ 1952ರಲ್ಲಿ ಮೈಸೂರು ವಿಧಾನಸಭೆಗೆ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದ ಏಕಮಾತ್ರ ಅಭ್ಯರ್ಥಿಯಾಗಿದ್ದ ಗೋಪಾಲಗೌಡರು ಬೆಂಗಳೂರಿನಲ್ಲಿ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಸಭಾಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿದರು. ಅವರೇ ಹೇಳುವಂತೆ, ಆ ಸ್ಪರ್ಧೆ ಕೇವಲ ಸಾಂಕೇತಿಕವಾಗಿತ್ತು. ಆನಂತರ ತಮ್ಮ ಎದುರು ನಿಂತು ಗೆದ್ದು ಸಭಾಧ್ಯಕ್ಷರಾದ ಎಚ್. ಸಿದ್ದಯ್ಯನವರನ್ನು ಅಭಿನಂದಿಸುತ್ತಾ, ವಿರೋಧ ಪಕ್ಷದ ಅಭಿಪ್ರಾಯಕ್ಕೆ ನೀವು ಹೆಚ್ಚು ಮನ್ನಣೆ ಕೊಡಬೇಕು. ನನ್ನ ಸ್ಪರ್ಧೆ ಸಾಂಕೇತಿಕ ಹಾಗೂ ತಾತ್ವಿಕ ಎಂದು ಗೋಪಾಲಗೌಡರು ಹೇಳಿದರು. ಈ ಸ್ಪೀಕರ್ ಚುನಾವಣೆಯಲ್ಲಿ ಗೋಪಾಲಗೌಡರಿಗೆ 18 ವೋಟುಗಳು ಬಿದ್ದವು ಎಂಬುದು ಕೂಡ ಗಮನಾರ್ಹವಾಗಿದೆ.
ಶಾಸನ ಸಭೆಯ ಮೊದಲ ಅಧಿವೇಶನ ಮುಗಿಸಿ ಬೆಂಗಳೂರಿನಿಂದ ಸಾಗರಕ್ಕೆ ಬಂದ ಗೋಪಾಲಗೌಡರು ತಮ್ಮೆಡನೆ ಚುನಾವಣೆಯಲ್ಲಿ ದುಡಿದಿದ್ದ ಚಂದ್ರಶೇಖರ್ ಅವರನ್ನು ‘‘ಚುನಾವಣೆಯ ಖರ್ಚು ಎಷ್ಟಾಗಿದೆ?’’ ಎಂದು ಕೇಳಿದರು. ಈ ಕುರಿತು ಚಂದ್ರಶೇಖರ್ ಬರೆಯುತ್ತಾರೆ: ‘‘ನಾನು ಸುಮಾರು ಐದು ಸಾವಿರ ಆಗಿದೆಯೆಂದು ತಿಳಿಸಿದೆ. ಗೌಡರು ಈ ಬಗ್ಗೆ ಏನು ಮಾಡುವುದೆಂದು ನನ್ನನ್ನೇ ಕೇಳಿದರು. ಸಾಗರದ ಶ್ರೀಗಣಪತಿ ಕೋ ಆಪರೇಟಿವ್ ಸೊಸೈಟಿಗೆ ಗೋಪಾಲಗೌಡರನ್ನು ಸದಸ್ಯರನ್ನಾಗಿ ಮಾಡಿ, ನನ್ನ ಅಸಿಸ್ಟೆಂಟ್ ಮೃತ್ಯುಂಜಯನನ್ನು ಜಾಮೀನು ಕೊಟ್ಟು, ಬ್ಯಾಂಕಿನಲ್ಲಿ ಸಿಗುವ ಎರಡು ಸಾವಿರ ರೂಪಾಯಿ ಸಾಲ ಪಡೆದು, ತುರ್ತಾಗಿ ಕೊಡಬೇಕಾದವರಿಗೆ ಕೊಟ್ಟೆ. ನಂತರದಲ್ಲಿ ಗೌಡರು ಅಧಿವೇಶನದಲ್ಲಿ ಬರುತ್ತಿದ್ದ ದಿನಭತ್ತೆ ಹಾಗೂ ಪ್ರಯಾಣ ಭತ್ತೆಯಲ್ಲಿ ಉಳಿಸಿದ್ದ ಹಣದಿಂದ ಸುಮಾರು ಎರಡು ಸಾವಿರ ರೂಪಾಯಿ ಕೊಟ್ಟು ಚುನಾವಣೆಯ ಸಾಲ ತೀರಿಸಲು ಹೇಳಿದರು. ಮದ್ರಾಸಿನಲ್ಲಿದ್ದ ಹಿಂದೂ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಜಿ.ಕೆ. ರೆಡ್ಡಿಯವರಿಗೂ ನಾನು ಪತ್ರ ಬರೆದೆ. ಅವರು ಕೂಡ ಹಣ ಕಳಿಸಿದರು. ಒಟ್ಟಿನಲ್ಲಿ ಚುನಾವಣಾ ಸಾಲ ತೀರಿದಂತಾಯಿತು. ಹೀಗೆ ತಮ್ಮಿಡನೆ ದುಡಿದ ಚಂದ್ರಶೇಖರ್ ಅವರನ್ನು ಗೌಡರು ಯಾರಿಗಾದರೂ ಪರಿಚಯ ಮಾಡಿಕೊಡುವಾಗ, ‘ನಾನು ಉತ್ಸವ ಮೂರ್ತಿ, ಇವರು ಮೂಲ ಮೂರ್ತಿ’ ಎಂದು ಪರಿಚಯಿಸುತ್ತಿದ್ದರು.’’
