ಆರ್ಥಿಕ ಸಮತೋಲನಕ್ಕೆ ಕೃಷಿ ಸಹಕಾರಿ: ಡಾ. ತ್ರಿಲೋಚನ ಮಹಾಪಾತ್ರ

Update: 2019-03-09 18:54 GMT

ಶಿವಮೊಗ್ಗ, ಮಾ. 9: ದೇಶದ ಆರ್ಥಿಕ ಸ್ಥಿತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಕೃಷಿಕ್ಷೇತ್ರ ಅತ್ಯಂತ ಸಹಕಾರಿಯಾಗಿದೆ ಎಂದು ದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಮಹಾನಿರ್ದೇಶಕ ಡಾ. ತ್ರಿಲೋಚನ ಮಹಾಪಾತ್ರ ತಿಳಿಸಿದ್ದಾರೆ. 

ಶನಿವಾರ ನಗರದ ಹೊರವಲಯ ನವುಲೆ ಸಮೀಪದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ಏರ್ಪಡಿಸಿದ್ದ 4ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾತನಾಡಿದರು. ಈ ಹಿಂದೆ ಕೃಷಿ ಕ್ಷೇತ್ರ ಲಾಭದಾಯಕವಲ್ಲ. ಇದ ರಿಂದಾಗಿ ದೇಶದ ಭವಿಷ್ಯದ ದಿನಗಳು ಆತಂಕಕರವಾಗಿವೆ ಎಂಬ ಅಭಿಪ್ರಾಯ ಜನಜನಿತವಾಗಿತ್ತು. ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಆಗಿರಬಹುದಾದ ಅಸಾಧಾರಣ ಸಾಧನೆಗಳಿಂದಾಗಿ ಈ ಸಂಶಯ ಇನ್ನಿಲ್ಲವಾಗಿದೆ. ಮಾತ್ರವಲ್ಲ ದೇಶದ ಆರ್ಥಿಕ ಸ್ಥಿತಿಗತಿಗಳ ಸಮತೋಲನಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ದೇಶ ಆಹಾರ ಭದ್ರತೆಯಲ್ಲಿ ಸ್ವಾಮ್ಯತೆ ಸಾಧಿಸಿದೆ ಎಂಬುದು ಸತ್ಯ. ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ಸಾಧನೆ ಅಗಾಧವಾದುದು. ಈ ಸಂಶೋಧನಾ ಚಟುವಟಿಕೆಗಳು ದೇಶದ ಆಹಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಕಾಲಕಾಲಕ್ಕೆ ಕೃಷಿ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರಿಂದ ದೇಶದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ತಂತ್ರಜ್ಞಾನಾಧಾರಿತ ವಿಷಯಗಳ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕೆಂದು ಹೇಳಿದರು.

ಕೃಷಿ ಕ್ಷೇತ್ರದ ವಿಕಾಸಕ್ಕೆ ಸವಾಲಾಗಿ ಪರಿಣಮಿಸಬಹುದಾದ ತಾಪಮಾನ, ಹವಾಮಾನ ಬದಲಾವಣೆ, ನೀರಿನ ಲಭ್ಯತೆ, ಬರ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಪರ್ಯಾಯವಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚಿಂತಿಸಬೇಕು. ಕಡಿಮೆ ನೀರು ಬಳಸಿ ಬೆಳೆಯುವ ಪೌಷ್ಠಿಕಾಂಶಯುಕ್ತ ಬೆಳೆಗಳ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು. ರಾಜ್ಯ ಸರಕಾರವು ಹೈನುಗಾರಿಕೆಗೆ ಉತ್ತೇಜನ ನೀಡಿದ್ದರಿಂದಾಗಿ ಹಾಗೂ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳಿಂದಾಗಿ ಹೈನು ಉತ್ಪಾದನೆಯಲ್ಲಿ ರಾಜ್ಯದ ಸಾಧನೆ ಅಸಾಧಾರಣವಾದುದಾಗಿದೆ. ಕಡಿಮೆ ನೀರು ಮತ್ತು ಎಲ್ಲಾ ಕಾಲಮಾನಗಳಲ್ಲಿ ಬೆಳೆಯಬಹುದಾದ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳ ಬೆಳೆಗೆ ಉತ್ತೇಜನದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲುದ ಕುಲಪತಿ ಡಾ.ಎಂ.ಕೆ.ನಾಯಕ್ ಸ್ವಾಗತಿಸಿ ವಿವಿಯ ವರದಿ ವಾಚನ ಮಾಡಿದರು. ಈ ಸಂದರ್ಭದಲ್ಲಿ ವಿವಿಯ ಸಹಕುಲಾಧಿಪತಿ ಹಾಗೂ ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ವಿವಿಯ ವ್ಯವಸ್ಥಾಪನಾ ಮಂಡಳಿಯ ನಿರ್ದೇಶಕರು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಪ್ರತಿಭಾವಂತ 22 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿದ್ಯಾಶ್ರೀ ಎಸ್. 4, ಆಶ್ರಿತಾ ಕೆ.ಎನ್., ಮೇಘನಾ ಎನ್., ಚಂದನ್ ಜೆ.ಎಸ್., ರಾಣಿ ಜಯದುರ್ಗ ನಾಯಕ್, ದಯಾನಂದ ಪಾಟೀಲ ತಲಾ 2 ಚಿನ್ನದ ಪದಕ ಪಡೆದರು.

ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ನಡೆಯುವ ಸಂಶೋಧನಾ ಚಟುವಟಿಕೆಗಳು ರೈತರ ಹೊಲ ಗಳವರೆಗೆ ವಿಸ್ತಾರಗೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ಲಾಭದಾಯಕ ಉದ್ಯಮವಾಗಬೇಕು. ಕೃಷಿಕರು ಆರ್ಥಿಕವಾಗಿ ಬಲಿಷ್ಠರಾಗಬೇಕು. ಕೃಷಿಯಲ್ಲಿನ ಲಾಭ ದ್ವಿಗುಣಗೊಳ್ಳಬೇಕು. ಇದರಿಂದಾಗಿ ವಿಮುಖರಾಗಿರುವ ಬಹುಸಂಖ್ಯಾತರು ಕೃಷಿಯತ್ತ ಮರಳಿ ಬರುವ ಸಾಧ್ಯತೆಯಿದೆ.
-ಡಾ. ತ್ರಿಲೋಚನ ಮಹಾಪಾತ್ರ, ಮಹಾನಿರ್ದೇಶಕ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ದಿಲ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News