ಮಂಗನ ಕಾಯಿಲೆ ಭೀತಿ: ತಿಂಗಳಾದರೂ ಪೂರೈಕೆಯಾಗದ ಲಸಿಕೆ

Update: 2019-03-07 18:01 GMT

ಕೊಪ್ಪ, ಮಾ.7: ತಾಲೂಕಿನ ಹೇರೂರು, ಬಸ್ರೀಕಟ್ಟೆ, ಕೆಸವೆ, ಸಿದ್ಧರಮಠ ಭಾಗದಲ್ಲಿ ತಿಂಗಳ ಹಿಂದೆ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದ್ದು, ಈವರೆಗೂ ಕೆಡಿಎಫ್ ಲಸಿಕೆ ಪೂರೈಕೆಯಾಗಿಲ್ಲ ಎಂದು ತಾಪಂ ಕೆಡಿಪಿ ಸಭೆಯಲ್ಲಿ ಸಭಾಧ್ಯಕ್ಷೆ ಜಯಂತಿ ನಾಗರಾಜ್ ಸೇರಿದಂತೆ ಎಲ್ಲಾ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎನ್.ಕೆ. ಉದಯ್, ತಿಂಗಳ ಹಿಂದೆ ಹೇರೂರಿನ ವ್ಯಕ್ತಿಯೊಬ್ಬರಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಆ ಭಾಗದ 200 ಮಂದಿಗೆ ಮಾತ್ರ ಈವರೆಗೆ ಲಸಿಕೆ ನೀಡಲಾಗಿದೆ. ಅಲ್ಲಿ ಜನಸಂಖ್ಯೆ ಜಾಸ್ತಿ ಇದ್ದರೂ ಉಳಿದವರಿಗೆ ಇನ್ನೂ ಲಸಿಕೆ ನೀಡಿಲ್ಲ. ಕೂಡಲೇ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಉದಯ್ ಮಾತಿಗೆ ಎಲ್ಲಾ ಸದಸ್ಯರೂ ಧ್ವನಿಗೂಡಿಸಿ ಸಾಗರ ತಾಲೂಕಿನಲ್ಲಿ ಮಂಗನಕಾಯಿಲೆಯಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಸಾಗರದ ಪರಿಸ್ಥಿತಿ ಉದ್ಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಅಧಿಕಾರಿ ವಿ.ಡಿ. ಲಿಸ್ಸಿ ಆರೋಗ್ಯ ಇಲಾಖೆಯಿಂದ ಶಿವಮೊಗ್ಗದ ಕೆಎಚ್‌ಎಸ್‌ಡಿಆರ್‌ಎಸ್ ಕೇಂದ್ರಕ್ಕೆ ಇಲಾಖೆಯಿಂದ 5,000 ಕೆಎಫ್‌ಡಿ ಲಸಿಕೆ ಪೂರೈಕೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಈವರೆಗೂ ಲಸಿಕೆ ಸರಬರಾಜು ಮಾಡಿಲ್ಲ. ವಾರದೊಳಗೆ ಪೂರೈಕೆಯಾಗುವ ಸಾಧ್ಯತೆಯಿದೆ. ಬಂದ ಕೂಡಲೇ ಲಸಿಕೆ ನೀಡಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾ.10ರಂದು ದೇಶಾದ್ಯಂತೆ ಪೋಲಿಯೊ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಂಡಿದ್ದು ಕೊಪ್ಪದಲ್ಲಿಯೂ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು. ಸಾರ್ವಜನಿಕ ಆಸ್ಪತ್ರೆ, ಬಸ್‌ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಶಾಲೆಗಳಲ್ಲಿ ಲಸಿಕೆ ನೀಡಲಾಗುವುದು, ಅಭಿಯಾನ ಶೇ.100ರಷ್ಟು ಯಶಸ್ವಿಯಾಗಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ತಾಲೂಕಿನಾದ್ಯಂತ ಅಲ್ಲಲ್ಲಿ ಕಾಡ್ಗಿಚ್ಚು ಹರಡುತ್ತಿದ್ದು ಅರಣ್ಯ ಇಲಾಖೆ ಯಾವ ಕ್ರಮ ತೆಗೆದುಕೊಂಡಿದೆ ಎಂದು ಸದಸ್ಯ ಬಿ. ಸುಧಾಕರ್ ಪ್ರಶ್ನಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಉತ್ತರಿಸಿ ತಾಲೂಕಿನ ಗುಂಡಕಿ, ಕೆಸವೆ ಮತ್ತು ಸಿಗದಾಳು ಬಳಿ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಕಾಡಿಗೆ ಹೋದಾಗ ಉದ್ದೇಶಪೂರ್ವಕವಾಗಿ ಬೆಂಕಿ ಕೊಡುತ್ತಾರೆ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿ ಪತ್ತೆ ಕಾರ್ಯ ನಡೆಯುತ್ತಿದೆ. ಉಳಿದಂತೆ ಕಾಡು ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಫಾರಂ 50, 53 ಅಡಿ ಹಕ್ಕುಪತ್ರ ವಿತರಣೆ ಮಾಡುವಾಗ ಫಲಾನುಭವಿಗಳ ಜೇಷ್ಠತಾ ಪಟ್ಟಿ ಪಾಲನೆ ಮಾಡುತ್ತಿಲ್ಲ. ಇದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಉಪಾಧ್ಯಕ್ಷೆ ಜೆ.ಎಸ್.ಲಲಿತಾ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎರ್ರಿಸ್ವಾಮಿ, ಹಕ್ಕು ಪತ್ರ ವಿತರಣೆಯಲ್ಲಿ ಲೋಪವಾಗಿದ್ದರೆ ಸರಿಪಡಿಸಲಾಗುವುದು. ಅಕ್ರಮವಾಗಿದ್ದರೆ ಆ ಬಗ್ಗೆ ಮಾಹಿತಿ ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ತಿಂಗಳಿಗೊಮ್ಮೆ ಹೋಬಳಿ ಕೇಂದ್ರಗಳಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಉಳಿದಂತೆ ಶಿಕ್ಷಣ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಬಿಸಿಎಂ, ಸಹಕಾರ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾಪಂ ಸದಸ್ಯರಾದ ಮಧುರಾ ಶಾಂತಪ್ಪ, ಭವಾನಿ ಆರ್. ಹೆಬ್ಬಾರ್, ಎಚ್.ಎಸ್. ಪ್ರವೀಣ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News