ದೇಶಭಕ್ತಿ ಒಂದು ಪಕ್ಷಕ್ಕೆ ಸೇರಿದ್ದಲ್ಲ: ಶಿವಸೇನೆ

Update: 2019-03-11 09:29 GMT

ಮುಂಬೈ, ಮಾ.11: ದೇಶಭಕ್ತಿ ಎನ್ನುವುದು ಒಂದು ಪಕ್ಷಕ್ಕೆ ಸೇರಿದ್ದಲ್ಲ. ವ್ಯಕ್ತಿಯೊಬ್ಬ ಎದುರಾಳಿ ರಾಜಕೀಯ ಪಕ್ಷದವನೆಂಬ ಕಾರಣಕ್ಕೆ ಆತನನ್ನು ‘ದೇಶ ದ್ರೋಹಿ’ ಎಂದು ಕರೆಯುವುದು ಸರಿಯಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗಿದೆ ಎಂದು ಶಿವಸೇನೆ ಸೋಮವಾರ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ತನ್ನ ಮಿತ್ರಪಕ್ಷವಾಗಿರುವ ಬಿಜೆಪಿಗೆ ಪರೋಕ್ಷವಾಗಿ ಟೀಕಿಸಿದೆ.

 ಭಾರತೀಯ ವಾಯುಸೇನೆ ಪಾಕಿಸ್ತಾನದ ಮೇಲೆ ವಾಯು ದಾಳಿ ನಡೆಸಿದ ಬಳಿಕ ರಾಜಕೀಯ ಪಕ್ಷಗಳು ಇದನ್ನು ರಾಜಕೀರಣಗೊಳಿಸಲು ಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಶಿವಸೇನೆಯ ಅಭಿಪ್ರಾಯ ಮಹತ್ವ ಪಡೆದಿದೆ.

‘‘ದೇಶ ಭಕ್ತಿ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ..ಕಾರ್ಯತಂತ್ರ(ಏರ್‌ಸ್ಟ್ರೈಕ್) ಎನ್ನುವುದು ಸೈನಿಕರ ಕರ್ತವ್ಯದ ಭಾಗವಾಗಿದೆ. ಇದನ್ನು ಹೇಳಿ ಮಾಡಿಸಿದ ಕೆಲಸವಲ್ಲ ಎಂದು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ವಾಯುಸೇನಾ ದಾಳಿಗೆ ಸಾಕ್ಷವನ್ನು ಕೇಳುತ್ತಿರುವವರು ಹಾಗೂ ಸೈನಿಕರ ಜಾಕೆಟ್‌ಗಳನ್ನು ಧರಿಸಿ ಮತ ಕೇಳುವುದು ಕೂಡ ತಪ್ಪು’’ ಎಂದು ದಿಲ್ಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಸೈನಿಕರ ಜಾಕೆಟ್ ಧರಿಸಿದ್ದನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ತನ್ನ ಸಂಪಾದಕೀಯಲ್ಲಿ ತಿಳಿಸಿದೆ.

ಸೈನಿಕರ ಧಿರಿಸು ಧರಿಸಿ ಅವರನ್ನು ಏಕೆ ಅವಮಾನಿಸುತ್ತೀರಿ? ಕಠಿಣ ತರಬೇತಿ ಹಾಗೂ ಕಠಿಣ ಪರಿಶ್ರಮದಿಂದ ಸೈನಿಕರು ತಮ್ಮ ಸಮವಸ್ತ್ರ ಪಡೆದಿರುತ್ತಾರೆ. ಈ ರೀತಿಯ ವರ್ತನೆ, ವಾಯು ದಾಳಿಯನ್ನು ಬಿಜೆಪಿ ರಾಜಕೀರಣಗೊಳಿಸುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಅರೋಪಕ್ಕೆ ಬೆಂಬಲ ನೀಡಿದಂತಾಗುತ್ತದೆ’’ ಎಂದು ಸಾಮ್ನಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News