ನರೋಡ ಪಾಟಿಯಾ ಘಟನೆಯ ಆರೋಪಿ ಬಾಬು ಬಜರಂಗಿಗೆ ಜಾಮೀನು

Update: 2019-03-07 16:56 GMT

ಹೊಸದಿಲ್ಲಿ, ಮಾ.7: 2002ರ ನರೋಡ ಪಾಟಿಯ ಹಿಂಸಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಬಜರಂಗದಳದ ಮುಖಂಡ ಬಾಬು ಬಜರಂಗಿಗೆ ಸುಪ್ರೀಂಕೋರ್ಟ್ ವೈದ್ಯಕೀಯ ನೆಲೆಯಲ್ಲಿ ಜಾಮೀನು ಮಂಜೂರುಗೊಳಿಸಿದೆ. 2002ರ ಗುಜರಾತ್ ಹಿಂಸಾಚಾರದ ಸಂದರ್ಭ ನರೋಡ ಪಾಟಿಯದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಗುಂಪಿನ ದಾಳಿಯಿಂದ 97 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಜರಂಗದಳ ಮುಖಂಡ ಬಾಬೂಬಾಯ್ ಪಟೇಲ್ ಅಲಿಯಾಸ್ ಬಾಬು ಬಜರಂಗಿಗೆ 21 ವರ್ಷದ ಜೈಲುಶಿಕ್ಷೆ ವಿಧಿಸಿದ್ದು, 2012ರಿಂದ ಬಾಬು ಬಜರಂಗಿ ಸಾಬರ್ಮತಿ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಬಾಬು ಬಜರಂಗಿ ಇದೀಗ ಸಂಪೂರ್ಣ ದೃಷ್ಟಿ ಶಕ್ತಿ ಹಾಗೂ ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾನೆ . ಆದ್ದರಿಂದ ವೈದ್ಯಕೀಯ ನೆಲೆಯಲ್ಲಿ ಜಾಮೀನು ಮಂಜೂರುಗೊಳಿಸುವಂತೆ ಆತನ ಪರ ವಕೀಲರು ಜನವರಿ 31ರಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಈತ ಶೇ.100ರಷ್ಟು ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿರುವುದಾಗಿ ವೈದ್ಯಕೀಯ ದಾಖಲೆಗಳಲ್ಲಿ ತಿಳಿದುಬಂದಿದೆ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ಮಂಜೂರುಗೊಳಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News