ವಿದ್ಯಾರ್ಥಿಯ ಕಲಿಕೆಯ ಹಾದಿ

Update: 2019-03-11 18:31 GMT

‘‘ತೆರೆದಷ್ಟೂ ಕಣ್ಣು’’ ಹರ್ಷಿತಾ ಜಿ. ರಾಜು ಅವರು ಬರೆದ ಕಲಿಕೆ ಹಾದಿಯ ಕಥನ. ಮನುಷ್ಯನ ಕಲಿಕೆ ಮುಗಿಯುವುದಿಲ್ಲ. ಆತ ಪ್ರತಿ ದಿನ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಇರುತ್ತಾನೆ. ಹಾಗೆ ನೋಡಿದರೆ ಶಾಲೆಯಲ್ಲಿ ಕಲಿತಿರುವುದಕ್ಕಿಂತ ಶಾಲೆಯ ಹೊರಗಿನ ಜಗತ್ತಲ್ಲಿ ಕಲಿಯುವುದೇ ಹೆಚ್ಚು. ಈ ಕೃತಿಯಲ್ಲಿ, ತನ್ನ ಶಾಲೆಯೂ ಸೇರಿದಂತೆ ತನ್ನ ಬದುಕಿನ ಕಲಿಕೆಯ ಹಾದಿಯನ್ನು ಲೇಖಕಿ ತೆರೆದಿಟ್ಟಿದ್ದಾರೆ. ಮುಖ್ಯವಾಗಿ ತನ್ನ ಶಾಲೆ ಮತ್ತು ಕಾಲೇಜುಗಳ ಬದುಕನ್ನು ಅವರು ಸಂಗ್ರಹಿಸಿಕೊಟ್ಟಿದ್ದಾರೆ.

ತನ್ನ ಶಾಲಾ ಕಾಲೇಜುಗಳ ಅನುಭವದ ಗಣಿಯನ್ನೇ ಕಟ್ಟಿಕೊಂಡು ನಾವೆಲ್ಲ ಓಡಾಡುತ್ತಿದ್ದೇವೆ. ಲೇಖಕಿ ಅವೆಲ್ಲವನ್ನು ಈ ಕೃತಿಯಲ್ಲಿ ಒಟ್ಟು ಗೂಡಿಸಿದ್ದಾರೆ. ಒಬ್ಬ ವಿದ್ಯಾರ್ಥಿಯ ಮಾನಸಿಕ ತುಮುಲಗಳನ್ನು ಈ ಕೃತಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ. ಮುನ್ನುಡಿಯಲ್ಲಿ ಡಾ. ಜಯಶ್ರೀ ಸಿ. ಕಂಬಾರ ಅವರು ಹೇಳುವಂತೆ ‘‘ಇದು ಕಲಿಕೆಯ ಹಾದಿಯಾದರೂ ಬಹುನಿಟ್ಟಿನಲ್ಲಿ ಅರ್ಥೈಸಿಕೊಳ್ಳಬಹುದಾದಂತಹ ಪುಸ್ತಕ’’

 ಪುಸ್ತಕದ ಆರಂಭದಲ್ಲಿ ಬಾಲ್ಯದ ದಿನಗಳನ್ನು ಹಂಚಿಕೊಳ್ಳುವ ಲೇಖಕಿ, ಬಳಿಕ ಪ್ರಾಥಮಿಕ ಶಿಕ್ಷಣ, ಆ ಸಂದರ್ಭದ ವಿದ್ಯಾರ್ಥಿಗಳ ಜಗತ್ತು, ಸಣ್ಣ ಸಣ್ಣ ಖುಷಿಗಳನ್ನು ಬರೆಯುತ್ತಾರೆ. ವಿದ್ಯಾರ್ಥಿಗಳು ಬೆಳೆಯುತ್ತಾ ಹೋದಂತೆ ಅವರ ಆಲೋಚನಾ ಕ್ರಮಗಳಲ್ಲಿ ಆಗುವ ಬದಲಾವಣೆಗಳನ್ನೂ ಇಲ್ಲಿ ನಾವು ಕಾಣಬಹುದು. ಪ್ರೌಢ ಶಾಲೆ, ಕಾಲೇಜು, ಪದವಿ, ಸ್ನಾತಕೋತ್ತರ, ಅಂತಿಮವಾಗಿ ಸಂಶೋಧನೆಯವರೆಗಿನ ಹಾದಿಯ ಅನುಭವಗಳನ್ನು ಲೇಖಕಿ ದಾಖಲಿಸಿದ್ದಾರೆ. ಇದು ಪ್ರಬಂಧ ರೀತಿಯ ಆತ್ಮಕಥನವೂ ಹೌದು. ಲೇಖಕಿಯ ಅನುಭವ ಇತರ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ತಜ್ಞರಿಗೆ ನೆರವಾಗಬಹುದು. ಒಬ್ಬ ವಿದ್ಯಾರ್ಥಿಯ ಒಳಗಿನ ತಳಮಳಗಳನ್ನು ಈ ಕೃತಿಯು ಚೆನ್ನಾಗಿ ಕಟ್ಟಿಕೊಟ್ಟಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಇರುವ ರಾಜಕೀಯಗಳನ್ನು ಅಂಜದೆಯೇ ಲೇಖಕಿ ದಾಖಲಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿರುವ ಈ ಕೃತಿಯ ಒಟ್ಟು ಪುಟಗಳು 160. ಮುಖಬೆಲೆ 125 ರೂಪಾಯಿ. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News