ಲೋಕಸಭಾ ಚುನಾವಣೆ: ಶೇಕಡ 33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಿಟ್ಟ ಬಿಜೆಡಿ

Update: 2019-03-11 04:14 GMT

ಭುವನೇಶ್ವರ, ಮಾ.11: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಶೇಕಡ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೂ ಬಿಜೆಡಿ ಪಾತ್ರವಾಗಿದೆ. ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ಗಂಟೆಗಳ ಮುನ್ನ ಪಟ್ನಾಯಕ್ ಈ ಹೇಳಿಕೆ ನೀಡಿದ್ದು, ಈ ನಿರ್ಧಾರ ಮಹಿಳಾ ಮತಗಳನ್ನು ಪಕ್ಷಕ್ಕೆ ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದ 21 ಲೋಕಸಭಾ ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಮಹಿಳೆಯರನ್ನು ತಮ್ಮ ಪಕ್ಷ ಕಣಕ್ಕೆ ಇಳಿಸಲಿದೆ ಎಂದು ಪಟ್ನಾಯಕ್ ಪ್ರಕಟಿಸಿದರು.

"ಮುಂಬರುವ ಚುನಾವಣೆಯಲ್ಲಿ ಒಡಿಶಾ ಸಂಸತ್ತಿಗೆ ಶೇಕಡ 33ರಷ್ಟು ಮಹಿಳಾ ಪ್ರತಿನಿಧಿಗಳನ್ನು ಚುನಾಯಿಸಲಿದೆ" ಎಂದು ಕೇಂದ್ರಪಾದದಲ್ಲಿ ನಡೆದ ಮಹಿಳಾ ಸ್ವಸಹಾಯ ಗುಂಪುಗಳ ಸಮಾವೇಶದಲ್ಲಿ ಘೋಷಿಸಿದರು.

ಕಳೆದ ಎರಡು ದಶಕಗಳಲ್ಲಿ ಒಡಿಶಾದಲ್ಲಿ ಬಿಜೆಡಿ ಯಶಸ್ಸಿನಲ್ಲಿ ಮಹಿಳಾ ಮತದಾರರ ಪಾತ್ರ ಮಹತ್ವದ್ದಾಗಿದ್ದು, ರಾಜ್ಯದ 3.18 ಕೋಟಿ ಮತದಾರರ ಪೈಕಿ 1.54 ಕೋಟಿ ಮಹಿಳೆಯರಿದ್ದಾರೆ. 2014ರಲ್ಲಿ ಪಕ್ಷ ಜಗಪುರ ಮತ್ತು ಕಿಯೋಂಜರ್ ಲೋಕಸಭಾ ಕ್ಷೇತ್ರಗಳಿಂದ ಮಹಿಳೆಯರನ್ನು ಕಣಕ್ಕೆ ಇಳಿಸಿತ್ತು. ಬಳಿಕ ಕಂಧಮಾಲ್ ಉಪಚುನಾವಣೆಯಲ್ಲೂ ಮಹಿಳಾ ಅಭ್ಯರ್ಥಿ ಪಕ್ಷದಿಂದ ಜಯ ಗಳಿಸಿದ್ದರು.

ಇದು ದೇಶದ ಮಹಿಳಾ ಸಬಲೀಕರಣದಲ್ಲಿ ಇತಿಹಾಸ ಸೃಷ್ಟಿಸಲಿದ್ದು, ಇಡೀ ದೇಶಕ್ಕೆ ಒಡಿಶಾ ಮಹಿಳೆಯರು ಮಾರ್ಗದರ್ಶಿಗಳಾಗಲಿದ್ದಾರೆ ಎಂದು ಪಟ್ನಾಯಕ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News