ರೈತರಿಗೆ 3.50 ರೂ. ನೀಡುವ ಮೋದಿ ಉದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ: ರಾಹುಲ್ ಗಾಂಧಿ

Update: 2019-03-09 09:34 GMT

ಹಾವೇರಿ, ಮಾ.9: ಪ್ರಧಾನಿ ಮೋದಿ ಅವರು ರೈತರಿಗೆ ದಿನಕ್ಕೆ 3.50 ರೂ. ನೀಡುತ್ತಿದ್ದಾರೆ. ಆದರೆ, 15-20 ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ರೈತರಿಗೆ ವಾರ್ಷಿಕ 6000 ರೂ. ನೀಡುವ ಪ್ರಧಾನಿ, ಕಿಸಾನ್‌ ಸಮ್ಮಾನ್‌ ಯೋಜನೆಯು ಬಡ ಕೃಷಿಕರ ಕುರಿತಾಗಿ ಮಾಡಿದ ದೊಡ್ಡ ಅಪಹಾಸ್ಯ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾವೇರಿಯಲ್ಲಿಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ದಿನಗಣನೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1934 ರಲ್ಲಿ ಮಹಾತ್ಮಗಾಂಧೀ ಭೇಟಿ ಸೇರಿದಂತೆ ಸ್ವಾತಂತ್ರ್ಯ ಚಳವಳಿ, ಅಹಿಂದ ಚಳವಳಿಯಂತಹ ಅನೇಕ ಘಟನೆಗಳಿಗೆ ಸಾಕ್ಷಿಯಾಗಿರುವ ಹಾಗೂ ಬಿಜೆಪಿ ಪಾಳಯವಾದ ಹಾವೇರಿಯಲ್ಲಿ ಕಾಂಗ್ರೆಸ್ ನ ಅಧ್ಯಕ್ಷರು ಮೊದಲ ಬಾರಿಗೆ ಬಹಿರಂಗ ಸಭೆಯ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಮಹಿಳಾ ಮೀಸಲು ವಿಧೇಯಕ ಜಾರಿ ಭರವಸೆ: ಹಾವೇರಿಯಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಕುರಿತು ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, 9 ವರ್ಷಗಳಿಂದ ಸಂಸತ್ತಿನಲ್ಲಿ ನನೆಗುದಿಗೆ ಬಿದ್ದಿರುವ 'ಮಹಿಳಾ ಮೀಸಲು ವಿಧೇಯಕ'ಕ್ಕೆ ಅನುಮೋದನೆ ದೊರೆಯುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಆ ಮೂಲಕ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು ಕಲ್ಪಿಸುವ ಆಶ್ವಾಸನೆ ನೀಡಿದರು.

ಕಾರ್ಯಕ್ರಮದಲ್ಲಿ ಲೋಕಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವೀರಪ್ಪಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್,  ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದ ಕೆ.ಎಚ್. ಮುನಿಯಪ್ಪ, ಉಸ್ತುವಾರಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News