ವರಿಷ್ಠರ ತೀರ್ಮಾನಕ್ಕೆ ಸೆಡ್ಡು ಹೊಡೆದ ನಟಿ ಸುಮಲತಾ: ಮುಂದುವರೆದ ಜಿಲ್ಲಾ ಪ್ರವಾಸ

Update: 2019-03-06 18:56 GMT

ಮಂಡ್ಯ, ಮಾ.6: ಮೈತ್ರಿ ಸೂತ್ರದ ಪ್ರಕಾರ ಮಂಡ್ಯ ಕ್ಷೇತ್ರ ಜೆಡಿಎಸ್‍ಗೆ ಪಾಲಾಗಲಿದೆ ಎಂಬ ಘೊಷಣೆಗೆ ಸೆಡ್ಡು ಹೊಡೆದಂತೆ ಲೋಕಸಭಾ ಚುನಾವಣೆಯ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಸುಮಲತಾ ಅಂಬರೀಷ್, ತನ್ನ ಜಿಲ್ಲಾ ಪ್ರವಾಸವನ್ನು ಮುಂದುವರಿಸಿದ್ದಾರೆ. ಯಾರು ಏನೇ ಹೇಳಲಿ, ನಾನು ನಿಮ್ಮ ಮಗಳು, ಮಂಡ್ಯದ ಸೊಸೆ. ನಿಮ್ಮಗಳ ನಿರ್ಧಾರವೇ ನನ್ನ ನಿರ್ಧಾರವೆಂದು ಸುಮಲತಾ ಪ್ರತಿಯೊಂದು ಗ್ರಾಮದಲ್ಲೂ ಚುನಾವಣಾ ಪ್ರಚಾರದ ರೀತಿಯಲ್ಲೇ ಭಾಷಣ ಮಾಡುತ್ತಿದ್ದಾರೆ. 

ಸುಮಲತಾ ಅವರ ಅಬ್ಬರದ ಪ್ರಚಾರ ಜೋರಾಗುತ್ತಿದ್ದು, ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯೊಂದಿಗೆ ಈಗಾಗಲೇ ಪಾಂಡವಪರ, ಕೆ.ಆರ್.ಪೇಟೆ, ನಾಗಮಂಗಲ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿ, ಬುಧವಾರ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಪ್ರವಾಸ ಮಾಡಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬೇವಿನಹಳ್ಳಿ, ಕೊತ್ತತ್ತಿ, ಕ್ಯಾತಂಗೆರೆ, ಮೊತ್ತಹಳ್ಳಿ, ಪೀಹಳ್ಳಿ, ಕೊಡಿಯಾಲ, ಅರಕೆರೆ, ದೊಡ್ಡಪಾಳ್ಯ, ಶ್ರೀರಂಗಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಜನತೆಯ ಬೆಂಬಲ ಕೋರಿದರು. ಬೇವಿನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಹಿಳೆಯರು ಬೆಲ್ಲದ ಆರತಿ ಮೂಲಕ ಸ್ವಾಗತಿಸಿದರೆ, ಮತ್ತೊಂದೆಡೆ ತಮಟೆ, ಡೋಲು, ನಗಾರಿ ಮೇಳಕ್ಕೆ ಅಭಿಮಾನಿಗಳು ಹೆಜ್ಜೆಹಾಕಿ ಬೆಂಬಲಿಸಿದರು. ಹಲವು ಕಾಂಗ್ರೆಸ್ ಮುಖಂಡರೂ ಪಾಲ್ಗೊಂಡಿದ್ದರು.

ಇನ್ನೂ ಅಧಿಕೃತ ಸಂದೇಶ ಬಂದಿಲ್ಲ:
ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅಂಬರೀಷ್, ಕಾಂಗ್ರೆಸ್ ಟಿಕೆಟ್ ಕೊಡುವುದಿಲ್ಲ ಎಂದು ನನಗೆ ಇನ್ನೂ ಅಧಿಕೃತ ಸಂದೇಶ ಬಂದಿಲ್ಲ. ನನಗೆ ಬರುವವರೆಗೂ ಕಾಯುತ್ತೇನೆ. ನಂತರ ಮೂರು ದಿನಗಳಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದರು. 

ಜನರ ಪ್ರೀತಿ, ವಿಶ್ವಾಸ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂಬರೀಷ್ ಅವರ 25 ವರ್ಷಗಳ ರಾಜಕೀಯ ಜೀವನದಲ್ಲಿ ಅವರನ್ನು ಸಾಕಿ ಬೆಳೆಸಿದ ಮಂಡ್ಯ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಜನತೆಗೆ ನನ್ನ ಮೇಲೆ ವಿಶ್ವಾಸವಿದೆ ಎಂದವರು ಹೇಳಿದರು.

