'ಪಲ್ಸ್ ಪೋಲಿಯೊ' ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ದಾವಣಗೆರೆ ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್

Update: 2019-03-07 12:09 GMT

ದಾವಣಗೆರೆ,ಮಾ.7: ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಶೇ.100 ರ ರಷ್ಟು ಯಶಸ್ವಿಗೊಳಿಸಬಹುದು ಎಂದು ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಹೇಳಿದರು.

ಮಾ.10 ರಿಂದ 13 ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ನಡೆಯಲಿರುವ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವ ಕುರಿತು ಇಂದು ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು, ಜಿ.ಪಂ, ತಾ.ಪಂ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ಕೈ ಜೋಡಿಸಿ ಕಾರ್ಯ ನಿರ್ವಹಿಸಿದ್ದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗುತ್ತದೆ. ಪೋಲಿಯೊದಿಂದ ಯಾವುದೇ ವ್ಯಕ್ತಿ ಅಂಗವೈಕಲ್ಯದಿಂದ ಬಳಲಬಾರದು. ಆದ್ದರಿಂದ ಪಲ್ಸ್ ಪೋಲಿಯೊ ಅನುಕೂಲಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿ ಅವರನ್ನು ಜಾಗೃತರನ್ನಾಗಿ ಮಾಡಬೇಕು ಎಂದರು.

ವೈದ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಜವಾಬ್ದಾರಿ ನೀಡಿ, ಎನ್‍ಜಿಓ, ಸ್ಥಳೀಯ ಸ್ವಯಂ ಸೇವಾ ಸಂಘಗಳ ಸಹಕಾರ ಪಡೆದು ಬೂತ್ ಮಟ್ಟದಲ್ಲಿಯೇ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. 0 ರಿಂದ 5 ವರ್ಷದೊಳಗಿನ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಮುಜಾಗ್ರತೆ ವಹಿಸಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಆರ್‍ಸಿಹೆಚ್‍ಓ ಡಾ.ಶಿವಕುಮಾರ್ ಮಾತನಾಡಿ, ಪೋಲಿಯೊ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯತೆ ಉಂಟು ಮಾಡಿ ದೀರ್ಘಕಾಲ ಭೀಕರ ಪರಿಣಾಮ ಬೀರುವ ಒಂದು ಮಾರಕ ರೋಗವಾಗಿದೆ. ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿವಿಧ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳ ಸಹಕಾರೊಂದಿಗೆ 1995 ರಿಂದ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳಲ್ಲಿ ಅನುಷ್ಟಾನಗೊಳಿಸಿದೆ.
ನಮ್ಮ ರಾಷ್ಟ್ರದಲ್ಲಿ 2011 ರಲ್ಲಿ ಕಡೆಯ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ 2007 ರಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಕಡೆಯ ಪ್ರಕರಣ ಕಂಡುಬಂದಿತ್ತು. 2014 ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರವೆಂದು ಭಾರತವನ್ನು ಘೋಷಿಸಿದ್ದರೂ ನೆರೆಯ ರಾಷ್ಟ್ರಗಳಾದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕೆಲವು ಪೋಲಿಯೋ ಪ್ರಕರಣ ಕಂಡು ಬಂದ ಕಾರಣ, ಈ ರಾಷ್ಟ್ರಗಳಲ್ಲಿಯೂ ಸಂಪೂರ್ಣ ನಿರ್ಮೂಲನೆ ಆಗುವವರೆಗೆ ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ನಮ್ಮ ದೇಶದಲ್ಲಿ ನಡೆಸಲಾಗುವುದು ಎಂದರು.

ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಈ ಬಾರಿ ಭಾರತ ಸರ್ಕಾರದ ನಿರ್ದೇಶನದಂತೆ ಒಂದು ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ನಡೆಸಲು ಸೂಚಿಸಿರುವುದ ಆಶಾದಾಯಕ ಬೆಳವಣಿಗೆಯಾಗಿದೆ. ಮಾ.10 ರಿಂದ 13 ರವರೆಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಉಪಕೇಂದ್ರ, ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜುಗಳಲ್ಲಿ ಕೇಂದ್ರ ತೆರೆಯಲಾಗುವುದು. 0 ರಿಂದ 5 ವರ್ಷದ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಅರ್ಹ ಮಕ್ಕಳ ಸಂಖ್ಯೆ 1,95,964 ಇದ್ದು ಒಟ್ಟು 1,146 ಲಸಿಕಾ ಕೇಂದ್ರ, 2,486 ಲಸಿಕಾ ಕಾರ್ಯಕರ್ತರು, 244 ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತ್ರಿಪುಲಾಂಭ ಮಾತನಾಡಿ, ಮೊದಲನೇ ಸುತ್ತಿನಲ್ಲಿ ಇದೇ ಭಾನುವಾರ ನಡೆಯುವ ಬೂತ್ ಮಟ್ಟದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ 0 ರಿಂದ 5 ವರ್ಷದೊಳಗಿನ ಮಕ್ಕಳು ಬೂತ್‍ಗೆ ಬಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಶೇ. 99 ಗುರಿ ಸಾಧಿಸುವೆಡೆ ಹೆಚ್ಚಿನ ಗಮನ ಮತ್ತು ಶ್ರಮ ವಹಿಸಬೇಕು. ಬೂತ್ ಮಟ್ಟದಲ್ಲಿಯೇ ಯಶಸ್ವಿಯಾಗಲು ಹೆಚ್ಚಿನ ಪ್ರಚಾರದ ಅಗತ್ಯತೆ ಇದೆ. ಈಗಾಗಲೇ ಇದಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಯಾವೊಂದು ಮಗುವೂ ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿನ ಜಿಲ್ಲಾ ಸಂಯೋಜಕ ಮೋಹನ್, ಮೊ ಸಂ: 7259003338 ಇವರನ್ನು ಸಂಪರ್ಕಿಸಬಹುದೆಂದರು.

ಗೋಷ್ಠಿಯಲ್ಲಿ ಜಿ.ಪಂ ಸಿಇಓ ಹೆಚ್.ಬಸವರಾಜೇಂದ್ರ, ಜಿ ಪಂ ಮುಖ್ಯ ಲೆಕ್ಕಾಧಿಕಾರಿ ಟಿ.ಆಂಜನೇಯ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News