ತಮ್ಮ ಶಾಸಕತ್ವದ ಮೊದಲ ಅವಧಿಯಲ್ಲಿ ಗೋಪಾಲಗೌಡರು ಶಾಸನಸಭೆಯಲ್ಲಿ ಸೋಷಲಿಸ್ಟ್ ಪಕ್ಷದ ಒಂಟಿ ಸದಸ್ಯರಾಗಿ ತುಂಬ ನಿಷ್ಠೆ, ಪ್ರಾಮಾಣಿಕತೆ, ನಿರ್ಭೀತಿಯಿಂದ ಪ್ರಭಾವಪೂರ್ಣವಾದ ಕೆಲಸ ಮಾಡಿದರು. ಆದರ್ಶ ಶಾಸಕರಾಗಿ ನಾಡಿನ ಕಲ್ಯಾಣದ ಕೆಲಸದಲ್ಲಿ ಚಿರಸ್ಮರಣೀಯವಾದ ಪಾತ್ರ ನಿರ್ವಹಿಸಿದರು. ಗೋಪಾಲಗೌಡರು ತಮ್ಮ ಶಾಸಕತ್ವದ ಮೊದಲ ಅವಧಿಯಲ್ಲೇ ಶಾಸನಸಭೆಯಲ್ಲಿ ಅತ್ಯಂತ ಬದ್ಧತೆಯಿಂದ ಭಾಗವಹಿಸಿ ಮಾತಾಡುತ್ತಿದ್ದ ರೀತಿ ಕುರಿತು ಆ ಕಾಲದ ಮತ್ತೊಬ್ಬ ವಿಶಿಷ್ಟ ಶಾಸಕ ಕೆ. ಪಟ್ಟಾಭಿರಾಮನ್ ಬರೆಯುತ್ತಾರೆ: ‘‘ಅವರು...ಆಡಳಿತದ ಪ್ರತಿಯೊಂದು ನಡಾವಳಿಯನ್ನೂ ಶೋಧಿಸಿ, ಉತ್ತಮವಾದುದು ಏನೆಂಬುದನ್ನು ತಿಳಿಯಹೇಳುತ್ತಿದ್ದರು. ಅವರ ಭಾಷೆ ಶುದ್ಧ. ಶೈಲಿ ಖಚಿತ. ನಿಲುವು ದಿಟ್ಟ. ಅವರ ನುಡಿಗಳು ಮೈಸೂರಿಗೆ ಅನ್ವಯವಾಗುವಂತಿದ್ದರೂ, ಇಡೀ ಭಾರತದ ಭೂಮಿಕೆ ಅವರ ಮನಸ್ಸನ್ನು ತುಂಬಿರುತ್ತಿತ್ತು. ಗೋಪಾಲಗೌಡರು ವಿಧಾನಸಭೆಯಲ್ಲಿ ಎದ್ದು ನಿಂತರೆ ಎಲ್ಲರೂ ಕಿವಿ ಕೊಟ್ಟು ಅವರು ಏನು ಹೇಳುವರೋ ಎಂದು ಕುತೂಹಲದಿಂದ ಕೇಳುತ್ತಿದ್ದರು. ಮಂತ್ರಿಗಳಂತೂ ಗೌಡರು ಯಾವ ವಿಚಾರವನ್ನು ಬಯಲಿಗೆಳೆಯುತ್ತಾರೋ ಎಂದು ಹೆದರುತ್ತಿದ್ದರು.
ತಮ್ಮ ಮೊದಲ ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಗೋಪಾಲಗೌಡರು ಕರ್ನಾಟಕದ ಪ್ರಬಲ ನಾಯಕನಾಗಿ ರೂಪುಗೊಂಡಿದ್ದರು. ಶಾಸನಸಭೆಯ ತಮ್ಮ ಐದು ವರ್ಷಗಳ ಅವಧಿಯಲ್ಲಿ ಉಳುವವನೇ ಹೊಲದೊಡೆಯನಾಗಲು ಭೂ ಸುಧಾರಣೆ, ರಾಜಧನ ರದ್ದತಿ, ಇನಾಂ ರದ್ದತಿ ಮುಂತಾದ ಕ್ರಾಂತಿಕಾರಕ ವಿಷಯಗಳ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ಮಾತಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News