ಮೈತ್ರಿ ಪ್ರಕಾರ ಕಾಂಗ್ರೆಸ್‍ಗೆ ಟಿಕೆಟ್ ತಪ್ಪಿದರೆ ಜಿಲ್ಲೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರಿಗೆ ದೊಡ್ಡ ನಿರಾಸೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಾನು ಇಡುವ ಹೆಜ್ಜೆಯಿಂದ ಯಾರಿಗೆ ಒಳಿತಾಗುತ್ತದೆ ಎಂಬುದನ್ನು ಯೋಚಿಸಬೇಕು ಎಂದು ಅವರು ನುಡಿದರು.

ಮೈತ್ರಿ ಅಭ್ಯರ್ಥಿ ಬೆಂಬಲಿಸಲು ಕಾಂಗ್ರೆಸ್ ಮುಂಖಡರ ಕೈಕಟ್ಟಿಹಾಕುವ ಕೆಲಸ ವರಿಷ್ಠರು ಮಾಡಿದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ಜನ ನನ್ನ ಪರವಾಗಿದ್ದಾರೆಂಬ ಭರವಸೆ ಮೂಡಿದೆ ಎಂದು ಖಡಕ್ಕಾಗಿ ಹೇಳಿದರು.

ತಮ್ಮ ಪಕ್ಷೇತರ ಸ್ಪರ್ಧೆ ಬಗ್ಗೆ ನೇರವಾಗಿ ಹೇಳದಿದ್ದರೂ, ಇನ್ನು ಮೂರು ದಿನವಷ್ಟೇ ಕಾಯಿರಿ ಎನ್ನುವ ಮೂಲಕ ಸುಮಲತಾ ಪರೋಕ್ಷವಾಗಿ ಸ್ಪರ್ಧೆಯ ಸುಳಿವು ನೀಡಿದರು. ಜಿಲ್ಲೆಯ ಜನರ ಜತೆಗೆ ಸ್ಯಾಂಡಲ್‍ವುಡ್ ಯಾವುದೇ ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಅವರು ನನ್ನ ಪರ ಇದ್ದಾರೆ. ಧೈರ್ಯವಾಗಿ ಇರಿ ಅನ್ನೋ ಮೂಲಕ ಸ್ಯಾಂಡಲ್‍ವುಡ್ ಸ್ಟಾರ್ಸ್ ತನ್ನ ಪರ ಇದ್ದಾರೆ ಎಂದೂ ಭರವಸೆ ವ್ಯಕ್ತಪಡಿಸಿದರು.

ರಮೇಶ್ ಬಂಡಿಸಿದ್ದೇಗೌಡರ ಮನೆಗೆ ಭೇಟಿ:
ಅರಕೆರೆಯಲ್ಲಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಮನೆಗೆ ಸುಮಲತಾ, ಭೇಟಿ ನೀಡಿ ಬೆಂಬಲ ಕೋರಿದರು. ಸುಮಲತಾ ಅವರನ್ನು ಸಿಂಗಾರಗೊಳಿಸಿದ್ದ ಎತ್ತಿನ ಗಾಡಿಯಲ್ಲಿ ಬೃಹತ್ ಮೆರವಣಿಗೆ ಮಾಡಿ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.

ಈ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಅಂಬಿನೇ ನನ್ನ ಪಕ್ಷ. ಮಂಡ್ಯದ ಜನತೆ ನನಗೆ ಆಶೀರ್ವಾದ ಮಾಡಬೇಕು. ನಿಮಗೆ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಸುಮಲತಾರಿಗೆ ಬೆಂಬಲ ನೀಡುವ ಸಂಬಂಧ ಪ್ರತಿಕ್ರಿಯೆ ನೀಡಿದ ರಮೇಶ್ ಬಂಡಿಸಿದ್ದೇಗೌಡ, ರಾಜ್ಯದ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ನಾವು ಹೇಳಿಕೊಳ್ಳಲಾರದ ಪರಿಸ್ಥಿತಿಯಲ್ಲಿ ಇದ್ದೇವೆ. ಜನತೆ ಬೆಂಬಲ ನೀಡುತ್ತಾರೆ ಎಂದಷ್ಟೇ ಹೇಳಿದರು.

ನೊಟೀಸ್‍ಗೆ ಹೆದರುವುದಿಲ್ಲ:
ಸುಮಲತಾ ಜತೆ ಪ್ರವಾಸದ ಮುಂಚೂಣಿಯಲ್ಲಿದ್ದ ಕೆಪಿಸಿಸಿ ಸದಸ್ಯ ಇಚಿಡುವಾಳು ಸಚ್ಚಿದಾನಂದ ಪ್ರತಿಕ್ರಿಯಿಸಿ, ನಾವು ಪಕ್ಷದ ಯಾವುದೇ ನೊಟೀಸ್‍ಗೂ ಹೆದರುವುದಿಲ್ಲ, ಸಸ್ಪೆಂಡ್ ಗೂ ಬಗ್ಗುವುದಿಲ್ಲ. ನಮಗೆ ಅಂಬರೀಷ್ ಮುಖ್ಯ, ಅವರ ಅಭಿಮಾನಿಯಾಗಿ ಸುಮಲತಾ ಜೊತೆ ಇರುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News